ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮುದಗಲ್; ವೀರಶೈವ ರುದ್ರಭೂಮಿ ಅತಿಕ್ರಮಣ

Vishwanath S
Updated On : 15 Feb 2014, 1:06 am

ಮುದಗಲ್: ಪಟ್ಟಣದ ವೀರಶೈವ ಸಮಾಜಕ್ಕೆ ಸೇರಿದ ರುದ್ರಭೂಮಿಯನ್ನು ನೀಲಕಂಠಯ್ಯ ಎಂಬವರು ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಅತಿಕ್ರಮಿಸಿಕೊಂಡಿರುವುದನ್ನು ಪರಿಶೀಲಿಸಿದ ವೀರಶೈವ ಸಮಾಜದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಹೊರ ವಲಯದಲ್ಲಿರುವ ಸರ್ವೆ ನಂ.464ರಲ್ಲಿ ಕಳೆದ 7 ದಶಕಗಳಿಂದ ವೀರಶೈವ ಸಮಾಜದವರು ಮೃತಪಟ್ಟರೆ ಇಲ್ಲಿಯೇ ಶವಸಂಸ್ಕಾರ ಮಾಡುತ್ತಾರೆ. ಆದರೆ ನೀಲಕಂಠಯ್ಯ ಅವರು ಈ ಜಮೀನಿಗೆ ಸಂಬಂಧಿಸಿ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಈಗ ಕಾನೂನು ಸಮರಕ್ಕೆ ಮುಂದಾಗಿರುವುದು ಸಮಾಜದ ಕೆಂಗಣ್ಣಿಗೆ ಗುರಿಯಾಗಿದೆ.
ಹಿನ್ನೆಲೆ: ಪ್ರಸ್ತುತ ಈ ಜಮೀನು ಮೈಸೂರು ಮಹಾಂತಸ್ವಾಮಿಗಳ ಕುದರಿ ಮೋತಿಯವರಿಗೆ ಸೇರಿದ್ದಾಗಿದ್ದು, ಸುಮಾರು 70 ವರ್ಷಗಳ ಹಿಂದೆ ಮಹಾಂತಸ್ವಾಮಿಗಳು ಕುದರಿ ಮೋತಿಯವರು ಇಲ್ಲಿ ಅನುಷ್ಠಾನಕ್ಕೆ ಕುಳಿತಿದ್ದರು ಎನ್ನುವುದಕ್ಕೆ ದಾಖಲೆಗಳಿವೆ ಎಂದು ಸ್ವಾತಂತ್ರ್ಯ ಹೋರಾಟಗಾರ ನೀಲಕಂಠಪ್ಪ ಸುಂಕದ್ ಹೇಳುತ್ತಾರೆ.
ಸ್ಮಶಾನ ಜಾಗ ಅತಿಕ್ರಮಿಸಿದ ನೀಲಕಂಠಯ್ಯ ಸ್ವಾಮಿ ಮುದಗಲ್‌ನವರಲ್ಲ, ಜನತಾಪುರದವರು. ಇಲ್ಲಿ ಸ್ವಾಮಿಗಳು ಯಾರೂ ಇಲ್ಲದ ಕಾರಣ ಗ್ರಾಮದ ಕೆಲವರು ನೀಲಕಂಠಯ್ಯನವರ ತಂದೆ ಗುರುಶಾಂತಯ್ಯನವರನ್ನು ಕರೆದುಕೊಂಡು ಬರಲಾಯಿತು ಎಂದು ತಿಳಿಸಿದರು.
ಖೊಟ್ಟಿ ದಾಖಲೆ: ಮೈಸೂರು ಮಹಾಂತ ಸ್ವಾಮಿಗಳ ಪೂರ್ವಜರು ಈ ಜಮೀನನ್ನು ವೀರಶೈವ ಸಮಾಜದ ರುದ್ರಭೂಮಿಗೆಂದು ಬಿಟ್ಟುಕೊಟ್ಟಿದ್ದು, ಕಳೆದ 70 ವರ್ಷಗಳಿಂದ ಇಲ್ಲಿಯೇ ಶವಸಂಸ್ಕಾರ ಮಾಡಲಾಗುತ್ತದೆ. ಆದರೆ ನೀಲಕಂಠಯ್ಯ ಅವರು ಸರ್ಕಾರ ತಮಗೆ 1976ರಲ್ಲಿ ಟೆನೆಂಟ್‌ನಲ್ಲಿ ಈ ಭೂಮಿ ನೀಡಿದೆ ಎಂದು ಖೊಟ್ಟಿದಾಖಲೆ ಸೃಷ್ಟಿಸಿದ್ದಾರೆ. 1973ರಲ್ಲಿ ನೀಲಕಂಠಯ್ಯ ಸರ್ಕಾರಿ ನೌಕರನಾಗಿದ್ದರಿಂದ ಅವರಿಗೆ ಟೆನೆಂಟ್ ಆಗಲು ಸಾಧ್ಯವೇ ಎಂದು ಸಮಾಜದ ಮುಖಂಡರು ಪ್ರಶ್ನಿಸಿದ್ದಾರೆ.
ಸಮಾಧಿ ನೆಲಸಮ: ಸ್ಮಶಾನ ಜಾಗವನ್ನು ಅತಿಕ್ರಮಿಸಿಕೊಂಡು ಅಲ್ಲಿದ್ದ ಅನೇಕ ಸಮಾಧಿಗಳನ್ನು ನೆಲಸಮಗೊಳಿಸಿ, ಗದ್ದುಗೆಗಳನ್ನು ಕಿತ್ತಿಹಾಕಿದ್ದು ಅಲ್ಲದೆ ಸ್ಮಶಾನಕ್ಕೆ ಹೋಗುವ ರಸ್ತೆಯನ್ನು ಬಂದ್ ಮಾಡಿರುವ ವಿಷಯ ತಿಳಿದು ಸ್ಮಶಾನ ಸ್ಥಳಕ್ಕೆ ಧಾವಿಸಿದ ವೀರಶೈವ ಮುಖಂಡರು ಅಲ್ಲಿ ನೆಡಲಾಗಿದ್ದ ನಾಮಫಲಕವನ್ನು ಕಿತ್ತು ಹಾಕಿದ್ದಾರೆ. ಪಟ್ಟಣದಲ್ಲಿ ವೀರಶೈವ ಸಮಾಜಕ್ಕೆ ಇರುವ ಏಕೈಕ ಸ್ಮಶಾನ ಇದಾಗಿದ್ದು, ಇದನ್ನು ಅತಿಕ್ರಮ ಮಾಡಿದರೆ ಸಮಾಜದವರ ಶವಗಳ ಸಂಸ್ಕಾರ ಮಾಡೋದೆಲ್ಲಿ ಎಂದು ಹರಿಹಾಯ್ದರು.
ಎಲ್ಲ ಬಾಂಧವರು ವಂತಿಗೆ ಹಣ ನೀಡಿ ಈ ಸ್ಮಶಾನದ ರಸ್ತೆ ದುರಸ್ತಿಗೊಳಿಸಿದ್ದಾರೆ. ಈಗ ಏಕಾಏಕಿ ನೀಲಕಂಠಯ್ಯ ಸಮಾಧಿಗಳನ್ನು ನೆಲಸಮಗೊಳಿಸಿ ರಸ್ತೆ ಬಂದ್ ಮಾಡಿರುವುದು ಸಮಾಜದವರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಸಹಾಯಕ ಆಯುಕ್ತರನ್ನು ಭೇಟಿ ಮಾಡಿ ಸ್ಮಶಾನ ಜಾಗ ಅತಿಕ್ರಮಿಸಿಕೊಂಡಿರುವ ನೀಲಕಂಠಯ್ಯನವರ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಮುಖಂಡರಾದ ಸುರೇಂದ್ರಗೌಡ ಪಾಟೀಲ್, ಚನ್ನಬಸನಗೌಡ ಕನ್ನಾಳ, ಮಹಾಂತೇಶ ಪಾಟೀಲ್, ಶಿವಪ್ಪ ಸುಂಕದ್, ಸಿದ್ದನಗೌಡ ಪೋ.ಪಾ, ಚಂದ್ರಶೇಖರ ಗಂಗಾವತಿ, ಶಶಿಧರ ಕಂಚಿಮಠ ಮುಂತಾದವರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement