ವಿದ್ಯುತ್ ಕಾಮಗಾರಿಯಲ್ಲಿ ಅಕ್ರಮ; ಒಬ್ಬನ ಬಂಧನ
ರಾಯಚೂರು: ಸ್ಥಳೀಯ ನಗರಸಭೆಯಲ್ಲಿ ತಡೆರಹಿತ ವಿದ್ಯುತ್ ಕಾಮಗಾರಿ ಜಾರಿಗೆ ಸಂಬಂಧಿಸಿ ನಡೆದಿದ್ದ ಅಕ್ರಮದ ಹಿನ್ನೆಲೆ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆಗೆ ಸಂಬಂಧಿಸಿ ಜೆಸ್ಕಾಂನ ಎಂಜಿನಿಯರ್‌ರೊಬ್ಬರನ್ನು ಪೊಲೀಸರು ಗುರುವಾರ ರಾತ್ರಿ ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೆಂದು ಆರೋಪಿಸಿರುವ ಇನ್ನುಳಿದ 6 ಜನ ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ಆರಂಭಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಬಂಧಿತ ಜೆಸ್ಕಾಂ ಎಇಇ ವಿವೇಕಾನಂದ ಕೋಟೆ ಎಂದು ಗುರುತಿಸಲಾಗಿದೆ. ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದ್ದು, ಇನ್ನುಳಿದ 6 ಜನ ಆರೋಪಿಗಳಾದ ನಗರಸಭೆಯ ಹಿಂದಿನ ಎಂಜಿನಿಯರ್‌ಗಳಾದ ಮೋಹನರಾಜ್, ಶ್ರೀನಿವಾಸ, ಜೆಸ್ಕಾಂ ಟೆಕ್ನಿಕಲ್ ಅಡಿಟ್ ಆ್ಯಂಡ್ ಕ್ವಾಲಿಟಿ ಕಂಟ್ರೋಲ್ ವಿಭಾಗ ಬಳ್ಳಾರಿಯ ಎಇಇ ಸಂಜೀವಕುಮಾರ, ಅಂದಿನ ಪ್ರಭಾರಿ ಉಪ ವಿದ್ಯುತ್ ಪರಿವೀಕ್ಷಕ ಭೀಮಾಶಂಕರ, ಎಡಿಸಿ ಎಂ. ತಿಮ್ಮಪ್ಪ ಹಾಗೂ ವೆಂಕಟೇಶ್ವರ ಟ್ರೇಡರ್ಸ್‌ನ ಗುತ್ತಿಗೆದಾರ ರಮಣರೆಡ್ಡಿ ಅವರ ಬಂಧನಕ್ಕೆ ಶೋಧಕಾರ್ಯ ನಡೆದಿದೆ. ನಗರಸಭೆಯು ನಗರದ ಜನತೆಗೆ ಸಮರ್ಪಕ ಕುಡಿಯುವ ನೀರೊದಗಿಸುವ ಉದ್ದೇಶದಿಂದ ತಡೆರಹಿತ ವಿದ್ಯುತ್ ಮಾರ್ಗ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿತ್ತು.
ಒಟ್ಟು 63 ಲಕ್ಷ ಮೊತ್ತದ ಕಾಮಗಾರಿ ಪೈಕಿ ಕೇವಲ 10 ಲಕ್ಷ ಮೊತ್ತದ ಕಾಮಗಾರಿ ಕೈಗೊಂಡಿದ್ದರೂ ನಗರಸಭೆಯಿಂದ ಆಗಿನ ಪೌರಾಯುಕ್ತರು ಕಾಮಗಾರಿಗೆ ನಿಗದಿ ಮಾಡಿದ್ದ ಪೂರ್ತಿ ಹಣವನ್ನು ಗುತ್ತಿಗೆ ಪಡೆದ ಕಂಪನಿಗೆ ಪಾವತಿಸಿ ಅಕ್ರಮ ಎಸಗಿದ್ದಾರೆಂದು ವಿವಿಧ ಸಂಘಟನೆಗಳು ಆರೋಪಿಸಿ ಹೋರಾಟಕ್ಕಿಳಿದಿದ್ದವು.
ಈ ಬಗ್ಗೆ ಸಹಾಯಕ ಆಯುಕ್ತರಾಗಿದ್ದ ಮಂಜುಶ್ರೀ ಅವರು ತನಿಖಾ ವರದಿ ಸಲ್ಲಿಸಿದ್ದು ಅದರಲ್ಲಿ ಒಟ್ಟು 7 ಜನರ ವಿರುದ್ಧ ಅಕ್ರಮದಲ್ಲಿ ಶಾಮೀಲಾಗಿರುವ ಆರೋಪ ಹೊರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಆದೇಶದ ಮೇರೆಗೆ ಪೌರಾಯುಕ್ತ ಬಸಪ್ಪ ಅವರು ಅಪರ ಜಿಲ್ಲಾಧಿಕಾರಿ ಎಂ. ತಿಮ್ಮಪ್ಪ ಸೇರಿದಂತೆ 7 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಪ್ರಕರಣದ ತನಿಖೆಯಾರಂಭಿಸಿರುವ ಪೊಲೀಸರು ಗುರುವಾರ ರಾತ್ರಿ ಅಕ್ರಮದಲ್ಲಿ ಶಾಮೀಲಾಗಿದ್ದಾರೆಂಬ ಆರೋಪಿಸಿರುವ ಜೆಸ್ಕಾಂ ಎಇಇ ವಿವೇಕಾನಂದ ಕೋಟೆ ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಎಡಿಸಿ ತಿಮ್ಮಪ್ಪ ಸೇರಿದಂತೆ ಇನ್ನುಳಿದ 6 ಜನ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆಂದು ಮೂಲಗಳು ತಿಳಿಸಿವೆ.