ಸರ್ವೇ ಜನಾಃ ಸುಖಿನೋ ಭವಂತು
ಕ.ಪ್ರ. ವಾರ್ತೆ , ರಾಯಚೂರು , ಫೆ.14
ಹಿಂದುಳಿದ ತಾಲೂಕು ದೇವದುರ್ಗ ಸೇರಿದಂತೆ ಜಿಲ್ಲೆಯ ವಿವಿಧೆಡೆ ವಾಸವಾಗಿರುವ ಬಂಜಾರಾ ಸಮುದಾಯದವರಿಗೆ ಅಭಿವೃದ್ಧಿ ನಿಗಮದ ಕೊಡುಗೆ. ಒಪೆಕ್ ಆಸ್ಪತ್ರೆ ಪೂರ್ಣ ಪ್ರಮಾಣದ ಪುನಾರಂಭಕ್ಕೆ ನೆರವಿನ ಪ್ರಸ್ತಾಪವಿಲ್ಲ. ಆರ್ಸೆನಿಕ್‌ಯುಕ್ತ ಸಮಸ್ಯಾತ್ಮಕ ಗ್ರಾಮಗಳಿಗೆ ಶುದ್ಧ ಕುಡಿವ ನೀರು ದೊರೆಯುವ ನಿರೀಕ್ಷೆ...
- ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಗೆ ಸಂಬಂಧಿಸಿದ ಪ್ರಮುಖಾಂಶಗಳಿವು.
ನಗರದಲ್ಲಿರುವ ರಾಜೀವ್‌ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಒಂದೂವರೆ ವರ್ಷದ ನಂತರದಲ್ಲಿ ಕಳೆದ ನವೆಂಬರ್‌ನಲ್ಲಷ್ಟೇ ಪುನಾರಂಭಗೊಂಡಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿಲ್ಲ. ಪ್ರಸಕ್ತ ಬಜೆಟ್‌ನಲ್ಲಿ ಬಡವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಆಸ್ಪತ್ರೆಗ ಅಗತ್ಯ ಅನುದಾನ ಒದಗಿಸುವತ್ತ ಸಿಎಂ ಸಿದ್ದರಾಮಯ್ಯ ಕಾಳಜಿ ಪ್ರದರ್ಶಿಸಿಲ್ಲ.
ಜಿಲ್ಲೆಗೆ ಜನತೆಗೆ ಬೇಸರ: ಆದರೆ ಅವರು ರಾಜ್ಯದ ಇನ್ನಿತರೆ ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಕ್ಕೆ ಅನುದಾನ ಒದಗಿಸಿದ್ದಾರೆ. ಗುಲ್ಬರ್ಗದಲ್ಲಿ ಈಚೆಗಷ್ಟೇ ಇಎಸ್‌ಐ ಬೃಹತ್ ಆಸ್ಪತ್ರೆ ಆರಂಭಿಸಿದ್ದು, ಅಲ್ಲಿಯೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಕ್ಕೆ ಮನಸ್ಸು ಮಾಡಿರುವುದು ಜಿಲ್ಲೆಯವರಿಗೆ ಬೇಸರ ತಂದಿದೆ.
ಇನ್ನು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಅಶುದ್ಧ, ಆರ್ಸೆನಿಕ್, ಫ್ಲೋರೈಡ್‌ಯುಕ್ತ ನೀರು ಪೂರೈಕೆಯಾಗುತ್ತಿದೆ. ಈಗಾಗಲೇ ಜಿಪಂ.ನಿಂದ ಕೆಲವೆಡೆ ನೀರು ಶುದ್ಧೀಕರಣ ಸ್ಥಾಪಿಸಲಾಗಿದೆ. ಆದರೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಪ್ರಕಟಿಸಿರುವ 1 ಸಾವಿರ ಗ್ರಾಮಗಳಿಗೆ ಶುದ್ಧ ಕುಡಿವ ನೀರು ಪೂರೈಕೆ ಯೋಜನೆ ಹಾಗೂ 77 ಬಹು ಗ್ರಾಮಗಳಿಗೆ ಕುಡಿವ ನೀರೊದಗಿಸುವ ಯೋಜನೆಗಳು ಸೇರಿರುವುದು ಜಿಲ್ಲೆಯ ಗ್ರಾಮೀಣ ಪ್ರದೇಶದವರಲ್ಲಿ ಆಸೆ ಹುಟ್ಟಿಸಿದೆ.
ಇನ್ನು ಜಿಲ್ಲೆಯ ಅನೇಕ ನಗರ, ಪಟ್ಟಣಗಳಲ್ಲಿ 24್ಗ7 ನೀರು ಒದಗಿಸುವ ಎಡಿಬಿ ನೆರವಿನ ಯೋಜನೆಗಳು ನೆನೆಗುದಿಗೆ ಬಿದ್ದಿದ್ದರೆ ಮತ್ತೆ ಕೆಲವೆಡೆ ನಿಧಾನಗತಿಯಲ್ಲಿ ಪ್ರಕ್ರಿಯೆ ಸಾಗಿದೆ. ಬಜೆಟ್‌ನಲ್ಲಿ ಈ ಯೋಜನೆಯ ಜಾರಿ ಸೇರ್ಪಡೆಗೊಂಡಿರುವುದರಿಂದ ಜಿಲ್ಲೆಯ ಜನತೆ ಕಾಮಗಾರಿ ವೇಗಪಡೆಯುತ್ತದೆಂಬ ನಿರೀಕ್ಷೆ ಹೊಂದಿದ್ದಾರೆ.
ಮಡಳಿಗೆ ಕಡಿಮೆ ಮೊತ್ತ: ಇನ್ನು ಹೈ.ಕ. ಭಾಗಕ್ಕೆ ಹೈ.ಕ. ಪ್ರದೇಶಾಭಿವೃದ್ಧಿ ಮಂಡಳಿಗೆ 600 ಕೋಟಿ ಹಾಗೂ ಹೆಚ್ಚುವರಿಯಾಗಿ ಅಭಿವೃದ್ಧಿ ಕಾಮಗಾರಿಗಳಿಗೆ 1,037 ಕೋಟಿ ನಿಗದಿ ಮಾಡಿದ್ದು ಕೊಂಚ ಮಟ್ಟಿಗಿನ ನೆಮ್ಮದಿ ತಂದಿದೆಯಾದರೂ ಕೇಂದ್ರಕ್ಕೆ 10 ಸಾವಿರ ಕೋಟಿ ನೀಡುವಂತೆ ಮನವಿ ಮಾಡಿದ್ದ ಸಿಎಂ ತಾವೇ ಮಂಡಳಿಗೆ ಕಡಿಮೆ ಮೊತ್ತ ನೀಡಿದ್ದಾರೆಂಬ ಅಸಮಾಧಾನ ಇಲ್ಲಿನವರದ್ದಾಗಿದೆ.
ಜಿಲ್ಲೆಯಲ್ಲಿ ಅನೇಕ ಮೊರಾರ್ಜಿ ದೇಸಾಯಿ ವಸತಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬಜೆಟ್‌ನಲ್ಲಿ ಇಂಥ ವಸತಿ ನಿಲಯಗಳಿಗೆ ಕಟ್ಟಡ ನಿರ್ಮಾಣದ ಭಾಗ್ಯ ದೊರಕಿಸಲು ಯತ್ನಿಸಿರುವುದು ವಿದ್ಯಾರ್ಥಿಗಳಿಗೆ ನಿರಾಳತೆ ತಂದಿದೆ.
ಇನ್ನು ರಾಜ್ಯದಲ್ಲಿಯೇ ಹಿಂದುಳಿದ ತಾಲೂಕು ಎಂದು ಕರೆಯಿಸಿಕೊಂಡಿರುವ ದೇವದುರ್ಗ ಸೇರಿ ಜಿಲ್ಲಾದ್ಯಂತ ವಿವಿಧೆಡೆ ಬಂಜಾರಾ ಸಮುದಾಯದವರಿದ್ದಾರೆ. ಅಂಥವರು ವಾಸವಾಗಿರುವ ತಾಂಡಾಗಳ ಸಮಗ್ರ ಅಭಿವೃದ್ಧಿಗೆ ಜಿಲ್ಲೆಯಲ್ಲಿ ಸ್ಥಾಪಿಸಲಾಗುವ ಬಂಜಾರಾ ಅಭಿವೃದ್ಧಿ ನಿಗಮವು ನೆರವಾಗಲಿದೆ ಎಂಬ ಆಶಯ ಬಂಜಾರಾ ಸಮುದಾಯದ್ದಾಗಿದೆ.
ಹೇಳಿದ್ದೇನು, ಮಾಡಿದ್ದೇನು?: ಕೃಷ್ಣಾ ನದಿ ಯೋಜನೆಯ ನೀರಿನ ಸಂಪೂರ್ಣ ಬಳಕೆಗೆ ಪ್ರತಿ ವರ್ಷ 10 ಸಾವಿರ ಕೋಟಿಯಂತೆ 5 ವರ್ಷದಲ್ಲಿ 50,000 ಕೋಟಿ ವೆಚ್ಚ ಮಾಡಲಾಗುತ್ತದೆ ಎಂದಿದ್ದ ಸಿಎಂ ಬಜೆಟ್‌ನಲ್ಲಿ ಹಣ ನಿಗದಿ ಮಾಡಿದ ಮೊತ್ತದ ಬಗ್ಗೆ ಸ್ಪಷ್ಪಪಡಿಸಿಲ್ಲ. ಆದರೆ ನೀರಿನ ಬಳಕೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದಷ್ಟೇ ಹೇಳಿದ್ದಾರೆ.
ಇನ್ನು ಜಿಲ್ಲೆಯಲ್ಲಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿನ ಶಿಕ್ಷಕರ ಕೊರತೆ ನೀಗುವ ಲಕ್ಷಣಗಳು ಬಜೆಟ್ ನಲ್ಲಿ ಕಂಡಿವೆ. ರಾಯಚೂರು ಎಪಿಎಂಸಿಯಲ್ಲಿ ನೂರಾರು ಸಂಖ್ಯೆಯ ಹಮಾಲಿ ಕಾರ್ಮಿಕರಿದ್ದು, ಬಜೆಟ್‌ನಲ್ಲಿ ಪ್ರಸ್ತಾಪಿಸಿರುವ ಕಾಯಕನಿಧಿ 1 ಕೋಟಿ ಪ್ರಯೋಜನ ದೊರೆಯುವ ನಿರೀಕ್ಷೆಯಲ್ಲಿದ್ದಾರೆ.
-ಜಗನ್ನಾಥ ಆರ್. ದೇಸಾಯಿ