ಸಮಸ್ಯೆ ಪರಿಹಾರಕ್ಕೆ ಕೃಷಿ ತಾಂತ್ರಿಕತೆ
ಕ.ಪ್ರ. ವಾರ್ತೆ ್ಣ ರಾಯಚೂರು ್ಣ ಫೆ.15
ಕೃಷಿ ಕ್ಷೇತ್ರವು ಎದುರಿಸುತ್ತಿರುವ ವಿವಿಧ ಸವಾಲುಗಳನ್ನು ಮೀರಿ ರೈತರ ಬದುಕಿನ ಸುಧಾರಣೆ, ಆರ್ಥಿಕಾಭಿವೃದ್ಧಿ ಮತ್ತು ಆಹಾರ ಉತ್ಪಾದನೆ ಪ್ರಮಾಣ ಹೆಚ್ಚಳದಲ್ಲಿ ಕೃಷಿ ತಾಂತ್ರಿಕತೆ ಕೊಡುಗೆ ಪ್ರಮುಖವಾಗಿದೆ ಎಂದು ಭಾರತೀಯ ಕೃಷಿ ಸಮಾಜ ಎಂಜಿನಿಯರ್ಸ್ ಸಂಘದ ಅಧ್ಯಕ್ಷ ಡಾ. ವಿ.ಎಂ. ಮಯಾಂಡೇ ಹೇಳಿದರು.
ಅವರು ಇಲ್ಲಿನ ರಾಯಚೂರು ಕೃಷಿ ವಿವಿ ಪ್ರೇಕ್ಷಾಗೃಹದಲ್ಲಿ ಶನಿವಾರ ಆಯೋಜಿಸಿದ್ದ ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಬೆಳ್ಳಿ ಹಬ್ಬ ಹಾಗೂ ರಾಜ್ಯ ಕೃಷಿ ಎಂಜಿನಿಯರ್ಸ್ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿ, ಕೃಷಿ ತಾಂತ್ರಿಕತೆ ಪ್ರಗತಿಯ ಮೇಲೆಯೇ ಕೃಷಿಯ ಭವಿಷ್ಯ ಅಡಗಿದೆ ಎಂದರು.
ವರ್ಷದಿಂದ ವರ್ಷಕ್ಕೆ ಜಾಗತಿಕ ತಾಪಮಾನದಲ್ಲಿ ಆಗುತ್ತಿರುವ ಬದಲಾವಣೆಗಳು, ಪ್ರಕೃತಿ ಹಾಗೂ ಮಾನವ ನಿರ್ಮಿತ ವಿಕೋಪಗಳಿಂದಾಗಿ ಫಲವತ್ತಾದ ಜಮೀನಿನ ಕೊರತೆ, ಸಮರ್ಪಕ ನೀರು ಮತ್ತಿತರೆ ಸಮಸ್ಯೆಗಳು ಕೃಷಿ ಕ್ಷೇತ್ರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿವೆ ಎಂದರು.
ನಿರಂತರ ಸಂಶೋಧನೆ: ಕೃಷಿ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಮೂಲಕ ರೈತರ ಬದುಕಿನಲ್ಲಿ ಪ್ರಗತಿ ತಂದುಕೊಡುವ ಕಾರ್ಯ ಕೃಷಿ ತಾಂತ್ರಿಕ ಕ್ಷೇತ್ರದಲ್ಲಿರುವವರು ಮಾಡಬೇಕಿದೆ. ಕಡಿಮೆ ನೀರು ಬಳಸಿ ಭೂಮಿಯ ಫಲವತ್ತತೆ ಸಂರಕ್ಷಣೆ ಜತೆಗೆ ಸರಳ ತಂತ್ರಜ್ಞಾನಗಳ ಮೂಲಕ ಉತ್ತಮ ಫಸಲು ಪಡೆಯುವ ನಿಟ್ಟಿನಲ್ಲಿ ಸಂಶೋಧನೆಗಳು ನಿರಂತರ ಸಾಗಿವೆ ಎಂದರು.
ಹೊಸ ತಂತ್ರಜ್ಞಾನದ ಬಗ್ಗೆ ರೈತರಿಗೆ ಮಾಹಿತಿ ನೀಡುವುದರಿಂದ ಕೃಷಿ ತಜ್ಞರು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ಕಷ್ಟಪಟ್ಟು ಆವಿಷ್ಕರಿಸಿದ ವಸ್ತುವಿಗೆ ನಿಜವಾದ ಬೆಲೆ ಲಭ್ಯವಾಗುತ್ತದೆ. ಹೊಸ ಸಂಶೋಧನೆ, ಆವಿಷ್ಕಾರ, ತಂತ್ರಜ್ಞಾನದಿಂದ ಕೃಷಿ ಕ್ಷೇತ್ರದಲ್ಲಿ ಹೊಸ ಪದ್ಧತಿ ಜಾರಿಗೆ ಬರುತ್ತಿದ್ದು, ವಿದ್ಯಾರ್ಥಿಗಳು ಮೂಲ ಕೃಷಿ ಪದ್ಧತಿ ಎಂದಿಗೂ ಮರೆಯುವಂತಿಲ್ಲ ಎಂದು ಎಚ್ಚರಿಸಿದರು.
ಜಮೀನು ಕುಸಿತ: ಹೊಸ ದೆಹಲಿಯ ಎಐಸಿಆರ್ಪಿ ಸಂಸ್ಥೆಯ ಮಾಜಿ ಯೋಜನಾ ಸಮನ್ವಯಾಧಿಕಾರಿ ಡಾ.ಎಸ್. ಸುರೇಂದ್ರ ಸಿಂಗ್ ಮಾತನಾಡಿ, ಹವಾಗುಣದಲ್ಲಿನ ಏರುಪೇರು, ಅತಿಯಾದ ರಾಸಾಯನಿಕಗಳ ಬಳಕೆ ಕೃಷಿ ಜಮೀನಿನ ಪ್ರಮಾಣ ಕುಸಿತಕ್ಕೆ ದಾರಿ ಮಾಡಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಡಿಮೆ ರಾಸಾಯನಿಕ ಗೊಬ್ಬರ ಬಳಸಿ ಗುಣಮಟ್ಟದ ಹಾಗೂ ಹೆಚ್ಚಿನ ಆಹಾರೋತ್ಪಾದನೆಗೆ ಪೂರಕ ಸಂಶೋಧನೆ ನಡೆಸುವ ಬಗ್ಗೆ ಚರ್ಚೆಗಳಾಗಬೇಕಿದೆ. ಕೃಷಿ ಕ್ಷೇತ್ರದಲ್ಲಿ ನಡೆಯುವ ಆವಿಷ್ಕಾರಗಳು, ಸಂಶೋಧನೆಗಳು ಅಭಿವೃದ್ಧಿಗೆ ಪೂರಕವಾಗಿರಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆಯನ್ನು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ವಿ. ಪಾಟೀಲ್ ವಹಿಸಿ ಮಾತನಾಡಿದರು. ರಾಜ್ಯ ಕೃಷಿ ಎಂಜಿನಿಯರ್ಸ್ ಸಂಘದ ಅಧ್ಯಕ್ಷ ಡಾ.ಎಂ. ಚೌಡೇಗೌಡ, ರಾಯಚೂರು ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಡೀನ್ ಪಿ. ಬಾಲಕೃಷ್ಣನ್ ಸೇರಿ ವಿವಿಧೆಡೆಯಿಂದ ಆಗಮಿಸಿದ್ದ ಕೃಷಿ ತಜ್ಞರು, ಕೃಷಿ ತಾಂತ್ರಿಕ ವಿಭಾಗದ ವಿದ್ಯಾರ್ಥಿಗಳಿದ್ದರು.