ಕಾಲುಬಾಯಿ ಬೇನೆ ರೋಗ ಲಸಿಕಾ ಕಾರ್ಯಕ್ಕೆ ಚಾಲನೆ
ಲಿಂಗಸ್ಗೂರು: ಜಾನುವಾರುಗಳಿಗೆ ಕಾಲು ಮತ್ತು ಬಾಯಿ ಜ್ವರ ರೋಗ ಮುಂಜಾಗ್ರತಾ ಲಸಿಕಾ ಕಾರ್ಯಕ್ರಮಕ್ಕೆ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಶರಣಬಸಪ್ಪ ಶನಿವಾರ ಚಾಲನೆ ನೀಡಿದರು.
ಪಟ್ಟಣಕ್ಕೆ ಸಮೀಪದ ಯಲಗಲದಿನ್ನಿ ಗ್ರಾಮದಲ್ಲಿ ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಾನುವಾರುಗಳಿಗೆ ಲಸಿಕೆ ಹಾಕುವ ಕಾರ್ಯಕ್ಕೆ ಚಾಲನೆ ನೀಡಿದರು. ಈ ವೇಳೆ ಪಶುವೈದ್ಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ. ರಾಚಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯಾದ್ಯಂತ ಫೆ.15ರಿಂದ ಮಾ. 14ರವರೆಗೆ ಕೈಗೊಳ್ಳಲಾಗುತ್ತಿರುವ ಕಾಲು ಮತ್ತು ಬಾಯಿ ಬೇನೆ ರೋಗ ಮುಂಜಾಗ್ರತಾ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದರಂತೆ ತಾಲೂಕಿನಲ್ಲಿ ಎಲ್ಲ ಗ್ರಾಮಗಳ ಜಾನುವಾರುಗಳಿಗೆ ಲಸಿಕೆ ಹಾಕಲಾಗುತ್ತದೆ.
ಲಿಂಗಸ್ಗೂರು ಪಟ್ಟಣ, ಮುದಗಲ್ ಪಟ್ಟಣ ಪಂಚಾಯ್ತಿ ಸೇರಿದಂತೆ ಪಶು ಚಿಕಿತ್ಸಾ ಕೇಂದ್ರಗಳ ವ್ಯಾಪ್ತಿಯಲ್ಲಿ ಬರುವ ತಾಲೂಕಿನ ಮಸ್ಕಿ, ಸಂತೆಕೆಲ್ಲೂರು, ಮೆದಿಕಿನಾಳ, ನಾಗಲಾಪೂರ, ಮಾಕಾಪೂರ, ಕಸಬಾ ಲಿಂಗಸ್ಗೂರು, ಮಟ್ಟೂರು, ಮುದಗಲ್, ಆಮದಿಹಾಳ, ಆಶಿಹಾಳ, ಬಯ್ಯಾಪುರ, ನಾಗರಹಾಳ, ಮಾವಿನಭಾವಿ, ಗೆಜ್ಜಲಗಟ್ಟಾ, ಯರಡೋಣ, ಈಚನಾಳ, ಗುರುಗುಂಟಾ, ಗುಂತಗೋಳ, ಆನೆಹೊಸೂರು, ಆನ್ವರಿ, ಗೊರೇಬಾಳ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಲಸಿಕಾ ಕಾರ್ಯಕ್ಕೆ 3ತಂಡ ರಚಿಸಲಾಗಿದ್ದು, ತಂಡಗಳ ಮುಖಾಂತರ ಆಯಾ ಸಂಸ್ಥೆ ಸಿಬ್ಬಂದಿ ಆಯಾ ಸಂಸ್ಥೆ ವ್ಯಾಪ್ತಿಗೆ ಬರುವ ಎಲ್ಲ ಗ್ರಾಮಗಳ ಜಾನುವಾರುಗಳಿಗೆ ಲಸಿಕೆ ಹಾಕಲಿದ್ದಾರೆ. ಜಾನುವಾರುಗಳ ಮಾಲೀಕರು ಇದರ ಪ್ರಯೋಜನ ಪಡೆಯಬೇಕೆಂದು ಕೋರಿದರು. ಈ ವೇಳೆ ಪಶುವೈದ್ಯ ಸೇವಾ ಇಲಾಖೆ ಸಿಬ್ಬಂದಿ ಜಂಗಮಮೂರ್ತಿ ಹಾಗೂ ಇನ್ನಿತರರು ಇದ್ದರು.