'ಪಂಚೇಂದ್ರಿಯಗಳು, ಪಂಚಮಹಾಭೂತಗಳಲ್ಲಿ ಅಗ್ನಿತತ್ವವಿದೆ'
ಸಿಂಧನೂರು: ಪಂಚೇಂದ್ರಿಯಗಳು, ಪಂಚಮಹಾಭೂತಗಳಲ್ಲಿ ಅಗ್ನಿ ತತ್ವವಿದೆ ಎಂದು ರೌಡಕುಂದಿ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಮರಿಸಿದ್ದಲಿಂಗ ಶಿವಾಚಾರ್ಯ ಹೇಳಿದರು.
ಅವರು ತಾಲೂಕಿನ ರೌಡಕುಂದಿ ಗ್ರಾಮದಲ್ಲಿ ಬಂಡೆ ರಂಗನಾಥನ ಜಾತ್ರಾಮಹೋತ್ಸವದ ಅಂಗವಾಗಿ ಲಕ್ಷದೀಪೋತ್ಸವ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪಂಚಮಹಾಭೂತಗಳು ಹಾಗೂ ಪಂಚೇಂದ್ರಿಯಗಳಲ್ಲಿ ಅಗ್ನಿ ತತ್ವವಿದೆ. ಅಗ್ನಿ ಜ್ಞಾನದ ಸಂಕೇತ. ಅಗ್ನಿಯ ಗುಣ ದುಷ್ಟಗುಣವನ್ನು ಸುಡುವುದು. ಅದಕ್ಕಾಗಿಯೇ ಲಕ್ಷವು ದೀಪದಲ್ಲಿರಲಿ ಎಂಬ ಕಾರಣಕ್ಕಾಗಿ ಲಕ್ಷದೀಪೋತ್ಸವ ಆಚರಿಸಲಾಗುತ್ತಿದೆ ಎಂದರು.
ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿ, ಶಿವಶರಣರು, ದಾಸವರ್ಯರನ್ನು ಕಾಣುವುದು ಭಾರತದಲ್ಲಿ ಮಾತ್ರ. ಧರ್ಮದಿಂದ ಮಾತ್ರ ಶಾಂತಿ, ನೆಮ್ಮದಿ ಸಿಗುತ್ತದೆ ಎಂದರು.
ಕಾರ್ಯಕ್ರಮವನ್ನುದ್ದೇಶಿಸಿ ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ರಾಮರಾವ್ ಕುಲಕರ್ಣಿ, ರೌಡಕುಂದಾ ವಿಎಸ್ಎಸ್ಎನ್ ನಿವೃತ್ತ ವ್ಯವಸ್ಥಾಪಕ ಎಚ್. ಕಲ್ಯಾಣಪ್ಪ ಮಾತನಾಡಿದರು.
ಪಂಪನಗೌಡ ಬಾದರ್ಲಿ, ಬುದ್ದಿನ್ನಿ ಮಾಧವತೀರ್ಥರ ಅರ್ಚಕ ಶ್ರೀನಿವಾಸಾಚಾರ್ಯ, ರಂಗನಾಥರಾವ್ ಕುಲಕರ್ಣಿ, ಸಣ್ಣಭೀಮನಗೌಡ ಉಪಸ್ಥಿತರಿದ್ದರು.
ಪ್ರಹ್ಲಾದ ಗುಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಶಿಕ್ಷಕ ತಿರುಮಲರಾವ್ ಕುಲಕರ್ಣಿ ಸ್ವಾಗತಿಸಿ, ಪ್ರಭಾಕರ ಕುಲಕರ್ಣಿ ನಿರೂಪಿಸಿದರು. ರಾಘವೇಂದ್ರರಾವ್ ಕುಲಕರ್ಣಿ, ಮನೋಹರರಾವ್ ಕುಲಕರ್ಣಿ, ಅಡವಿರಾವ್ ಸಿದ್ರಾಂಪುರ, ವೆಂಕಟರಾವ್ ವಟಗಲ್ ಬಲವಂತರಾವ್, ಅನಂತಾಚಾರ್ಯ ಸಾಲಗುಂದ, ಹನುಮಂತಾಚಾರ್ಯ ಬಾದರ್ಲಿ ಮತ್ತಿತರರು ಉಪಸ್ಥಿತರಿದ್ದರು.