ಬಿಸಿಎಂ ವಿದ್ಯಾರ್ಥಿಗಳ ಶುಲ್ಕ ವಿನಾಯಿತಿಗೆ ಕತ್ತರಿ: ಖಂಡನೆ
ರಾಯಚೂರು: ಬಿಸಿಎಂ ವಿದ್ಯಾರ್ಥಿಗಳನ್ನು ಶುಲ್ಕ ವಿನಾಯಿತಿ ಸೌಲಭ್ಯದಿಂದ ವಂಚಿಸಲು ಮುಂದಾಗಿರುವ ಸರ್ಕಾರದ ಆದೇಶವನ್ನು ಎಐಡಿಎಸ್‌ಒ ಸಂಘಟನೆ ತೀವ್ರವಾಗಿ ಖಂಡಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಸಂಘಟನೆಯ ಅಧ್ಯಕ್ಷ ಮಹೇಶ್ ಚೀಕಲಪರ್ವಿ, ಸರ್ಕಾರವು ಈಚೆಗೆ ಆದೇಶ ಹೊರಡಿಸಿದ್ದು, ಅದರಂತೆ ಬಿಸಿಎಂ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಶುಲ್ಕ ವಿನಾಯಿತಿ ಇನ್ನು ಮುಂದೆ ರದ್ದಾಗಲಿದೆ ಎಂದು ತಿಳಿಸಿರುವುದು ಖಂಡನೀಯ ಎಂದು ಟೀಕಿಸಿದ್ದಾರೆ.
ಮುಷ್ಕರಗಳಲ್ಲಿ ತೊಡಗುವಂತಿಲ್ಲ: ಬಿಸಿಎಂ ವಿದ್ಯಾರ್ಥಿಗಳು ಪೂರ್ಣ ಶುಲ್ಕ ಪಾವತಿಸುವ ಪರಿಸ್ಥಿತಿ ಉಂಟಾಗಲಿದೆ. ಈ ಆದೇಶಾನುಸಾರ ವಿದ್ಯಾರ್ಥಿಗಳು ಪಾವತಿಸಿದ ಹೆಚ್ಚುವರಿ ಶುಲ್ಕವನ್ನು ನಗದು ವರ್ಗಾವಣೆ ಸೌಲಭ್ಯದಡಿ ಸರ್ಕಾರವು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಲಿದೆ. ಶುಲ್ಕ ವಿನಾಯಿತಿ ಪಡೆಯಲು ವಿದ್ಯಾರ್ಥಿ ಯಾವುದೇ ಮುಷ್ಕರಗಳಲ್ಲಿ ಭಾಗಿಯಾಗಿರುವಂತಿಲ್ಲ. ಎಲ್ಲಾ ವಿಷಯಗಳಲ್ಲಿ ತೇರ್ಗಡೆಯಾಗುವುದರೊಂದಿಗೆ ಸರ್ಕಾರ ನಿಗದಿಪಡಿಸಿದಷ್ಟು ಶೇಕಡಾವಾರು ಅಂಕ ಹಾಗೂ ಹಾಜರಾತಿ ಪಡೆದಿರಬೇಕು.
ಆಧಾರ್ ಕಾರ್ಡ್ ಕಡ್ಡಾಯವಾಗಿ ಹೊಂದಿರಬೇಕು ಎಂಬುದು ಸೇರಿ ವಿವಿಧ ಷರತ್ತು ವಿಧಿಸಲಾಗಿದೆ.
ಶುಲ್ಕ ವಿನಾಯಿತಿ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಈ ಆದೇಶ 2013-14ನೇ ಸಾಲಿನಿಂದ ಜಾರಿಯಾಗಬೇಕು ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಪೂರ್ವಾನ್ವಯವಾಗುವಂತೆ ಹೆಚ್ಚುವರಿ ಶುಲ್ಕವನ್ನು ಭರಿಸುವಂಥ ಪರಿಸ್ಥಿತಿ ಉದ್ಭವಿಸಿದೆ ಎಂದು ಆರೋಪಿಸಿದ್ದಾರೆ.
ಸೌಲಭ್ಯ ವಂಚನೆ: ಲಕ್ಷಾಂತರ ಬಡ ವಿದ್ಯಾರ್ಥಿಗಳಿಂದ ಶುಲ್ಕ ವಿನಾಯಿತಿ ಸೌಲಭ್ಯವನ್ನು ಕಸಿದುಕೊಳ್ಳಲು ಸರ್ಕಾರ ಹೂಡಿರುವ ಹೊಸ ತಂತ್ರ ಇದಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಶೇ.70ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಆಂಗ್ಲ ಭಾಷೆಯಲ್ಲಿ ಅನುತ್ತೀರ್ಣರಾಗುವುದು ಸರ್ವೇ ಸಾಮಾನ್ಯವಾಗಿದೆ.
ಅವರೆಲ್ಲರೂ ಶುಲ್ಕ ವಿನಾಯಿತಿಯಿಂದ ಇನ್ನು ಮುಂದೆ ವಂಚಿತರಾಗಲಿದ್ದಾರೆಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕಾಮೆಡ್-ಕೆ ಲಾಬಿಗೆ ಸರ್ಕಾರ ಮಣಿಯುವುದು, ಕಾಲೇಜುಗಳಲ್ಲಿ ಮೂಲ ಸೌಕರ್ಯದ ಕೊರತೆ, ಏಕಾಏಕಿ ಶುಲ್ಕ ದುಪ್ಪಟ್ಟು ಆಗುವುದು, ಮೌಲ್ಯಮಾಪನದಲ್ಲಿ ಲೋಪದೋಷಗಳು, ವಿವಿಗಳಲ್ಲಿ ರಾರಾಜಿಸುತ್ತಿರುವ ಭ್ರಷ್ಟಾಚಾರ ಈ ಯಾವುದನ್ನೂ ವಿದ್ಯಾರ್ಥಿಗಳು ಈ ಆದೇಶದಂತೆ ಪ್ರಶ್ನಿಸುವಂತಿಲ್ಲ ಎಂದು ಎಚ್ಚರಿಸಿದ್ದಾರೆ.
ಸರ್ಕಾರ ಈ ಆದೇಶವನ್ನು ಕೂಡಲೇ ರದ್ದುಗೊಳಿಸದಿದ್ದಲ್ಲಿ ಎಐಡಿಎಸ್‌ಒ ದಿಂದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.