ಶೀಘ್ರವೇ ಪಶು ವೈದ್ಯರ ನೇಮಕ: ಶಾಸಕ
ಸಿಂಧನೂರು: ರಾಜ್ಯ ಸರ್ಕಾರ ಶೀಘ್ರವೇ ಪಶುವೈದ್ಯರ ನೇಮಕ ಮಾಡಿಕೊಳ್ಳಲಾಗುತ್ತದೆ. ರಾಜ್ಯದಲ್ಲಿ ಹೊಸದಾಗಿ 100 ಪಶುಚಿಕಿತ್ಸೆ ಕೇಂದ್ರಗಳನ್ನು ತೆರೆಯಲಾಗುವುದು. ರಾಯಚೂರು ಜಿಲ್ಲೆಗೆ 25 ವೈದ್ಯರನ್ನು ನೀಡುವ ಭರವಸೆಯನ್ನು ಸರಕಾರ ನೀಡಿದ್ದು, ಅದರಲ್ಲಿ ವೈದ್ಯರ ಸೌಲಭ್ಯವನ್ನು ಗ್ರಾಮಕ್ಕೆ ನೀಡುವ ಭರವಸೆಯನ್ನು ಶಾಸಕ ಪ್ರತಾಪಗೌಡ ಪಾಟೀಲ್ ನೀಡಿದರು.
ಅವರು ತಾಲೂಕಿನ ಬಳಗಾನೂರು ಗ್ರಾಮದಲ್ಲಿ ಜಿ.ಪಂ. ರಾಯಚೂರು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ರಾಯಚೂರು ಹಮ್ಮಿಕೊಂಡಿರುವ ಜಿ.ಪಂ. ಅನುದಾನದಲ್ಲಿ ನಿರ್ಮಾಣಗೊಂಡ ಪಶು ಆರೋಗ್ಯ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅವಕಾಶ: 371 ಕಲಂ ತಿದ್ದುಪಡಿ ಉದ್ದೇಶ ಅಸಮಾನತೆಯನ್ನು ಹೋಗಲಾಡಿಸುವಂತಾಗಿದೆ. ಹೈ.ಕ. ಅಭಿವೃದ್ಧಿಗಾಗಿ ಸರ್ಕಾರ ರು. 1037 ಕೋಟಿ ಯೋಜನೆಗಳನ್ನು ಹಾಕಿಕೊಂಡಿದೆ. ರೈತರಿಗೆ ಬಡ್ಡಿರಹಿತ ಸಾಲ ರು. 3 ಲಕ್ಷದವರೆಗೆ ವಿಸ್ತರಿಸಿದೆ. ಕೃಷಿ, ನೀರಾವರಿ ಸೇರಿದಂತೆ ಅನೇಕ ಯೋಜನೆಗಳಿಗೆ ಸರ್ಕಾರ ಉತ್ತಮ ಅವಕಾಶ ಕಲ್ಪಿಸಿದೆ ಎಂದರು.
ಪ್ರಶಂಸೆ: ಪ್ರವಾಸಿ ಮಂದಿರಕ್ಕೆ ಸ್ಥಳಾವಕಾಶ ನೀಡಲು ಮುಂದೆ ಬಂದಿರುವ ಜಿ.ಪಂ. ಸದಸ್ಯೆ ಶಾಂತಮ್ಮ ದಯಾನಂದ ರೆಡ್ಡಿ ಪಾಟೀಲ್ ಅವರ ಕಳಕಳಿ ಕುರಿತು ಶಾಸಕರು ಪ್ರಶಂಸೆ ವ್ಯಕ್ತಪಡಿಸಿದರು. ಬಸವೇಶ್ವರ ನಗರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ರು. 10 ಲಕ್ಷ ಮಂಜೂರುಗೊಳಿಸಿರುವುದಾಗಿ ಹೇಳಿದರು.
ಪ್ರಾಸ್ತಾವಿಕವಾಗಿ ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ಶಂಕರ ಗುಳೆದಗುಡ್ಡ, ಮುಖಂಡ ದಯಾನಂದ ರೆಡ್ಡಿ ಪಾಟೀಲ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಗಿರಿಜಮ್ಮ ಗುತ್ತೇದಾರ, ಪಶು ಇಲಾಖೆಯ ಜಿಲ್ಲಾ ಉಪನಿರ್ದೇಶಕ ಸುಂದರರಾಜ್, ತಾ.ಪಂ. ಸದಸ್ಯೆ ಬಾಲಮ್ಮ ನಾಗಪ್ಪ, ಗ್ರಾ.ಪಂ. ಉಪಾಧ್ಯಕ್ಷ ಎಚ್. ಮಹಾಭಳೇಶ್, ಪಿಎಸ್ಐ ಮಹಾಂತೇಶ್ ಸಜ್ಜನ್, ಮುಖಂಡರಾದ ಡಾ.ಬಿ.ಎಚ್. ದಿವಟರ್, ಬಸವರಾಜಸ್ವಾಮಿ ಹಸಮಕಲ್, ದೊಡ್ಡಪ್ಪ ಕಡಬೂರು, ಅಜಯಕುಮಾರ ನಾಡಗೌಡ, ಶಂಕರರಾವ್ ತಾ.ಪಂ. ಜೆಇಎ ಮುಲ್ಲಾ, ಪಿಡಿಓ ಮುದುಕಪ್ಪ ಉಪಸ್ಥಿತರಿದ್ದರು. ಡಾ. ಶಶಿಧರಸ್ವಾಮಿ ನಿರೂಪಿಸಿದರು. ಡಾ.ದಿಲೀಪ್ ವಂದಿಸಿದರು.