ಬಂಡೆ ಪ್ರಕರಣ; ಸಿಬಿಐ ತನಿಖೆಯಾಗಲಿ
ಯಾದಗಿರಿ: ಮಲ್ಲಿಕಾರ್ಜುನ ಬಂಡೆ ಪ್ರಕರಣವನ್ನು ಸಿಬಿಐಗೆ ವಹಿಸಿ ಪ್ರಕರಣದ ಸತ್ಯಾಸತ್ಯತೆ ಬಯಲಿಗೆಳೆಯಬೇಕೆಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಸಂಚಾಲಕ ವೈಜನಾಥ ಗುರುಮಠಕಲ್ ಹಿರೇಮಠ ಆಗ್ರಹಿಸಿದರು.
ನಗರದಲ್ಲಿ ಜಿಲ್ಲಾ ವೀರಶೈವ ಲಿಂಗಾಯಿತ ಯುವ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನೆ ಮೆರವಣಿಗೆ ನೇತೃತ್ವ ವಹಿಸಿ ಮಾತನಾಡಿ, ಬಂಡೆ ಪ್ರಕರಣದಲ್ಲಿ ಸತ್ಯಸಂಗತಿ ಮರೆಮಾಚಲಾಗಿದೆ.
ಈ ಪ್ರಕರಣದಲ್ಲಿ ಭೂಗತ ಪಾತಕಿ ಮುನ್ನಾ ಬಂಧಿಯಾಗಿದ್ದರೆ, ಕರ್ನಾಟಕ ಮಹಾರಾಷ್ಟ್ರದಲ್ಲಿರುವ ಆಡಳಿತಾರೂಢ ಸರ್ಕಾರಗಳು ಹಾಗೂ ಇತರ ರಾಜಕಾರಣಿಗಳ ಬಣ್ಣ ಬಯಲಾಗುತ್ತಿದ್ದುದರಿಂದಲೇ ಬಂಡೆ ಹತ್ಯೆ ಹಿಂದೆ ಕಾಣದ ಕೈಗಳ ದುಷ್ಕೃತ್ಯ ಅಡಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಇದರ ಸತ್ಯಾಸತ್ಯತೆ ಬಯಲಿಗೆ ಬರಬೇಕಾದರೆ ಸಿಬಿಐ ತನಿಖೆಯೇ ಸೂಕ್ತ ಎಂದು ಹಿರೇಮಠ ಅಭಿಪ್ರಾಯಪಟ್ಟರು.
ಈಗಾಗಲೇ ಐಜಿಪಿ ವಜೀರ್ ಅಹ್ಮದ್ ಸಹ ಸಿಬಿಐ ತನಿಖೆ ನಡೆಸುವಂತೆ ಹೇಳಿಕೆ ನೀಡಿರುವುದನ್ನು ಉಲ್ಲೇಖಿಸಿದ ಅವರು, ಸರ್ಕಾರಕ್ಕೆ ಯಾಕೆ ಸತ್ಯಾ ಬಯಲಿಗೆಳೆಯಲು ಮನಸ್ಸಿಲ್ಲ ಎಂದು ಪ್ರಶ್ನಿಸಿದರು.
ವೀರಶೈವ ಲಿಂಗಾಯಿತ ಯುವ ವೇದಿಕೆ ಜಿಲ್ಲಾ ಸಂಚಾಲಕ ಚಂದ್ರಶೇಖರ ಆರ್. ಡೋಣೂರು ಮಾತನಾಡಿ, ಬಂಡೆ ಪತ್ನಿ ಅವರೇ ಸಿಒಡಿ ಮೇಲೆ ನಂಬಿಕೆ ಇಲ್ಲ ಎಂದು ಆಪಾದಿಸಿರುವುದರಿಂದ ಹಾಗೂ ಎಲ್ಲೆಡೆ ಸಿಬಿಐ ತನಿಖೆ ನಡೆಸಬೇಕೆಂಬ ಒತ್ತಡಗಳು ಇರುವುದರಿಂದ ಸಿಎಂ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲೇಬೇಕೆಂದು ಆಗ್ರಹಿಸಿದರು. ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಸುಭಾಷ ವೃತ್ತ, ಶಾಸ್ತ್ರಿ ವೃತ್ತ ಹಾದು ಜಿಲ್ಲಾಧಿಕಾರಿ ಕಚೇರಿಗೆ ತಲುಪಿತು. ನಂತರ ಜಿಲ್ಲಾಧಿಕಾರಿ ಕಚೇರಿ ಸಹಾಯಕ ರಾಘವೇಂದ್ರರಾವ್ ಹಳ್ಳೂರು ಮನವಿ ಸ್ವೀಕರಿಸಿ ಸೂಕ್ತ ಕ್ರಮದ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ನಿವೃತ್ತ ಪೊಲೀಸ್ ಮಹಾದೇವಪ್ಪ ಜವಳಿ, ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ್, ನಗರಾಧ್ಯಕ್ಷ ವಿಜಯ ಪಾಟೀಲ್, ಮುಖಂಡರಾದ ಸಿದ್ಧಣ್ಣಗೌಡ ಅಲ್ಲದೇ ರಾಚಯ್ಯ ಸ್ವಾಮಿ, ಶರಣಯ್ಯ ಸ್ವಾಮಿ ಮೀರೇಶ ಯರಡೋಣಿ, ಶ್ರೀಶೈಲ ಹುಣಸಗಿ, ಬಸವರಾಜ ಪಾಲ್ಕಂ ಮತ್ತಿತರರಿದ್ದರು.
ಸುರಪುರ: ಗುಲ್ಬರ್ಗದ ಸ್ಟೇಷನ್ ಬಜಾರ್ ಬಂಡೆ ಅವರ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ತಾಲೂಕು ವೀರಶೈವ ಲಿಂಗಾಯತ ಯುವ ವೇದಿಕೆ ಶನಿವಾರ ಗಾಂಧೀಜಿ ವೃತ್ತದಲ್ಲಿ ಪ್ರತಿಭಟನೆ ನಡೆಸಿತು. ವೇದಿಕೆಯ ಜಿಲ್ಲಾಧ್ಯಕ್ಷ ಮಂಜುನಾಥ ಜಾಲಹಳ್ಳಿ ಮಾತನಾಡಿ, ದಕ್ಷ ಅಧಿಕಾರಿಯಾಗಿದ್ದ ಬಂಡೆ ಸಾವಿನ ಹಿಂದೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಬಂಡೆ ಸಾವಿನ ತನಿಖೆಯನ್ನು ಸರ್ಕಾರ ತಕ್ಷಣ ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು. ಯುವ ವೇದಿಕೆಯ ತಾಲೂಕು ಅಧ್ಯಕ್ಷ ಕೊಟ್ರಯ್ಯ ಸ್ವಾಮಿ ಮಠಪತಿ, ಪ್ರಮುಖರಾದ ನಾಗಭೂಷಣ ಸ್ವಾಮಿ, ಶರಣು ಜಾಲಹಳ್ಳಿ, ಮಾನಯ್ಯ ದೇವಾಪುರ ಇದ್ದರು. ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಪರವಾಗಿ ಶಿರಸ್ತೇದಾರ ನರೇಶ ಹಳ್ಳದ ಸ್ವೀಕರಿಸಿದರು.