ಸುದ್ದಿ ಸಂಕ್ಷೇಪ
ಲೋಕಾಯುಕ್ತರ ಪ್ರವಾಸ ನಾಳೆ
ರಾಯಚೂರು: ಜಿಲ್ಲಾ ಲೋಕಾಯುಕ್ತರು ಫೆ.19ರಂದು ಜಿಲ್ಲೆಯ ವಿವಿಧೆಡೆ ಪ್ರವಾಸ ಕೈಗೊಂಡು ಸಾರ್ವಜನಿಕರ ಕುಂದುಕೊರತೆಯ ಅಹವಾಲು ಸ್ವೀಕರಿಸಲಿದ್ದಾರೆ. ಅಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ವರೆಗೆ ಸಿಂಧನೂರು ಪ್ರವಾಸಿ ಮಂದಿರದಲ್ಲಿ ಹಾಗೂ ಮಧ್ಯಾಹ್ನ 3ರಿಂದ ಸಂಜೆ 5.30ರವೆರೆಗೆ ಮಾನವಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಉಪಸ್ಥಿತರಿದ್ದು, ಕುಂದುಕೊರತೆ ದೂರು ಸ್ವೀಕರಿಸಲಿದ್ದಾರೆ. ನಿಗದಿತ ಅರ್ಜಿ ನಮೂನೆಯಲ್ಲಿ ಸ್ಥಳದಲ್ಲಿಯೇ ಪಡೆದು ದೂರು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ 08532-223592 ಇಲ್ಲವೇ 223579 ಇಲ್ಲಿಗೆ ಸಂಪರ್ಕಿಸಲು ಲೋಕಾಯುಕ್ತ ಕಚೇರಿ ಮನವಿ ಮಾಡಿದೆ.
20ರಂದು ತರಬೇತಿ ಕಾರ್ಯಾಗಾರ
ರಾಯಚೂರು: ಜಿಲ್ಲೆಯ ಎಲ್ಲ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಫೆ.20ರಂದು ವಿಶೇಷ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ. ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾ ಸಹಕಾರ ಒಕ್ಕೂಟವು, ನಗರದ ರಂಗಮಂದಿರದ ಹಿಂದೆಯಿರುವ ಜೇಸಿ ಭವನದಲ್ಲಿ ಅಂದು ಬೆಳಗ್ಗೆ 10ಕ್ಕೆ ತರಬೇತಿ ಕಾರ್ಯಾಗಾರ ಆಯೋಜಿಸಿದ್ದು, ಸಹಕಾರಿಗಳಿಗೆ ವಿವಿಧ ವಿಷಯ ತಜ್ಞರು ಮಾಹಿತಿ ನೀಡಲಿದ್ದಾರೆಂದು ತಿಳಿಸಿದೆ. ಜಿಲ್ಲೆಯ ವಿವಿಧೆಡೆಯ ಪತ್ತಿನ ಸಹಕಾರ ಸಂಘಗಳ ನಿರ್ದೇಶಕರು, ಅಧ್ಯಕ್ಷರು ಹಾಗೂ ಸಿಇಒಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದೆ.
ಸಂಘಟನೆಯಿಂದ ಉಚ್ಚಾಟನೆ
ರಾಯಚೂರು: ದೇವದಾಸಿ ಮಹಿಳಾ ವಿಮೋಚನಾ ಸಂಘದ ಮಾನವಿ ತಾಲೂಕು ಕಾರ್ಯದರ್ಶಿಯನ್ನು ಸಂಘಟನೆಯಿಂದ ಉಚ್ಚಾಟಿಸಲಾಗಿದೆ ಎಂದು ಸಂಘಟನೆ ಪ್ರಕಟಣೆ ತಿಳಿಸಿದೆ. ಮಾನವಿ ತಾಲೂಕು ಕಾರ್ಯದರ್ಶಿ ಸೀತಾ ಅವರು ಸಂಘಟನೆಯ ವಿರೋಧಿ ಚಟುವಟಿಕೆ ನಡೆಸಿರುವ ಹಿನ್ನೆಲೆಯಲ್ಲಿ ಅವರನ್ನು ಸಂಘಟನೆಯಿಂದ ಉಚ್ಚಾಟಿಸಲಾಗಿದೆ. ಮಾನವಿ ತಾಲೂಕಿನ ದೇವದಾಸಿ ಮಹಿಳೆಯರು ಮುಂದಿನ ದಿನಗಳಲ್ಲಿ ಸೀತಾ ಅವರೊಂದಿಗೆ ಯಾವುದೇ ರೀತಿಯ ಸಂಪರ್ಕವಿರಿಸಿಕೊಳ್ಳದಂತೆ ಸಂಘಟನೆಯ ಜಿಲ್ಲಾಧ್ಯಕ್ಷೆ ಎಚ್.ಪದ್ಮಾ, ಜಿಲ್ಲಾ ಕಾರ್ಯದರ್ಶಿ ಹುಲಿಗೆಮ್ಮ ಮುದಗಲ್ ಮನವಿ ಮಾಡಿದ್ದಾರೆ.
ಪ್ರಶಸ್ತಿಗೆ ಅರ್ಜಿ ಆಹ್ವಾನ
ರಾಯಚೂರು: ಮಕ್ಕಳ ಅಭಿವೃದ್ಧಿ, ರಕ್ಷಣೆ ಮತ್ತು ಕಲ್ಯಾಣ ಕ್ಷೇತ್ರದಲ್ಲಿ ಕಳೆದ 10ವರ್ಷಕ್ಕಿಂತ ಹೆಚ್ಚಿನ ಸೇವೆ ಸಲ್ಲಿಸಿ ಮೂವರಿಗೆ ರಾಜೀವ್ಗಾಂಧಿ ಮಾನವ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದ್ದು, ಅರ್ಹರಿಂದ ಅರ್ಜಿ ಕರೆಯಲಾಗಿದೆ. ಪ್ರಶಕ್ತಿಯು ಪ್ರಶಸ್ತಿ ಪತ್ರ ಹಾಗೂ 1 ಲಕ್ಷ ನಗದು ಬಹುಮಾನ ಹೊಂದಿದ್ದು, ಸಂಘ ಸಂಸ್ಥೆಗಳಲ್ಲಿ ವೇತನ ಪಡೆಯುವವರು ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ. ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಹಲವು ವರ್ಷ ಅಸಾಧಾರಣ ಸೇವೆ ಸಲ್ಲಿಸಿದ ಮೂವರಿಗೆ ಹಾಗೂ ಐದು ಸಂಸ್ಥೆಗಳ ಸೇವೆ ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ. ಸಂಸ್ಥೆಗಳಿಗೆ 3 ಲಕ್ಷ ಹಾಗೂ ಪ್ರಶಸ್ತಿ ಪತ್ರ ನೀಡಲಾಗುತ್ತದೆ. ಅರ್ಜಿ ನಮೂನೆಗಳನ್ನು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಯಚೂರು ಇವರಿಂದ ಪಡೆದು ಭರ್ತಿ ಮಾಡಿ ಸಲ್ಲಿಸಲು ಮಾ.10 ಕಡೆಯ ದಿನವಾಗಿದೆ ಎಂದು ಕಚೇರಿ ಪ್ರಕಟಣೆ ತಿಳಿಸಿದೆ.
ವಿಶೇಷ ಬಸ್
ರಾಯಚೂರು:-ಮಾನವಿ ತಾಲೂಕಿನ ನೀರಮಾನವಿ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಫೆ.18ರಿಂದ 20ರವರೆಗೆ ಈಶಾನ್ಯ ಸಾರಿಗೆ ಸಂಸ್ಥೆಯಿಂದ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಫೆ. 18ರಿಂದ ಫೆ. 20ರವರೆಗೆ ಜಾತ್ರೆಯಲ್ಲಿ ಭಕ್ತರು ಪಾಲ್ಗೊಳ್ಳಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ರಾಯಚೂರು-ನೀರಮಾನವಿ-ಮಾನವಿ, ಮಾನವಿ-ನೀರಮಾನವಿ-ಸಿರವಾರ, ಮಾನವಿ-ರಾಜಲಬಂಡಾ, ರಾಜೊಳ್ಳಿ, ಗಿಲ್ಲೆಸ್ಗೂರು, ನೀರಮಾನವಿ, ಮಾನವಿ-ನೀರಮಾನವಿ-ಕುರ್ಡಿ-ಅರೋಲಿ-ಮಟಮಾರಿ- ಗಿಲ್ಲೆಸ್ಗೂರು ಈ ಮಾರ್ಗಗಳಲ್ಲಿ ಸಾರಿಗೆ ಸಂಸ್ಥೆಯ ವಿಶೇಷ ಬಸ್ ಸಂಚಾರ ಸೌಲಭ್ಯ ಕಲ್ಪಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.