ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

22ರಂದು ಪ್ರೌಢಶಾಲಾ ಸಹ ಶಿಕ್ಷಕರ ಶೈಕ್ಷಣಿಕ ಸಮ್ಮೇಳನ

Vishwanath S
Updated On : 19 Feb 2014, 11:16 am

ಕ.ಪ್ರ. ವಾರ್ತೆ  ರಾಯಚೂರು       ಫೆ.18
ಪ್ರೌಢಶಾಲಾ ಸಹಶಿಕ್ಷಕರ ಜಿಲ್ಲಾ ಮಟ್ಟದ ಪ್ರಥಮ ಶೈಕ್ಷಣಿಕ ಸಮ್ಮೇಳನವನ್ನು ಮಾನವಿಯಲ್ಲಿ ಫೆ.22 ಮತ್ತು 23ರಂದು ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮಹಾದೇವಪ್ಪ ಹೇಳಿದರು.
ಅವರು ನಗರದಲ್ಲಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫೆ.22ರಂದು ಮಾನವಿ ಪಟ್ಟಣದ ವೆಲ್ಲಂಕಿ ರಾಮಕೃಷ್ಣ ವರ್ಮಾ ಪ್ರೌಢಶಾಲೆಯಲ್ಲಿ ಶೈಕ್ಷಣಿಕ ಸಮ್ಮೇಳನವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಉದ್ಘಾಟಿಸಲಿದ್ದಾರೆಂದು ತಿಳಿಸಿದರು.
ಸಮ್ಮೇಳನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್, ಮಾಜಿ ಶಾಸಕ ಎನ್.ಎಸ್. ಬೋಸರಾಜು ಪಾಲ್ಗೊಳ್ಳಲಿದ್ದು, ಅಧ್ಯಕ್ಷತೆಯನ್ನು ಮಾನವಿ ಶಾಸಕ ಹಂಪಯ್ಯ ನಾಯಕ ವಹಿಸಲಿದ್ದಾರೆ. ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಕೆ. ಮಂಜುನಾಥ ನೇತೃತ್ವದಲ್ಲಿ ಸಮ್ಮೇಳನ ನಡೆಯಲಿದೆ ಎಂದರು.
ಸಾಧಕರಿಗೆ ಸನ್ಮಾನ: ಸಮ್ಮೇಳನದ ಸಾನ್ನಿಧ್ಯವನ್ನು ಮಾನವಿ ಕಲ್ಮಠದ ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ವಹಿಸಲಿದ್ದಾರೆ. 371ನೇ ಕಲಂ ಜಾರಿ ನಿಟ್ಟಿನಲ್ಲಿ ಹೋರಾಡಿದ ರಾಘವೇಂದ್ರ ಕುಷ್ಟಗಿ, ಡಾ. ರಜಾಕ್ ಉಸ್ತಾದ್, ಬಸವಂತರಾಯ ಕುರಿ, ಅಂಬಣ್ಣ ಅರೋಲಿಕರ್, ಡಿ.ಜಿ. ಕರ್ಕಿಹಳ್ಳಿ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುತ್ತದೆ ಎಂದು ಹೇಳಿದರು.
ಅದೇ ರೀತಿ ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಶಿಕ್ಷಣ ಪ್ರೇಮಿಗಳನ್ನು ಸನ್ಮಾನಿಸಲಾಗುತ್ತಿದ್ದು, ವಿವಿಧ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸಿದ ಜಿಲ್ಲೆಯ ವಿದ್ಯಾರ್ಥಿಗಳನ್ನೂ ಸಹ ಸಮಾರಂಭದಲ್ಲಿ ಗೌರವಿಸಲಾಗುತ್ತದೆ ಎಂದರು.
ಸಾಧಕ ಬಾಧಕ ಗೋಷ್ಠಿ: ನಂತರ ನಡೆಯಲಿರುವ ಮೊದಲ ಗೋಷ್ಠಿಯಲ್ಲಿ ರಾಯಚೂರು ಬಿಇಒ ಮಲ್ಲಿಕಾರ್ಜುನ ಅಧ್ಯಕ್ಷತೆಯಲ್ಲಿ ನಿರಂತರ ಮತ್ತು ವ್ಯಾಪಕ ಮೌಲ್ಯ ಮಾಪನದ ಸಾಧಕ ಬಾಧಕಗಳು ಎಂಬ ವಿಷಯದ ಕುರಿತು ಸಿಂಧನೂರಿನ ಉಪನ್ಯಾಸಕ ಪ್ರಕಾಶ್ ಅವರು ಮಾತನಾಡಲಿದ್ದಾರೆಂದರು.
ಎರಡನೇ ಗೋಷ್ಠಿಯಲ್ಲಿ ಗುಣಾತ್ಮಕ ಶಿಕ್ಷಣದತ್ತ ನಮ್ಮ ಹೆಜ್ಜೆ ಎಂಬ ವಿಷಯದ ಕುರಿತು ನಿವೃತ್ತ ಡಿಡಿಪಿಐ ಶೇಷಗಿರಿರಾವ್ ಕುಲಕರ್ಣಿ ವಿಷಯ ಮಂಡಿಸಲಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರೌಢಶಾಲಾ ಸಹಶಿಕ್ಷಕರ ಶೈಕ್ಷಣಿಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಬಯಸುವಂಥ ಶಿಕ್ಷಕರಿಗೆ ಅನ್ಯಕಾರ್ಯನಿಮಿತ್ತ ಸೌಲಭ್ಯ ಮಂಜೂರು ಮಾಡಿದೆ ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಪ್ರೌಢಶಾಲೆಗಳ ಸಹ ಶಿಕ್ಷಕರು ಶೈಕ್ಷಣಿಕ ಸಮ್ಮೇಳನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಮನವಿ ಮಾಡಿದರು.
ಈ ಸಂದರ್ಭ ಸಂಘದ ಪ್ರಮುಖರಾದ ರಾಜಶೇಖರ್ ದಿನ್ನಿ, ಮಲ್ಲಯ್ಯ, ಶಿವಪುತ್ರಪ್ಪ ಬೆಳ್ಳಿಗನೂರು, ಸೋಮಪ್ಪ, ನಾಗಪ್ಪ ಹೊರಪ್ಯಾಟಿ, ಸೈಯದ್ ಸಿರಾಜ್ ಹುಸೇನ್, ಸುರೇಶ್ ಪಾಟೀಲ್, ಸುಧಾಕರ್ ಪಾಟೀಲ್ ಇದ್ದರು.
ಬೋಧಕ ಸಿಬ್ಬಂದಿಗೆ ಸೂಚನೆ
ರಾಯಚೂರು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಇವರ ವ್ಯಾಪ್ತಿಯಲ್ಲಿ 2014-15ರ ನಂತರ ವರ್ಷಗಳಲ್ಲಿ ನೇಮಕಗೊಂಡ 2011ರ ಏ.1ರವರೆಗೆ ಕಾರ್ಯನಿರ್ವಹಿಸಿದ ಹೊರ ಸಂಪನ್ಮೂಲ ಬೋಧಕ ಸಿಬ್ಬಂದಿಗೆ ಉಚ್ಚ ನ್ಯಾಯಾಲಯದ ಆದೇಶದಂತೆ ಸೇವಾ ಕೃಪಾಂಕ ನೀಡಿ ಆಯ್ಕೆ ಪಟ್ಟಿ ಸಿದ್ಧಪಡಿಸಿದ್ದು ಸೂಕ್ತ ದಾಖಲೆ ಸಲ್ಲಿಸಲು ಸೂಚಿಸಲಾಗಿದೆ.
2011ರ ಏ.1ರಲ್ಲಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಾಂಶುಪಾಲರು, ಕನ್ನಡ, ಇಂಗ್ಲಿಷ್, ಹಿಂದಿ ಭಾಷೆ ಶಿಕ್ಷಕರು, ವಿಜ್ಞಾನ, ಸಮಾಜ ವಿಜ್ಞಾನ, ಗಣಿತ, ಕಂಪ್ಯೂಟರ್ ಮತ್ತು ದೈಹಿಕ ಶಿಕ್ಷಕರುಗಳು ತಮ್ಮ ಸೇವಾ ದಾಖಲೆಗಳನ್ನು ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳು, ವಸತಿ ಶಾಲೆಗಳ ಕಾಯಂ ಪ್ರಾಂಶುಪಾಲರಿಗೆ ಕೂಡಲೇ ಸಲ್ಲಿಸಲು ಸೂಚಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement