ನೀರಿನ ತಂಟೆ; ಅಧಿಕಾರಿ - ರೈತರ ವಾಗ್ವಾದ
ಕನ್ನಡಪ್ರಭ ವಾರ್ತೆ, ಮಸ್ಕಿ, ಫೆ.18
ತುಂಗಭದ್ರಾ ಎಡದಂಡೆಯಿಂದ ನೀರು ಪಡೆಯುವ ವಿಚಾರವೀಗ ಸಾಕಷ್ಟು ಗೊಂದಲಕ್ಕೆ ದಾರಿ ಮಾಡಿದ್ದು, ಕಾಲುವೆಯ ಕಡೆಯ ರೈತರಿಗೆ ನೀರು ದೊರಕಿಸುವ ಒತ್ತಡದಲ್ಲಿರುವ ಅಧಿಕಾರಿಗಳು ಕಾಲುವೆಯಿಂದ ಅಕ್ರಮ ನೀರು ಬಳಕೆಗೆ ತಡೆ ಹಾಕಲು ಮುಂದಾಗಿದ್ದಾರೆ. ಪರಿಣಾಮ ರೈತರು ವಾಗ್ವಾದ ನಡೆಸಿದ ಪ್ರಸಂಗ ಮಸ್ಕಿಯಲ್ಲಿ ಮಂಗಳವಾರ ನಡೆಯಿತು.
ಕೆಳಭಾಗದ ರೈತರ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಇಲ್ಲಿಗೆ ಸಮೀಪದ ತುಂಗಭದ್ರಾ ಎಡದಂಡೆ ಕಾಲುವೆಯ 54ನೇ ಉಪಕಾಲುವೆಯ ಹತ್ತಿರದ ಜಮೀನುಗಳಲ್ಲಿ ನೀರನ್ನು ಪಡೆಯಲು ಕಾಲುವೆಗೆ ಅಕ್ರಮವಾಗಿ ಅಳವಡಿಸಿದ್ದ ಕೊಳವೆ ಮಾರ್ಗ ಕಿತ್ತು ಹಾಕಲು ಮುಂದಾದ ಸಿಂಧನೂರು ವಿಭಾಗದ ಪ್ರಭಾರಿ ಕಾರ್ಯಪಾಲಕ ಅಭಿಯಂತರ ಹನುಮಂತಪ್ಪ ಅವರೊಂದಿಗೆ ರೈತರು ವಾಗ್ವಾದಕ್ಕಿಳಿದ ಘಟನೆ ನಡೆಯಿತು.
ಅಕ್ರಮವಾಗಿ ಪೈಪ್ ಅಳವಡಿಕೆ: ನೀರಾವರಿ ಅಧಿಕಾರಿಗಳು ಜೆಸಿಬಿ ಯಂತ್ರ ಬಳಸಿ ಕಾಲುವೆಗೆ ಅಳವಡಿಸಿದ್ದ ಪೈಪ್ ಕಿತ್ತು ಹಾಕಲು ಮುಂದಾಗಿದ್ದರಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಉಪ ಕಾಲುವೆಯಿಂದ ತಿಮ್ಮನಗೌಡ ಗುಡದೂರ ಎಂಬವರು ತಮ್ಮ ಜಮೀನಿಗೆ ಅಕ್ರಮವಾಗಿ ಉಪಕಾಲುವೆಯ ಮೂಲಕ ಕೊಳವೆ ಮಾರ್ಗ ಅಳವಡಿಸಿಕೊಂಡು ನೀರು ಪಡೆಯುತ್ತಿದ್ದಾರೆಂದು ಆರೋಪಿಸಿ ಅಧಿಕಾರಿಗಳು ಜೆಸಿಬಿ ಯಂತ್ರದಿಂದ ಪೈಪ್ ತೆರವಿಗೆ ಮುಂದಾದಾಗ ಪೈಪ್ಗಳಿರುವುದು ಪತ್ತೆಯಾಗಿದೆ.
ಈ ವೇಳೆ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ ತಿಮ್ಮನಗೌಡ ಗುಡದೂರು ಮತ್ತಿತರೆ ರೈತರು ತಾರತಮ್ಯ ನೀತಿ ಅನುಸರಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ತಾವುಗಳು ಅಕ್ರಮ ರೀತಿಯಲ್ಲಿ ನೀರು ಪಡೆಯುತ್ತಿಲ್ಲ. ಜಮೀನಿನಲ್ಲಿ ತೆರೆದಬಾವಿ ಮತ್ತು ಕೊಳವೆಬಾವಿಯಿದೆ. ದೀನಸಮುದ್ರ ರಸ್ತೆಯಲ್ಲಿನ ಗುಡ್ಡದಿಂದ ಬಸಿನೀರು ಹರಿದು ಬರುತ್ತದೆ. ಮಳೆ ನೀರನ್ನು ಕೆರೆಯಲ್ಲಿ ರಕ್ಷಿಸಿ ಬೆಳೆಗೆ ಮಳೆ ಕೊಯ್ಲು ಪದ್ಧತಿಯನ್ನು ಬಳಸಿ ನೀರು ಬಳಸಿಕೊಳ್ಳಲಾಗುತ್ತಿದೆ ಎಂದು ಸಮಜಾಯಿಷಿ ನೀಡಿದರು.
ರಾಜಕೀಯಪ್ರೇರಿತ ದೂರು ದಾಖಲು: ಹಾಗೆಯೇ ಎಡದಂಡೆ ಕಾಲುವೆಯ ಮೇಲ್ಭಾಗದಲ್ಲಿ ಎಲ್ಲ ಉಪಕಾಲುವೆಗಳು ಹಾಗೂ ಮುಖ್ಯ ಕಾಲುವೆಯಿಂದಲೂ ರೈತರು ಅಕ್ರಮ ನೀರು ಪಡೆಯುತ್ತಿದ್ದಾರೆ. ಅದರ ಬಗ್ಗೆ ಅಧಿಕಾರಿಗಳು ಮೌನ ವಹಿಸಿದ್ದಾರೆಂದು ದೂರಿ, ತಮ್ಮ ತೇಜೋವಧೆ ಮಾಡುವ ಉದ್ದೇಶದಿಂದಲೇ ರಾಜಕೀಯ ಪ್ರೇರಿತವಾಗಿ ವಿನಾಕಾರಣ ಬಳಗಾನೂರು ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ತಿಮ್ಮನಗೌಡ ಗುಡದೂರು ಆರೋಪಿಸಿದರು.
ಪರಿಶೀಲಿಸಿ ಕ್ರಮ ಕೈಗೊಳ್ಳಿ: ಸಿಂಧನೂರು ವಿಭಾಗದ ಪ್ರಭಾರಿ ಕಾರ್ಯಪಾಲಕ ಅಭಿಯಂತರ ಹನುಂತಪ್ಪ ಖುದ್ದು ಅಕ್ರಮ ಬಳಕೆಯ ಜಮೀನುಗಳನ್ನು ಪರಿಶೀಲಿಸಿ ರೈತರಿಂದ ಮಾಹಿತಿ ಪಡೆದು ನಂತರ ಜಲಸಂಪನ್ಮೂಲ ಇಲಾಖೆಯ ಮಸ್ಕಿ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕುಮಾರಸ್ವಾಮಿ ಅವರಿಗೆ 54ನೇ ಉಪಕಾಲುವೆಯಿಂದ ಅಕ್ರಮವಾಗಿ ನೀರು ಪಡೆಯುತ್ತಿರುವವರ ಮೇಲೆ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳುವಂತೆ ಸೂಚಿಸಿದರು.
ಅಲ್ಲದೆ, ಅಕ್ರಮ ನೀರು ಪಡೆಯುವಿಕೆ ತಡೆಗೆ ಹಗಲು ರಾತ್ರಿ ಕಟ್ಟುನಿಟ್ಟಿನ ಗಸ್ತು ಕ್ರಮ ಕೈಗೊಳ್ಳುವಂತೆ ಹಾಗೂ ಅಗತ್ಯವಿದ್ದಲ್ಲಿ ಕರ್ತವ್ಯಕ್ಕೆ ಹೆಚ್ಚಿನ ಸಿಬ್ಬಂದಿ ಬಳಕೆಗೆ ಸೂಚಿಸಿದರು.
ರೈತರಾದ ಯಂಕಪ್ಪ ಹಸ್ಮಕಲ್, ಬಸವರಾಜ್, ಬಾಲಪ್ಪ ಹಾಗೂ ಬಳಗಾನೂರು ಠಾಣೆಯ ಪಿಎಸ್ಸೈ ಮಹಾಂತೇಶ ಸಜ್ಜನ್, 55ನೇ ಉಪಕಾಲುವೆಯ ಸಹಾಯಕ ಅಭಿಯಂತರ ಪ್ರಕಾಶ, ತುರ್ವಿಹಾಳ ಜೆಸ್ಕಾಂ ಶಾಖಾಧಿಕಾರಿ ನಾಗರಾಜ ಸೇರಿ ಅನೇಕರಿದ್ದರು.
ಎಡದಂಡೆ ಕಾಲುವೆ; ನಿಷೇಧಾಜ್ಞೆ ಜಾರಿ
ರಾಯಚೂರು: ನೀರು ಸಂಗ್ರಹಣೆ ಕಾರ್ಯದಲ್ಲಿ ಅನುಕೂಲವಾಗುವಂತಾಗಲು ತುಂಗಭದ್ರಾ ಎಡದಂಡೆ ಕಾಲುವೆಯ ಮೈಲ್ 47ರಿಂದ 69ರವರೆಗೆ ಕಾಲುವೆಯ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಎಸ್.ಎನ್.ನಾಗರಾಜು ಆದೇಶ ಹೊರಡಿಸಿದ್ದಾರೆ.
ಕಾಲುವೆಯಿಂದ ರೈತರಿಗೆ ಹಾಗೂ ಕುಡಿಯುವ ನೀರಿನ ಅವಶ್ಯಕತೆಯನ್ನು ನೀಗಿಸಲು ಸಿಂಧನೂರು ಹಾಗೂ ಮಾನವಿ ತಾಲೂಕುಗಳಲ್ಲಿ ವಿತರಣಾ ಕಾಲುವೆಗಳ ಪ್ರದೇಶ ವ್ಯಾಪ್ತಿಯಲ್ಲಿ ನೀರಿನ ನಿರ್ವಹಣಾ ಕಾರ್ಯಕ್ಕಾಗಿ ರೈತರಿಂದ ಯಾವುದೇ ಅಡೆ ತಡೆಯಾಗದಂತೆ ಸುಲಲಿತವಾಗಿ ನೀರು ಸಂಗ್ರಹಣೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡಲು ಅಗತ್ಯ ಪೊಲೀಸ್ ಕಾವಲು ಹಾಕಲು ಅವರು ಸೂಚಿಸಿದ್ದಾರೆ.
ಕಾಲುವೆಯ ಮೈಲ್ 47ರಿಂದ 69ರ ವರೆಗಿನ ವಿತರಣಾ ಕಾಲುವೆಗಳ ಪ್ರದೇಶ ವ್ಯಾಪ್ತಿಯಲ್ಲಿ 100 ಮೀಟರ್ ಸುತ್ತಲಿನ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಈ ಆದೇಶವು ಫೆ.18ರ ಬೆಳಗ್ಗೆ 6ರಿಂದ ಫೆ.23ರ ಮಧ್ಯರಾತ್ರಿವರೆಗೆ ಜಾರಿಯಲ್ಲಿರುತ್ತದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.