ಯುಜಿಡಿ, ಯುಐಡಿಎಸ್ಸೆಸ್ಎಂಟಿ; 110 ಕೋಟಿ ಪ್ರಸ್ತಾವನೆಗೆ ಒಪ್ಪಿಗೆ
ಕನ್ನಡಪ್ರಭ ವಾರ್ತೆ ಮುದಗಲ್ ಫೆ.18
ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಯುಜಿಡಿ ಮತ್ತು ನೀರು ಸರಬರಾಜು ಯೋಜನೆ ಕೆಯುಐಡಿಎಫ್ ಆರಂಭಿಸುವ 100 ಕೋಟಿಯ ಯೋಜನೆ ಮತ್ತು ಯುಐಡಿಎಸ್ಎಸ್ಎಂಟಿ ಯೋಜನೆಯಡಿ 10 ಕೋಟಿಗೆ ಅಂದಾಜು ಪತ್ರಿಕೆ ತಯಾರಿಸುವ ಪ್ರಸ್ತಾವನೆಗೆ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ನೀಡಲಾಯಿತು.
ಸ್ಥಳೀಯ ಪಟ್ಟಣ ಪಂಚಾಯಿತಿ ಸಭೆಯಲ್ಲಿ ಪ್ರಸ್ತಾಪ ಮಾಡಿದ ಮುಖ್ಯಾಧಿಕಾರಿ ಎಂ.ವಿಜಯಲಕ್ಷ್ಮಿ ವಿಷಯಗಳ ಚರ್ಚೆ ಸಂದರ್ಭದಲ್ಲಿ ಈ ಯೋಜನೆಗಳಿಗೆ ಸಭೆ ಒಪ್ಪಿಗೆ ಸೂಚಿಸಬೇಕು ಎಂದರು.
ಅನುಮೋದನೆಗಾಗಿ ಕೇಂದ್ರಕ್ಕೆ: ಯುಐಡಿಎಸ್ಎಸ್ಎಂಟಿ ಯೋಜನೆಯಡಿ 10 ಕೋಟಿಯ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಈಗಾಗಲೇ ಅನುಮೋದನೆ ನೀಡಿ ಕೇಂದ್ರ ಸರ್ಕಾರದ ಅನುಮೋದನೆಗೆ ಕಳುಹಿಸಿದೆ. ಈ ಯೋಜನೆಯ ಕ್ರಿಯಾಯೋಜನೆಯನ್ನು ಪೌರಾಡಳಿತ ನಿರ್ದೇಶನಾಲಯಕ್ಕೆ ಸಲ್ಲಿಸಬೇಕಾಗಿದೆ ಎಂದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಸರ್ವ ಸದಸ್ಯರ ಅಭಿಪ್ರಾಯಗಳನ್ನು ಪಡೆಯಬೇಕು, ಪ್ರಸ್ತಾವನೆಯಲ್ಲಿ ಸರ್ಕಾರದ ನಿಯಮಾನುಸಾರ ಕ್ರಿಯಾಯೋಜನೆ ಸಿದ್ಧಪಡಿಸಬೇಕೆಂದು ಪಪಂ ಅಧ್ಯಕ್ಷ ರಜ್ಜಬಲಿ ಟಿಂಗ್ರಿ ಹೇಳಿದಾಗ ಸರ್ವ ಸದಸ್ಯರು ಅವರನ್ನು ಬೆಂಬಲಿಸಿದರು.
ವಾಗ್ವಾದ: ಸಭೆಯಲ್ಲಿ ಸಮರ್ಪಕ ಮಾಹಿತಿ ಇಲ್ಲ ಎಂದು ಈ ಹಿಂದಿನ ಸಭೆಯನ್ನು ಮುಂದೂಡಲಾಗಿತ್ತು. ಈ ಸಭೆಯಲ್ಲಿಯೂ ಸಿಬ್ಬಂದಿ, ಮುಖ್ಯಾಧಿಕಾರಿಗಳು ಸಮರ್ಪಕ ಮಾಹಿತಿ ನೀಡಿಲ್ಲ ಎಂದು ಸದಸ್ಯ ವೀರೇಶ ವಡ್ಡರ, ಮಹ್ಮದ್ ಸಾದಿಕ್ಅಲಿ, ಶಿವರಾಜ ತಳವಾರ, ಮಾಸೂಮ ಷರೀಫ್ ಮುಖ್ಯಾಧಿಕಾರಿಗಳ ಮೇಲೆ ಹರಿಹಾಯ್ದರು.
ಹಿಂದಿನ ಸಭೆಗಳಲ್ಲಿನ ನಡವಳಿಕೆಗಳ ಬಗ್ಗೆ ಏನು ಕೆಲಸ ಮಾಡಲಾಗಿದೆ ಎನ್ನುವ ಬಗ್ಗೆ ಮಾಹಿತಿ ನೀಡಿದ್ದೇನೆ, ಸರಿ ಎನಿಸಿದರೆ ಒಪ್ಪಿಕೊಳ್ಳಿ ಇಲ್ಲದಿದ್ದರೆ ಬಿಡಿ. ಆದರೆ ಸಭೆಯಲ್ಲಿ ಚಿಕ್ಕ ಕಾರಣ ಹೇಳಿ ನನ್ನನ್ನೇ ಟಾರ್ಗೆಟ್ ಮಾಡಬೇಡಿ ಎಂದು ಮುಖ್ಯಾಧಿಕಾರಿಗಳು ಹೇಳುತ್ತಿದ್ದಂತೆ ರೊಚ್ಚಿಗೆದ್ದ ಸದಸ್ಯರು ಸಭೆಯಲ್ಲಿ ಸದಸ್ಯರು ಕೇಳುವ ಮಾಹಿತಿಗೆ ಸರಿಯಾಗಿ ಉತ್ತರ ನೀಡದೆ ಗೌರವಕ್ಕೆ ಧಕ್ಕೆ ತರುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.
ಕಾಲಹರಣ ಮಾಡದಿರಲು ಮನವಿ: 11.30ಕ್ಕೆ ಸಭೆ ಆರಂಭವಾಗಿ ಮ.1 ಗಂಟೆಯಾದರೂ ಬರೀ ಲೆಕ್ಕ ಪರಿಶೀಲನೆಯಲ್ಲೇ ಕಾಲಹರಣ ಮಾಡಲಾಯಿತು. ಸಭೆಯಲ್ಲಿ ಚರ್ಚಿಸತಕ್ಕ ವಿಷಯಗಳು ಬಹಳಷ್ಟಿವೆ, ಈಗ ಸಮಯ ಹಾಳು ಮಾಡುವುದನ್ನು ಕೈಬಿಡಿ ಎಂದು ಸದಸ್ಯ ಮಹ್ಮದ್ ಸಾದಿಕ್ ಅಲಿ ಸಭೆಯಲ್ಲಿ ಮನವಿ ಮಾಡಿದಾಗ ಅವರ ಮಾತಿಗೆ ಸದಸ್ಯರು ಬೆಂಬಲಿಸಿದರು.
15 ದಿನ ಗಡುವು: ಪಟ್ಟಣದಲ್ಲಿ ಅಕ್ರಮ ನಳಗಳನ್ನು ಹೊಂದಿರುವವರಿಗೆ 155 ದಿನ ಗಡುವು ನೀಡಿ ಅಷ್ಟರಲ್ಲಿ ಸಕ್ರಮಗೊಳಿಸಿಕೊಳ್ಳದಿದ್ದರೆ ಅವರ ನಳಗಳ ಸಂಪರ್ಕ ಕಟ್ ಮಾಡಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಾಂಗದವರು ಅಕ್ರಮ ನಳ ಹೊಂದಿದ್ದರೆ 22.75 ಯೋಜನೆಯಡಿ ಅವರ ನಳದ ಠೇವಣಿ ಜಮಾ ಮಾಡಿಕೊಂಡು ಸಕ್ರಮಗೊಳಿಸಿಕೊಳ್ಳಲು ಸಭೆ ಒಪ್ಪಿಗೆ ನೀಡಿತು.
ಪರಿಶಿಷ್ಟ ಜಾತಿ, ಪಂಗಡದ ಜನಾಂಗಕ್ಕೆ ಮೀಸಲಿರುವ ಶೇ.22.75 ಯೋಜನೆಯ ವಿವಿಧ ಯೋಜನೆಗಳ ಫಲಾನುಭವಿಗಳ ಆಯ್ಕೆ ಜವಾಬ್ದಾರಿಯನ್ನು ಎಸ್ಸಿ, ಎಸ್ಟಿ ಸಮಿತಿಗೆ ನೀಡಲಾಯಿತು. ವಿದ್ಯಾರ್ಥಿಗಳಿಗೆ ಶಿಷ್ಯ ವೇತನ, ಕಚ್ಚಾ ಪಕ್ಕಾ ಮನೆಗಳ, ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಬಂದ ಅರ್ಜಿಗಳಲ್ಲಿ ಫಲಾನುಭವಿಗಳ ಆಯ್ಕೆ ಮಾಡಲು ಸೂಚಿಸಲಾಯಿತು.
ಮೂಂದೂಡಿಕೆ: ಪಟ್ಟಣದ ವಿವಿದ ಸರ್ವೆ ನಂಬರ್ಗಳಲ್ಲಿ ಎನ್ಎ ಮಾಡಿದ ಜಮೀನಲ್ಲಿ ವಾಸ ಮತ್ತು ವಾಣಿಜ್ಯ ಉದ್ದೇಶಕ್ಕಾಗಿ ವಿನ್ಯಾಸಕ್ಕೆ ಅನುಮೋದನೆ ನೀಡಬೇಕೆಂದು 7 ಜನರು ಅರ್ಜಿ ಸಲ್ಲಿಸಿದ್ದು ಈ ವಿಷಯದ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳೋಣ ಎಂದು ಸದಸ್ಯ ವೀರಭದ್ರಪ್ಪ ಕೊಳ್ಳಿ ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದರಿಂದ ಅನುಮೋದನೆ ನೀಡುವುದನ್ನು ಮುಂದಿನ ಸಭೆಗೆ ಮುಂದೂಡಲಾಯಿತು.
ಪಟ್ಟಣ ಪಂಚಾಯಿತಿಗೆ ಕಾನೂನು ಸಲಹೆಗಾರರಾಗಿ ಉಚಿತ ಸೇವೆ ಮಾಡಲು ಚಂದ್ರಶೇಖರ ವಕೀಲರು ಅರ್ಜಿ ಸಲ್ಲಿಸಿದ್ದು, ಈಗಾಗಲೇ ಶರಣಪ್ಪ ನಾಗಲಾಪುರ ಎನ್ನುವವರು ಕಾನೂನು ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಂದ ಏನೂ ತೊಂದರೆಯಾಗಿಲ್ಲ. ಅಲ್ಲದೆ ಚಂದ್ರಶೇಖರ ವಕೀಲರು ಪಪಂ ವಾಣಿಜ್ಯ ಮಳಿಗೆಗಳ ಬಾಡಿಗೆದಾರರ ಪರವಾಗಿ ಮತ್ತು ಪಪಂ ವಿರುದ್ಧ ವಾದ ಮಂಡಿಸುತ್ತಿದ್ದಾರೆ. ಅವರನ್ನು ನೇಮಕ ಮಾಡಿಕೊಳ್ಳಬೇಡಿ ಎಂದು ಸದಸ್ಯ ಶಿವರಾಜ ತಳವಾರ ಸಭೆಯಲ್ಲಿ ತಿಳಿಸಿದರು. ಕಾನೂನು ಸಲಹೆಗಾರರನ ನೇಮಕ ಕುರಿತು ಗೊಂದಲ ಸೃಷ್ಟಿಯಾಗಿದ್ದರಿಂದ ಮುಂದೂಡಿ ಎಂದು ಅಧ್ಯಕ್ಷ ರಜ್ಜಬಲಿ ತಿಳಿಸಿದರು.