ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

22ರಂದು ಪತ್ರಿಕೋದ್ಯಮ ಕಾಲೇಜಿನ ದಶಮಾನೋತ್ಸವ

Vishwanath S
Updated On : 20 Feb 2014, 11:30 am

ರಾಯಚೂರು: ಸ್ಪಿಲ್ ಪತ್ರಿಕೋದ್ಯಮ ಮಹಾವಿದ್ಯಾಲಯವು ಪ್ರಾರಂಭಗೊಂಡು 10 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಾಲೇಜಿನ ದಶಮಾನೋತ್ಸವ ಸಮಾರಂಭವನ್ನು ಫೆ.22 ರಂದು ಆಯೋಜಿಸಲಾಗಿದೆ ಎಂದು ಸ್ಪಿಲ್ ಪತ್ರಿಕೋದ್ಯಮ ಮಹಾವಿದ್ಯಾಲಯದ ನಿರ್ದೇಶಕ ಬಿ. ವೆಂಕಟಸಿಂಗ್ ಹೇಳಿದರು.
ನಗರದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫೆ.22ರಂದು ಬೆಳಗ್ಗೆ 10.30ಕ್ಕೆ ನಗರದ ಸ್ಪಿಲ್ ಕಾಲೇಜಿನ ಆವರಣದಲ್ಲಿ ದಶಮಾನೋತ್ಸವ ಸಮಾರಂಭ ಆಯೋಜಿಸಲಾಗಿದೆ. ಉದ್ಘಾಟನೆಯನ್ನು 'ವಿಜಯವಾಣಿ' ಪತ್ರಿಕೆ ಸಂಪಾದಕ ತಿಮ್ಮಪ್ಪ ಭಟ್ ನೆರವೇರಿಸಲಿದ್ದಾರೆಂದು ತಿಳಿಸಿದರು.
ಸಮಾರಂಭದಲ್ಲಿ ಹಿರಿಯ ಪತ್ರಕರ್ತರಾದ ಈಶ್ವರ ದೈತೋಟ, ಎನ್. ನಾಗರಾಜ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ದೇವದುರ್ಗ ಶಾಸಕ ವೆಂಕಟೇಶ ನಾಯಕ, ನಗರ ಶಾಸಕ ಡಾ. ಶಿವರಾಜ್ ಪಾಟೀಲ್, ಗ್ರಾಮೀಣ ಶಾಸಕ ತಿಪ್ಪರಾಜು ಹವಾಲ್ದಾರ್ ಪಾಲ್ಗೊಳ್ಳಲಿದ್ದಾರೆಂದು ಹೇಳಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ವಿಜೇತರಾದ ತಿಮ್ಮಪ್ಪ ಭಟ್, ಎನ್. ನಾಗರಾಜ್ ಹಾಗೂ ನಿವೃತ್ತಿ ಹೊಂದಲಿರುವ ಕಾಲೇಜಿನ ಪ್ರಾಚಾರ್ಯ ಅಯ್ಯಪ್ಪ ತುಕ್ಕಾಯಿ ಅವರನ್ನು ಸನ್ಮಾನಿಸಲಾಗುತ್ತದೆ. ಸಮಾರಂಭದ ಅಧ್ಯಕ್ಷತೆಯನ್ನು 'ಸುದ್ದಿಮೂಲ' ದಿನಪತ್ರಿಕೆಯ ಸಂಪಾದಕ ಬಸವರಾಜಸ್ವಾಮಿ ವಹಿಸಲಿದ್ದಾರೆಂದರು.
ಇದೇ ಸಮಾರಂಭದಲ್ಲಿ ಜಿಲ್ಲೆಯ ಹಾಗೂ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ ಮತ್ತು ಸಲ್ಲಿಸುತ್ತಿರುವ ಪತ್ರಕರ್ತರ ಮಾಹಿತಿ ಕೈಪಿಡಿ ಬಿಡುಗಡೆಗೊಳಿಸಲಾಗುತ್ತದೆ. ವಾರ್ಷಿಕ ಪ್ರಶಸ್ತಿ ಪ್ರದಾನ ಮತ್ತು ವಿದ್ಯಾರ್ಥಿಗಳ ಹಳೆಯ ಪತ್ರಿಕೆಗಳ ಪ್ರದರ್ಶನದ ಉದ್ಘಾಟನೆ ನೆರವೇರಿಸಲಾಗುತ್ತದೆ ಎಂದು ತಿಳಿಸಿದರು.
ಸ್ಪಿಲ್ ಪತ್ರಿಕೋದ್ಯಮ ಕಾಲೇಜಿನಲ್ಲಿ ಸದ್ಯ 85ಕ್ಕೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 2004 ರಲ್ಲಿ ಆರಂಭಗೊಂಡ ಕಾಲೇಜಿನಿಂದ ಇದುವರೆಗೆ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ. ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಅನೇಕರು ವಿವಿಧ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಸ್ಪಿಲ್ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಈ ವೇಳೆ ಬೆಳ್ಳಿ ಪದಕ ಪ್ರದಾನ ಮಾಡಲಾಗುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement