ರೈತನ ಮೇಲೆ ಹಲ್ಲೆ; ಡಿಎಸ್‌ಎಸ್ ಆಕ್ರೋಶ
ಸಿಂಧನೂರು: ತಾಲೂಕಿನ ಗುಡದೂರ ಗ್ರಾಮದ ರೈತ ತಿಮ್ಮನಗೌಡ ಗುಡದೂರ ಅವರ ಮೇಲೆ ಕರಟೂರಿ ವೆಂಕಣ್ಣ ಹಾಗೂ ಆತನ ಬೆಂಬಲಿಗರು ಗುಂಪು ಕಟ್ಟಿಕೊಂಡು ಹಲ್ಲೆ ನಡೆಸಿರುವುದು ಖಂಡನೀಯ. ಘಟನೆಗೆ ಕಾರಣರಾದವರನ್ನು ಗೂಂಡಾ ಕಾಯ್ದೆಯಡಿ ಸೇರಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಗೃಹ ಸಚಿವರನ್ನು ಒತ್ತಾಯಿಸಿದೆ.
ತುಂಗಭದ್ರಾ ಉಪಕಾಲುವೆ 54ರ ಬಳಿ ಕರಟೂರಿ ವೆಂಕಣ್ಣ ಹಾಗೂ ಆತನ ಬೆಂಬಲಿಗರು ಸಂಚು ರೂಪಿಸಿ, ವ್ಯವಸ್ಥಿತವಾಗಿ ಗುಂಪು ಕಟ್ಟಿಕೊಂಡು ಬಂದು ಒಬ್ಬರೇ ಇರುವುದನ್ನು ಗಮನಿಸಿ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ. ಕರಟೂರಿ ವೆಂಕಣ್ಣ ಆಂಧ್ರದ ಭೂಮಾಲೀಕ. ತನ್ನ ಅಕ್ರಮ ಬತ್ತ ಬೆಳೆಯುವ ಹೊಲಕ್ಕೆ ನೀರು ಮುಟ್ಟುತ್ತಿಲ್ಲವೆಂದು, ಗುಡದೂರ ತಿಮ್ಮನಗೌಡ ತನ್ನ ಜಮೀನಿಗೆ ಅಕ್ರಮ ನೀರಾವರಿ ಮಾಡಿಕೊಂಡು ನೀರು ಕಳವು ಮಾಡುತ್ತಿದ್ದಾರೆ ಎಂದು ಆರೋಪಿಸಿ ಗುಡದೂರ ಅವರಿಗೆ ಹೊಡೆದಿದ್ದಾರೆ. ಇದರಿಂದ ಸಾರ್ವಜನಿಕರಲ್ಲಿ ಭಯದ ವಾತಾವರಣ ಉಂಟಾಗಿದೆ. ಹಲ್ಲೆಗೊಳಗಾದ ತಿಮ್ಮನಗೌಡ ಪ್ರಾಣ ಭಯದಿಂದ ತಪ್ಪಿಸಿಕೊಂಡು ಬಂದು ಮನೆ ಸೇರಿದ್ದು, ಅವಮಾನ ಮತ್ತು ಅಂಜಿಕೆಯಲ್ಲಿ ಬದುಕು ಸಾಗಿಸುವ ದುಃಸ್ತಿತಿ ಎದುರಿಸುತ್ತಿದ್ದಾರೆ ಎಂದು ಡಿಎಸ್‌ಎಸ್ ಮುಖಂಡ ಅಶೋಕ ನಂಜಲದಿನ್ನಿ ವಿವರಿಸಿದ್ದಾರೆ.
ಕಾನೂನು ಕ್ರಮ: ತಿಮ್ಮನಗೌಡರು ಅಕ್ರಮವಾಗಿ ನೀರು ಪಡೆಯುತ್ತಿದ್ದರೆ, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬಹುದಾಗಿತ್ತು. ಇದಕ್ಕೆ ಕಾನೂನಿನಲ್ಲಿ ಅವಕಾಶಗಳಿವೆ. ಆದರೆ ಕರಟೂರಿ ವೆಂಕಣ್ಣ ಕಾನೂನು ಕೈಗೆತ್ತಿಕೊಂಡು ಹಲ್ಲೆ ಮಾಡಿರುವುದು ಇವರ ಗೂಂಡಾ ಪ್ರವೃತ್ತಿ ತೋರಿಸುತ್ತದೆ. ಇವರಿಗೆ ಹಲ್ಲೆ ಮಾಡಲು ಅಧಿಕಾರ ಕೊಟ್ಟವರು ಯಾರು ಕೂಡಲೇ ಇವರ ಮೇಲೆ ಪೊಲೀಸ್ ಇಲಾಖೆ ಕ್ರಮಕೈಗೊಂಡು ಗೂಂಡಾ ಕಾಯ್ದೆಯಲ್ಲಿ ಬಂಧಿಸಬೇಕು ಎಂದು ತಹಸೀಲ್ದಾರ ಅವರ ಮುಖಾಂತರ ಗೃಹ ಸಚಿವರಿಗೆ ಮನವಿ ಪತ್ರ ಕಳುಹಿಸಲಾಯಿತು.
ಮುಖಂಡರಾದ ತಿಮ್ಮಣ್ಣ ಅಲಬನೂರ, ನಿರುಪಾದಿ ಎಲೆಕೂಡ್ಲಗಿ, ಬಸವರಾಜ ಉದ್ಬಾಳ, ನೂರ್ ಮಹ್ಮದ್ ತುರ್ವಿಹಾಳ, ಮೌನೇಶ ರಾಗಲಪರ್ವಿ, ಮಹಾದೇವ ಗಿಣಿವಾರ, ರಮೇಶ ಬಸ್ಸಾಪುರ, ಸೋಮೆನಾಯಕ ಹಸಮಕಲ್ ಮತ್ತಿತರರು ಇದ್ದರು.