ಹಾಸ್ಟೆಲ್‌ಗಳಿಗೆ ಸೌಲಭ್ಯ: ತಹಸೀಲ್ದಾರ್ ಎಚ್ಚರಿಕೆ
ದೇವದುರ್ಗ: ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಹಸೀಲ್ದಾರ್ ಬಸಲಿಂಗಪ್ಪ ನೈಕೋಡಿ ಎಚ್ಚರಿಸಿದರು.
ವಸತಿ ನಿಲಯದ ವಿದ್ಯಾರ್ಥಿನಿಯರು ಗುರುವಾರ ಮಿನಿವಿಧಾನಸೌಧಕ್ಕೆ ಆಗಮಿಸಿ ತಹಸೀಲ್ದಾರರ ಎದುರು ತಮ್ಮ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿದಾಗ ತಹಸೀಲ್ದಾರ್ ಮಾತನಾಡಿ, ಹಿಂದುಳಿದ ವರ್ಗಗಳ ವಸತಿ ನಿಲಯದ ಪಿಯುಸಿ ಮತ್ತು ಬಿಎ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಸಮೀಪಿಸುತ್ತಿದ್ದು ಪಠ್ಯಪುಸ್ತಕ ನೀಡದಿರುವ ಬಗ್ಗೆ ಬೇಸರ ವ್ಯಕತಪಡಿಸಿದರು.
ಕಠಿಣ ಕ್ರಮದ ಎಚ್ಚರಿಕೆ: ವಸತಿ ನಿಲಯಗಳಲ್ಲಿ ಕುಡಿವ ನೀರು, ಶೌಚಾಲಯ ಹಾಗೂ ಸ್ನಾನಗೃಹ ತೊಂದರೆಯಿರುವುದನ್ನು ಕೂಡಲೇ ಪರಿಹರಿಸುವಂತೆ ಜನವರಿಯಲ್ಲಿಯೇ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆದರೂ ಅವರು ನಿರ್ಲಕ್ಷ್ಯ ತೋರಿದ್ದು ಅರಿತ ತಹಸೀಲ್ದಾರ್ ನೈಕೋಡಿ ಅವರು ಅಧಿಕಾರಿಗಳ ಕಾರ್ಯವೈಖರಿಗೆ ಬೇಸರಗೊಂಡು ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಮೂಲ ಸೌಲಭ್ಯ ಕಲ್ಪಿಸದಿದ್ದರೆ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾ ಮುಖಂಡರಾದ ರಮೇಶ ರಾಮನಾಳ, ತಾಲೂಕು ಅಧ್ಯಕ್ಷ ಮಹ್ಮದ್ ಮುಸ್ತಾಫ್, ಪ್ರಭಾವತಿ, ದೇವಮ್ಮ, ಕವಿತಾ, ಸುಜಾತ ಸೇರಿ ನೂರಾರು ವಿದ್ಯಾರ್ಥಿನಿಯರಿದ್ದರು.