'ಖಾಸಗಿ ಶಿಕ್ಷಣ ಸಂಸ್ಥೆಗಳ ಯಶಸ್ಸಿಗೆ ಆಡಳಿತ ಮಂಡಳಿ ಆಸಕ್ತಿ ಕಾರಣ'
ಸಿಂಧನೂರು: ಖಾಸಗಿ ಶಿಕ್ಷಣ ಸಂಸ್ಥೆಗಳು ಯಶಸ್ವಿಯಾಗಬೇಕಾದರೆ ಬೋಧಕ ವರ್ಗ, ಪಾಲಕ ವರ್ಗ ಮತ್ತು ಆಡಳಿತ ಮಂಡಳಿ ಸಮಾನ ಆಸಕ್ತಿಯಿಂದ ಕಾರ್ಯನಿರ್ವಹಿಸಬೇಕಾಗುತ್ತದೆ. ಶ್ರೀಕೃಷ್ಣದೇವರಾಯ ವಿದ್ಯಾಸಂಸ್ಥೆಯು ಈ ಮಾತಿಗೆ ಅನ್ವರ್ಥಕವಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜ್ ಅಭಿಪ್ರಾಯಪಟ್ಟರು.
ತಾಲೂಕಿನ ಶ್ರೀಕೃಷ್ಣದೇವರಾಯ ವಿದ್ಯಾಸಂಸ್ಥೆಯ 31ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಕಳೆದ 30 ವರ್ಷಗಳಿಂದ ಶೈಕ್ಷಣಿಕ ಪ್ರಗತಿಯಲ್ಲಿ ಪ್ರಥಮ ಸ್ಥಾನದಲ್ಲಿರುವ ಸಂಸ್ಥೆಯ ಸೇವಾ ಕಾರ್ಯವನ್ನು ಪ್ರಶಂಸಿಸಿದರು.
ಹತ್ತು ವರ್ಷ ತಾವು ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿರುವುದಾಗಿ ಹೇಳಿದ ನಾಗರಾಜ, ತಮ್ಮ ಮಾರ್ಗದರ್ಶನದಲ್ಲಿ ಹಲವಾರು ಸಂಸ್ಥೆಗಳು ನಡೆಯುತ್ತಿವೆ. ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡು ತಂದೆ-ತಾಯಿ ಮತ್ತು ಗುರುಗಳನ್ನು ಗೌರವಿದರೆ, ಬದುಕಿನ ಗುರಿಯನ್ನು ಮುಟ್ಟಲು ಸರಳವಾಗುತ್ತದೆ ಎಂದು ಹೇಳಿದರು.
ಉತ್ತಮ ಅಭ್ಯಾಸ: ಸಂಸ್ಥೆ ಆಡಳಿತಾಧಿಕಾರಿ ವೈ. ನರೇಂದ್ರನಾಥ ಮಾತನಾಡಿ, ರೈತಾಪಿ ಮಕ್ಕಳಿಗಾಗಿ ಈ ಸಂಸ್ಥೆಯನ್ನು ಹುಟ್ಟುಹಾಕಲಾಗಿದ್ದು, ಸಹಸ್ರಾರು ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸ ಮಾಡಿ ಉತ್ತಮ ಸ್ಥಾನದಲ್ಲಿದ್ದಾರೆ ಎಂದು ವಿವರಿಸಿದರು. ಸಂಸ್ಥೆಯ ಉಪಾಧ್ಯಕ್ಷ ಎನ್. ಕೋಟೇಶ್ವರರಾವ್ ವಕೀಲ, ಪ್ರಾಂಶುಪಾಲ ಷಣ್ಮುಖರಾವ್ ಮಾತನಾಡಿದರು.
ಬೆಳಗಿನ ಸಮಯದಲ್ಲಿ ಬಿಜಾಪುರ ಜ್ಞಾನ ಆಶ್ರಮದ ಸಿದ್ದೇಶ್ವರ ಸ್ವಾಮೀಜಿ ಭಾಗವಹಿಸಿ, ಮಕ್ಕಳಿಂದ ತಂದೆ-ತಾಯಿಗಳಿಗೆ ಗೌರವ ಭಾವನೆ ಮೂಡಿಸುವಂತಹ ಸಂಸ್ಕೃತಿ ಮತ್ತು ಸಂಪ್ರದಾಯ ಬೆಳೆಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಪ್ರೀತಿ ಮತ್ತು ದೇಶಭಕ್ತಿ ಹುಟ್ಟುತ್ತದೆ ಎಂದು ವಿವರಿಸಿದರು.
ಬಸವಕೇಂದ್ರದ ಗೌರವಾಧ್ಯಕ್ಷ ವೀರಭದ್ರಪ್ಪ ಕುರುಕುಂದಿ, ತಂದೆ-ತಾಯಿಗಳಿಗಿಂತ ಬೇರೊಂದು ದೇವರಿಲ್ಲ. ಅವರನ್ನು ಗೌರವಿಸಿದರೆ ದೇವರನ್ನು ಪ್ರಾರ್ಥಿಸಿದಂತೆ ಎಂದರು.
ಹಿರಿಯ ಉಪನ್ಯಾಸಕ ಎಚ್.ಜಿ. ಹಂಪಣ್ಣ, ಉಪನ್ಯಾಸಕರಾದ ಶರಣಬಸವ, ಅಶ್ವಿನಿ ನಿರೂಪಿಸಿದರು. ಸಮನ್ವಯ ಅಧಿಕಾರಿ ಕೆ. ಹೇಮಲತಾ ವಂದಿಸಿದರು.