ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನಮೋ ಟೀ ಸ್ಟಾಲ್‌ಗೆ ಚಾಲನೆ

Vishwanath S
Updated On : 22 Feb 2014, 11:15 am

ಮಸ್ಕಿ: ಇಲ್ಲಿಗೆ ಸಮೀಪದ ಬಳಗಾನೂರು ಗ್ರಾಮದಲ್ಲಿ ಮಸ್ಕಿ ಬಿಜೆಪಿ ಯುವ ಮೋರ್ಚಾ ಘಟಕದಿಂದ ಗುರುವಾರ ನಮೋ ಟೀ ಸ್ಟಾಲ್ ಅಭಿಯಾನಕ್ಕೆ ಚಹಾ ವಿತರಿಸುವುದರೊಂದಿಗೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಂಕರ ಮೇದಾರ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು ಸತತ 60 ವರ್ಷಗಳಿಂದ ಕಾಂಗ್ರೆಸ್ ಪಕ್ಷ ದೇಶವನ್ನು ಆಳುವ ಮೂಲಕ ಹಾಳುಗೆಡವಿದೆ. ಭ್ರಷ್ಟಾಚಾರದಲ್ಲಿ ದೊಡ್ಡ ಹೆಸರು ತಂದುಕೊಟ್ಟಿದೆ. ದೇಶದ ಅಭಿವೃದ್ಧಿ ಕಡೆಗಣಿಸಿದೆ. ದೇಶದಲ್ಲಿನ ಬಡತನ ನಿರ್ಮೂಲನೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಅವರಿಂದ ಮಾತ್ರ ಸಾಧ್ಯ ಎಂದು ಹೇಳಿದರು. ಮಸ್ಕಿ ಬಿಜೆಪಿ ಬ್ಲಾಕ್ ಅಧ್ಯಕ್ಷ ಸಂಗಮೇಶ ಹತ್ತಿಗುಡ್ಡ ಮಾತನಾಡಿದರು. ಶಿವನಗೌಡ ಗೊರೆಬಾಳ, ಹನುಮೇಶ ನಾಯಕ ಬಳಗಾನೂರ, ರುದ್ರಗೌಡ, ಸಂಜಯ ಸೇಠ್, ಬಸವರಾಜ, ಪಂಪಾಪತಿ, ಬಸವರಾಜ ಹುಲ್ಲೂರ, ಬಸವನಗೌಡ, ಶೇಖರಪ್ಪ, ಅಮರಪ್ಪ, ಶಿವು ಇದ್ದರು.
ಇಂದು ಹಾಸ್ಟೆಲ್ ವಾರ್ಷಿಕೋತ್ಸವ
ಸಿಂಧನೂರು:  ಡಾ. ಬಿ.ಆರ್.  ಅಂಬೇಡ್ಕರ್ ಬಾಲಕರ ವಸತಿ ನಿಲಯದ 20ನೇ ವಾರ್ಷಿಕೋತ್ಸವ, ಎಸ್‌ಎಸ್‌ಎಲ್‌ಸಿ,ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡಗೆ ಸಮಾರಂಭ ಫೆ.22 ರಂದು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ಶಾಸಕ ಹಂಪನಗೌಡ ಬಾದರ್ಲಿ ಉದ್ಘಾಟಿಸುವರು. ಸಮಾಜ ಕಲ್ಯಾಣಾಧಿಕಾರಿ ಎನ್. ಅನಸೂಯಾ ದೇವಿ ಅಧ್ಯಕ್ಷತೆ ವಹಿಸುವರು. ಮುಖ್ಯ ಭಾಷಣಕಾರರಾಗಿ ಸುದ್ದಿ ಚಿಂತನ ಪತ್ರಿಕೆ ಸಂಪಾದಕ ಸಿ.ಎಚ್.ನಾರಿನಾಳ, ಶಿಕ್ಷಕ ವೆಂಕನಗೌಡ ವಟಗಲ್, ಹಾಸ್ಯ ಕಲಾವಿದ ನಾಗೇಶ ಕರಾಟೆ ಮಾತನಾಡುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ವೈ.ಎ. ಕಾಳೆ, ತಹಸೀಲ್ದಾರ್ ವೆಂಕನಗೌಡ ಆರ್. ಪಾಟೀಲ್, ತಾ.ಪಂ.ಅಧ್ಯಕ್ಷೆ ಬಸಮ್ಮ ಕೊಟ್ರಪ್ಪ, ಉಪಾಧ್ಯಕ್ಷ ನಾಗಪ್ಪ ಗೋಮರ್ಸಿ, ನಗರಸಭೆ ಅಧ್ಯಕ್ಷ ಸೈಯದ್ ಜಾಫರ್ ಅಲಿ ಜಾಗೀರದಾರ, ನಗರಸಭೆ ಸದಸ್ಯ ಶೇಖರಪ್ಪ ಗಿಣಿವಾರ, ಡಿವೈಎಸ್‌ಪಿ ಎಂ. ಸೂರ್ಯವಂಶಿ, ಪಿಎಸ್‌ಐ ಬಾಳನಗೌಡ ಪಾಲ್ಗೊಳ್ಳುವರು.ವಸತಿ ನಿಲಯದ ಮೇಲ್ವಿಚಾರಕ ಪಾಂಡಪ್ಪ, ರಮೇಶ, ಕು. ಶೋಭಾ, ಸಿದ್ದಲಿಂಗಮ್ಮ, ಶಶಿಧರ, ರವಿಚಂದ್ರ, ಮಲ್ಲನಾಥ ಇರುವರು.
ಮಕ್ಕಳ ಪ್ರತಿಭೆ ಪ್ರೋತ್ಸಾಹಿಸಿ: ಪಾಟೀಲ್
ದೇವದುರ್ಗ: ಮಕ್ಕಳಲ್ಲಿರುವ ಪ್ರತಿಭೆಯನ್ನು ಶಾಲೆಯ ಶಿಕ್ಷಕರಂತೆಯೇ ಪಾಲಕರೂ ಸಹ ಗುರುತಿಸಿ ಪ್ರೋತ್ಸಾಹಿಸುವಂತೆ ಜಾಲಹಳ್ಳಿಯ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರಾಚಾರ್ಯ ಸುಭಾಷ್ ಪಾಟೀಲ್ ಕರೆ ನೀಡಿದರು. ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಾಗೂ ಸಿ.ವಿ. ರಾಮನ್ ಅವರ ಜನ್ಮ ದಿನಾಚರಣೆ ಅಂಗವಾಗಿ ಪಟ್ಟಣದ ಜ್ಞಾನಗಂಗಾ ಹಿರಿಯ ಪ್ರಾಥಮಿಕ ಶಾಲೆ ಮತ್ತು ಯುರೋ ಕಿಡ್ಸ್ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಸಮಾಜ ವಿಜ್ಞಾನ ವಿಷಯಗಳ ವಸ್ತು ಪ್ರದರ್ಶನ ಸಮಾರಂಭದಲ್ಲಿ ಮಾತನಾಡಿದರು. ನಿವೃತ್ತ ಶಿಕ್ಷಕ ಮನೋಹರ ಕಳಸ, ಶಿಕ್ಷಣ ಇಲಾಖೆಯ ಜಿ. ಶರಣಪ್ಪ, ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಎನ್. ವೆಂಕಟೇಶ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷೆ ಶ್ರೀದೇವಿ ಪಾಟೀಲ್, ಅಮೃತ ಪಾಟೀಲ್, ಆಡಳಿತಾಧಿಕಾರಿ ರವಿಕುಮಾರ ಮರಡ್ಡಿ, ಶಿಕ್ಷಕರಾದ ಸಿದ್ದೇಶ, ತುಷಾರ, ಶ್ರೀಕಾಂತ, ಪಂಪಣ್ಣ ಸೇರಿ ಅನೇಕರಿದ್ದರು.
ಶ್ರೀಶೈಲಂಗೆ ಬಸ್ ಸೌಲಭ್ಯ
ರಾಯಚೂರು: ಆಂಧ್ರದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀಶೈಲಂನಲ್ಲಿ ಫೆ.27ರಂದು ಮಹಾಶಿವರಾತ್ರಿ ಮತ್ತು ಫೆ.28ರಂದು ನಡೆಯಲಿರುವ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯು ಫೆ.21ರಿಂದ ಮಾ.1 ರವರೆಗೆ ವಿಶೇಷ ಬಸ್ ಸಂಚಾರ ಸೌಲಭ್ಯ ಕಲ್ಪಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಸಾರಿಗೆ ಸಂಸ್ಥೆಯು ಲಿಂಗಸ್ಗೂರು-ಕವಿತಾಳ-ರಾಯಚೂರು-ಐಜ್-ಕರ್ನೂಲು-ಶ್ರೀಶೈಲಂ, ಸಿಂಧನೂರು-ಆದೋನಿ-ಕರ್ನೂಲು-ಶ್ರೀಶೈಲಂ, ಮಾನವಿ-ರಾಯಚೂರು-ಗದ್ವಾಲ್-ಶ್ರೀಶೈಲಂ, ದೇವದುರ್ಗ-ರಾಯಚೂರು-ಶ್ರೀಶೈಲಂ, ರಾಯಚೂರು-ಗದ್ವಾಲ್-ಶ್ರೀಶೈಲಂ, ರಾಯಚೂರು-ಮಂತ್ರಾಲಯಂ-ಕರ್ನೂಲು- ಶ್ರೀಶೈಲಂ ಮಾರ್ಗಗಳಲ್ಲಿ ವಿಶೇಷ ಬಸ್ ಸಂಚಾರ ಕಲ್ಪಿಸಿರುವುದಾಗಿ ತಿಳಿಸಿದೆ. ಅದೇ ರೀತಿ ಗ್ರಾಮೀಣ ಪ್ರದೇಶದಿಂದ 50 ಜನರು ಒಂದೇ ಬಾರಿಗೆ ಶ್ರೀಶೈಲಂಗೆ ತೆರಳಲು ಸಿದ್ಧರಿದ್ದಲ್ಲಿ ಅಂಥ ಪ್ರದೇಶದಿಂದಲೇ ಶ್ರೀಶೈಲಂಗೆ ಬಸ್ ಓಡಿಸಲಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಸಮೀಪದ ಸಾರಿಗೆ ಸಂಸ್ಥೆಯ ಬಸ್ ಘಟಕಗಳನ್ನು ಸಂಪರ್ಕಿಸಲು ಸಂಸ್ಥೆ ಮನವಿ ಮಾಡಿದೆ.
12 ನಾಮಪತ್ರ ತಿರಸ್ಕೃತ
ಮಸ್ಕಿ: ಸ್ಥಳೀಯ ಗ್ರಾಪಂನ 11 ಸ್ಥಾನಗಳಿಗೆ ಮಾ. 2ರಂದು ನಡೆಯುವ ಉಪಚುನಾವಣೆಗೆ ಸಲ್ಲಿಕೆಯಾಗಿದ್ದ 92 ಅಭ್ಯರ್ಥಿಗಳ ನಾಮಪತ್ರಗಳಲ್ಲಿ 12 ನಾಮಪತ್ರಗಳು ಗುರುವಾರ ನಡೆದ ಪರಿಶೀಲನೆ ವೇಳೆ ತಿರಸ್ಕೃತವಾಗಿವೆ. ನಾಮಪತ್ರ ಪರೀಶೀಲನೆ ವೇಳೆ ಗ್ರಾಪಂ.ನ 1ನೇ ವಾರ್ಡ್‌ನ 11 ನಾಮಪತ್ರಗಳಲ್ಲಿ 2, 5ನೇ ವಾರ್ಡ್ 8ರಲ್ಲಿ 1, 8ನೇ ವಾರ್ಡ್‌ನ 18ರಲ್ಲಿ 4, 9ನೇ ವಾರ್ಡಿನ 9ರಲ್ಲಿ 1, 13ನೇ ವಾರ್ಡಿನ 11ರಲ್ಲಿ 3 ಹಾಗೂ 14ನೇ ವಾರ್ಡಿನ 5ರಲ್ಲಿ 1 ನಾಮಪತ್ರ ತಿರಸ್ಕೃತವಾಗಿವೆ. ಒಟ್ಟು 80 ನಾಮಪತ್ರಗಳು ಕ್ರಮಬದ್ಧವಾಗಿದ್ದು, ಫೆ.22 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಮಾ.2 ರಂದು ಚುನಾವಣೆ ನಡೆಯಲಿದ್ದು ಮಾ. 5ಕ್ಕೆ ಮತಗಳ ಎಣಿಕೆ ಕಾರ್ಯ ನಡೆಯಲಿದೆ ಎಂದು ಚುನಾವಣಾಧಿಕಾರಿ ಆರ್.ಕೆ.ರಂಗಪ್ಪ, ಹಾಗೂ ಸಹಾಯಕ ಚುನಾವಣಾಧಿಕಾರಿ ಹನುಮೇಶ ಕುಲಕರ್ಣಿ ತಿಳಿಸಿದ್ದಾರೆ.
ಇಂದು ನಗರಕ್ಕೆ ಕೃಷಿ ಸಚಿವ
ರಾಯಚೂರು: ರಾಜ್ಯದ ಕೃಷಿ ಸಚಿವ ಕೃಷ್ಣಬೈರೇಗೌಡ ಅವರು ಫೆ. 22ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಅವರು ಬೆಳಗ್ಗೆ 5ಕ್ಕೆ ಬೆಂಗಳೂರಿನಿಂದ ಆಗಮಿಸಿ ಬೆಳಗ್ಗೆ 10ಕ್ಕೆ ರಾಯಚೂರು ಕೃಷಿ ವಿವಿಯಲ್ಲಿ ನಡೆಯಲಿರುವ ನಾಲ್ಕನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಅವರು ಬೆಳಗ್ಗೆ 11.30ಕ್ಕೆ ರಾಯಚೂರಿನಿಂದ ರಸ್ತೆ ಮಾರ್ಗವಾಗಿ ಹೈದ್ರಾಬಾದಿಗೆ ತೆರಳಿ ಅಲ್ಲಿಂದ ಬೆಂಗಳೂರಿಗೆ ಮರಳಲಿದ್ದಾರೆಂದು ಜಿಲ್ಲಾಧಿಕಾರಿ ಕಚೇರಿ ತಿಳಿಸಿದೆ.
ನಗರಸಭೆ; ಶಿವಾಜಿ ದಿನಾಚರಣೆ
ಸಿಂಧನೂರು: ನಗರಸಭೆ ಸಭಾಂಗಣದಲ್ಲಿ ಇತ್ತೀಚೆಗೆ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಆಚರಿಸಲಾಯಿತು. ನಗರಸಭೆ ಅಧ್ಯಕ್ಷ ಸೈಯದ್ ಜಾಫರ್ ಅಲಿ ಜಾಗೀರದಾರ ಶಿವಾಜಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು. ಎಸ್‌ಜೆಎಸ್‌ಆರ್‌ವೈ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ, ಉಪಾಧ್ಯಕ್ಷೆ ಅನಸೂಯಾ, ನಗರಸಭೆ ಸದಸ್ಯರಾದ ಚಂದ್ರಶೇಖರ ಮೈಲಾರ, ನಬಿಸಾಬ, ಸಣ್ಣವೀರಭದ್ರಪ್ಪ ಕುರುಕುಂದಿ, ಶರಣಬಸವ ನಟೇಕಲ್, ವೆಂಕಟೇಶ ಬಂಡಿ ವಕೀಲ, ಮೈಹಿಬೂಬ, ಅಂಗನವಾಡಿ ಮೇಲ್ವಿಚಾರಕಿಯರು, ಕಾರ್ಯಕರ್ತೆಯರು ಹಾಜರಿದ್ದರು. ನಗರಸಭೆ ಪ್ರಭಾರಿ ಪೌರಾಯುಕ್ತ ಗಂಗಾಧರಗೌಡ, ವ್ಯವಸ್ಥಾಪಕ ಗುರುರಾಜ ಸೌದಿ, ಸಹಾಯಕ ಅಭಿಯಂತರ ನರಸಿಂಹಮೂರ್ತಿ, ಲೆಕ್ಕಿಗ ಅಬ್ದುಲ್, ಸತ್ಯನಾರಾಯಣ, ಅಯ್ಯಪ್ಪ, ನರಸಪ್ಪ ಇದ್ದರು.
ಇಂದು ವಿಶೇಷ ಉಪನ್ಯಾಸ
ರಾಯಚೂರು: ನಗರದ ತಾರಾನಾಥ ಶಿಕ್ಷಣ ಸಂಸ್ಥೆಯ ಲಕ್ಷ್ಮೀ ವೆಂಕಟೇಶ ದೇಸಾಯಿ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗ ಮತ್ತು ಪಂಡಿತ ತಾರಾನಾಥ ಸಾಂಸ್ಕೃತಿಕ ವೇದಿಕೆ, ರಾಯಚೂರು ವತಿಯಿಂದ ಫೆ.22ರಂದು ಜಾಗತೀಕರಣದ ನಂತರ ಭಾರತ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಮಧ್ಯಾಹ್ನ 12ಕ್ಕೆ ನಡೆಯುವ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಎಂ.ಕೆ. ಭಾಸ್ಕರರಾವ್ ಅವರು ಉಪನ್ಯಾಸ ನೀಡಲಿದ್ದಾರೆ. ಪಂ. ತಾರಾನಾಥ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಶರಣಪ್ಪ ಉದ್ಬಾಳ್ ಪಾಲ್ಗೊಳ್ಳಲಿದ್ದಾರೆ. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಎಂ. ಖೇಣೇದ್ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಕಾಲೇಜು ಮನವಿ ಮಾಡಿದೆ.
ಇಂದಿನಿಂದ ಸಾಂಸ್ಕೃತಿಕ ಜನೋತ್ಸವ
ರಾಯಚೂರು: ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ಹಾಗೂ ಪಂಡಿತ ತಾರಾನಾಥ ಸಾಂಸ್ಕೃತಿಕ ವೇದಿಕೆಗಳ ಆಶ್ರಯದಲ್ಲಿ ಫೆ.22 ಮತ್ತು 23ರಂದು 2ನೇ ಸಾಂಸ್ಕೃತಿಕ ಜನೋತ್ಸವ ಆಯೋಜಿಸಲಾಗಿದೆ. ನಗರದ ರಂಗಮಂದಿರದಲ್ಲಿ ಫೆ.22ರಂದು ಸಂಜೆ 6ಕ್ಕೆ ನಗರದ ರಂಗಮಂದಿರದಲ್ಲಿ ಸಾಂಸ್ಕೃತಿಕ ಜನೋತ್ಸವವನ್ನು ಹಿರಿಯ ಪತ್ರಕರ್ತ ಎಂ.ಕೆ.ಭಾಸ್ಕರರಾವ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆವಿಷ್ಕಾರ ಸಾಂಸ್ಕೃತಿಕ ವೇದಿಕೆಯ ರಾಜ್ಯ ಸಂಚಾಲಕ ಡಾ. ಬಿ. ಆರ್. ಮಂಜುನಾಥ್ ಭಾಗವಹಿಸುವರು. ಪಂಡಿತ ತಾರಾನಾಥ ಸಾಂಸ್ಕೃತಿಕ ವೇದಿಕೆ ಸದಸ್ಯ ಮಹೇಶ್ ಚೀಕಲಪರ್ವಿ ಪಾಲ್ಗೊಳ್ಳಲಿದ್ದು, ಆವಿಷ್ಕಾರ ಜಿಲ್ಲಾ ಸಂಚಾಲಕ ಚನ್ನಬಸವ ಜಾನೇಕಲ್‌ರವರು ಅಧ್ಯಕ್ಷತೆ ವಹಿಸಲಿದ್ದಾರೆಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement