ಯೋಜನೆಗಳ ಲಾಭ ಪಡೆಯುವಲ್ಲಿ ಜಿಲ್ಲೆ ವಂಚಿತ
ಲಿಂಗಸ್ಗೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಯಚೂರು ಜಿಲ್ಲೆಯಲ್ಲಿ ಸ್ಥಾಪಿಸುವ ಹಾಗೂ ಜಾರಿಗೆ ತಂದ ಯೋಜನೆಗಳು ಜಿಲ್ಲೆಯ ಜನತೆಗೆ ವರದಾನವಾಗಿಲ್ಲ. ಈ ನಿಟ್ಟಿನಲ್ಲಿ ಶಾಸಕ-ಸಚಿವರು ಗಮನ ಹರಿಸಿ ಜಿಲ್ಲೆಗೆ ಸೌಲಭ್ಯ ಒದಗಿಸುವತ್ತ ಗಮನ ಹರಿಸಬೇಕೆಂದು ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ್ ಆನ್ವರಿ ಬೇಸರ ವ್ಯಕ್ತಪಡಿಸಿದರು.
ರಾಯಚೂರು ಜಿಲ್ಲೆ ನೀರಾವರಿ ಪ್ರದೇಶವೆಂಬ ಹಣೆಪಟ್ಟಿ ಕಟ್ಟಲಾಗಿದೆ. ಆದರೆ ನೀರಾವರಿಯಿಂದ ವಂಚಿತಗೊಂಡ ಕೆಲ ಹೋಬಳಿಗಳಿಗೆ ಸಿಗಬೇಕಾದ ಸೌಲಭ್ಯ ಸಿಗುತ್ತಿಲ್ಲ. ಅಂತರ್ಜಲ ಕುಸಿತದಿಂದ ಬೋರ್ವೆಲ್ ಹಾಗೂ ಪಂಪ್ಸೆಟ್ ಅವಲಂಬಿತ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅಂತರ್ಜಲ ಹೆಚ್ಚಿಸುವ ಉದ್ದೇಶದಿಂದ ಜಾರಿಗೆ ತಂದ ಚೆಕ್ಡ್ಯಾಂನಂತಹ ಯೋಜನೆಗಳು ರಾಯಚೂರು ಜಿಲ್ಲೆ ವಂಚಿತಗೊಂಡು ನೆರೆಯ ಕೊಪ್ಪಳ ಜಿಲ್ಲೆಗೆ ಸೀಮಿತವಾಗಿದೆ. ಯೋಜನೆಗಳು ರೂಪಿಸುವಾಗ ಟೇಲ್ಯಾಂಡ್ ಜೊತೆಗೆ ನೀರಾವರಿ ವಂಚಿತ ಪ್ರದೇಶ ವ್ಯಾಪ್ತಿಗೆ ಒಳಪಡಿಸಬೇಕು. ಜಿಲ್ಲೆಯ ವಿವಿಧ ತಾಲೂಕುಗಳ ಫಲಾನುಭವಿಗಳಿಗೆ ಹಂಚಿಕೆ ಮಾಡಿದ ವಸತಿ ಮನೆಗಳು ಬಹುತೇಕ ಪಾಳು ಬಿದ್ದಿದ್ದು, ಕೆಲವೆಡೆ ಮೂಲ ಸೌಕರ್ಯವಿಲ್ಲದೆ ಸಂತ್ರಸ್ಥರು ವಾಸಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಕುರಿತು ಪ್ರತ್ಯೇಕ ಸಭೆ ಕರೆದು ಫಲಾನುಭವಿಗಳು ವಾಸಿಸಲು ಅನುಕೂಲ ಕಲ್ಪಿಸಬೇಕು ಎಂದರು.
ಸೌಲಭ್ಯ ವಿಸ್ತರಿಸಿ: ರೈಲ್ವೇ ಸಚಿವ ಮಲ್ಲಿಕಾರ್ಜುನ ಖರ್ಗೆ ರಾಜ್ಯಕ್ಕೆ ನೀಡಿದ ರೈಲ್ವೆ ಯೋಜನೆಗಳ ಜಾರಿ ಸ್ವಾಗತಾರ್ಹ. ಅದೇ ರೀತಿ ವಿಮಾನ ಯಾನ, ಇಎಸ್ಐ ಆಸ್ಪತ್ರೆಗಳು ಗುಲ್ಬರ್ಗಕ್ಕೆ ಸೀಮಿತಗೊಳಿಸದೆ ರಾಯಚೂರು ಜಿಲ್ಲೆವರೆಗೆ ವಿಸ್ತರಿಸಬೇಕು. ಶಾಖೋತ್ಪನ್ನ, ವಿದ್ಯುತ ಘಟಕಗಳು ರಾಯಚೂರಲ್ಲಿ ಸ್ಥಾಪಿಸಲಾಗಿದೆ. ಆದರೆ ಸೌಲತ್ತು ಮಾತ್ರ ಅನ್ಯ ಜಿಲ್ಲೆಗಳು ಪಡೆಯುತ್ತಿವೆ. ತುಂಗಭದ್ರಾ ಎಡದಂಡೆ ಕಾಲುವೆ ನೀರು ಯರಮರಸ್ನ ಕೊನೆ ಭಾಗದ ರೈತರಿಗೆ ಸರಿಯಾಗಿ ನೀರು ತಲುಪುತ್ತಿಲ್ಲ. ತುಂಗಭದ್ರಾ ಕಚೇರಿ ಅಧಿಕಾರಿಗಳಿಗೆ ರಾಯಚೂರು ಜಿಲ್ಲೆಯ ರೈತರ ಕೂಗು ಕೇಳುತ್ತಿಲ್ಲ. ಕಾಲುವೆಗಳ ನೀರು ಸರಬರಾಜು ನಿರ್ವಹಣೆಗೆ ಒಬ್ಬ ಸೂಪರಿಟೆಂಡೆಂಟ್ ಅಧಿಕಾರಿಯನ್ನು ನೇಮಕ ಮಾಡಿದರೆ ಅನುಕೂಲವಾಗಲಿದೆ ಎಂದು ಹೇಳಿದರು.
ನಿರ್ಧಾರ ಕೈಗೊಳ್ಳಲು ಸೂಚನೆ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧಿಕಾರ ಸ್ವೀಕರಿಸುತ್ತಿದ್ದಂತೆ ಅನೇಕ ಯೋಜನೆಗಳು ಜಾರಿಗೆ ತಂದರು. ಕೆಲ ಯೋಜನೆಗಳಿಗೆ ಜನರಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆ ವಾಪಸ್ಸು ಪಡೆದರು. ಯಾವುದೇ ಒಂದು ಯೋಜನೆ ರೂಪುರೇಷು ಮಾಡುವ ಮುನ್ನ ಸಚಿವರು ಹಾಗೂ ಪಕ್ಷದ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಏಕಪಕ್ಷೀಯವಾಗಿ ನಿರ್ಣಯ ತೆಗೆದುಕೊಳ್ಳುವುದು ಸರಿಯಾದ ಕ್ರಮವಲ್ಲ. ಕಳೆದ ಐದಾರು ವರ್ಷಗಳ ರಾಜಕೀಯ ಬೆಳವಣಿಗೆಯಲ್ಲಿ ಕೆಲ ತಪ್ಪು ನಿರ್ಧಾರ ಕೈಗೊಂಡಿದ್ದು, ಇಂತಹ ತಪ್ಪು ಈ ಬಾರಿ ಮರುಕಳಿಸದಂತೆ ಜಾಗ್ರತೆ ವಹಿಸುವೆ. ಬೆಂಬಲಿಗರು, ಮುಖಂಡರು ಹಾಗೂ ಕಾರ್ಯಕರ್ತರ ಸಲಹೆ ಸೂಚನೆ ಪಡೆದು ಯಾವ ಪಕ್ಷ ಸೇರುವ ಕುರಿತು ನಿರ್ಧರಿಸುವುದಾಗಿ ಹೇಳಿದರು.
ಈ ವೇಳೆ ಜಿಪಂ ಸದಸ್ಯ ಎಚ್.ಬಿ. ಮುರಾರಿ, ರಮೇಶ ಶಾಸ್ತ್ರಿ, ಬಸನಗೌಡ ಸೇರಿದಂತೆ ಇನ್ನಿತರರು ಇದ್ದರು.