ಅಪೌಷ್ಟಿಕತೆ ನಿವಾರಣೆ, ಆಹಾರ ಭದ್ರತೆಗೆ ಆದ್ಯತೆ ನೀಡಿ
ಕ.ಪ್ರ. ವಾರ್ತೆ , ರಾಯಚೂರು , ಫೆ.22
ಭ್ರಷ್ಟಾಚಾರ ಮುಕ್ತ, ಸುಸ್ಥಿರ ಅಭಿವೃದ್ಧಿಯಿಂದ ಕೂಡಿದ ಸಮಾಜ ನಿರ್ಮಾಣ ಎಲ್ಲರ ಗುರಿಯಾಗಬೇಕು. ಕೃಷಿ ಕ್ಷೇತ್ರದಲ್ಲಿನ ತಜ್ಞರು ದೇಶದ ಮಕ್ಕಳಲ್ಲಿನ ಅಪೌಷ್ಟಿಕತೆ ಸಮಸ್ಯೆ ನಿವಾರಣೆ ಮತ್ತು ಆಹಾರ ಭದ್ರತೆ ತಂದುಕೊಡುವ ಮೂಲಕ ಬದಲಾಗುತ್ತಿರುವ ಹವಾಗುಣಕ್ಕೆ ಹೊಂದಿಕೊಂಡು ಕೃಷಿ ಅಭಿವೃದ್ಧಿಗೆ ಪೂರಕ ಸಂಶೋಧನೆ ಕೈಗೊಳ್ಳುವಂತೆ ನವದೆಹಲಿಯ ರಾಷ್ಟ್ರೀಯ ಕೃಷಿ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ.ಆರ್.ಬಿ. ಸಿಂಗ್ ಕರೆ ನೀಡಿದರು.
ಅವರು ನಗರದ ಕೃಷಿ ವಿವಿ ಯಲ್ಲಿ ಶನಿವಾರ ಆಯೋಜಿಸಿದ್ದ ನಾಲ್ಕನೇ ಘಟಿಕೋತ್ಸವ ಸಮಾರಂಭದಲ್ಲಿ ಘಟಿಕೋತ್ಸವ ಭಾಷಣ ಮಾಡಿ, ದೇಶದಲ್ಲಿನ ಬಡವರ ಹಸಿವು ನೀಗಿಸುವುದು ಕೃಷಿಕರು ಮತ್ತು ಕೃಷಿ ವಿಜ್ಞಾನಿಗಳ ಮೊದಲಾದ್ಯತೆಯಾಗಬೇಕು. ಸಾಮಾಜಿಕ ನ್ಯಾಯ, ಸಮಾಜವಾದದ ತತ್ವಗಳನ್ನು ಕೃಷಿ ಕ್ಷೇತ್ರದಲ್ಲಿರುವ ಎಲ್ಲರೂ ಅಳವಡಿಸಿಕೊಂಡು ಉನ್ನತವಾದುದನ್ನು ಸಾಧಿಸುವಂತೆ ಸಲಹೆ ನೀಡಿದರು.
ಸ್ಪರ್ಧೆ ಅಗತ್ಯ: ಜಾಗತೀಕರಣ, ಉದಾರೀಕರಣದಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ ಉಂಟಾಗಿರುವ ಪರಿವರ್ತನೆಗಳು, ಮಾಹಿತಿ ಮತ್ತು ತಂತ್ರಜ್ಞಾನದ ಸಂಶೋಧನೆಗಳು, ಆರ್ಥಿಕ ಪ್ರಗತಿ ಸಾಧಿಸಲು ಪೂರಕ ಮತ್ತು ಮಾರುಕಟ್ಟೆಯಲ್ಲಿನ ಸ್ಪರ್ಧೆ ಎದುರಿಸುವ ನಿಟ್ಟಿನಲ್ಲಿ ರೈತರಲ್ಲಿ ಭರವಸೆ ಮೂಡಿಸುವ ಕಾರ್ಯ ಕೃಷಿ ಪದವೀಧರರು ಮಾಡಬೇಕಿದೆ ಎಂದರು.
ದೇಶಕ್ಕೆ ಆಹಾರ ಭದ್ರತೆಯೊದಗಿಸುವ ನಿಟ್ಟಿನಲ್ಲಿ ಕೃಷಿಯಲ್ಲಿ ಸುಸ್ಥಿರ ಅಭಿವೃದ್ಧಿ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ಹವಾಗುಣದಲ್ಲಿನ ಮಾರ್ಪಾಟು ಕೃಷಿ ಕ್ಷೇತ್ರಕ್ಕೆ ಬಹುದೊಡ್ಡ ಸವಾಲಾಗಿದೆ. ಕೃಷಿ ಕ್ಷೇತ್ರದ ವೈಫಲ್ಯವು ಇನ್ನುಳಿದೆಲ್ಲ ರಂಗಗಳಲ್ಲಿನ ಸೋಲಿಗೆ ದಾರಿ ಮಾಡುತ್ತದೆ ಎಂಬ ಪ್ರಜ್ಞೆ ಎಲ್ಲರಲ್ಲಿ ಮೂಡುವುದು ಅವಶ್ಯಕ ಎಂದು ತಿಳಿ ಹೇಳಿದರು.
ಕಾಲು ಭಾಗ ಅಪೌಷ್ಟಿಕತೆ: ದೇಶದ ಬಡವರು ಮತ್ತು ಹಸಿವಿನಿಂದ ನರಳುತ್ತಿರುವವರ ಸಂಖ್ಯೆಯು ವಿಶ್ವದ 1/4ರಷ್ಟಿದೆ. ವಿಶ್ವದಲ್ಲಿನ ಅಪೌಷ್ಟಿಕ ಮಕ್ಕಳಲ್ಲಿ ಭಾರತೀಯ ಮಕ್ಕಳ ಸಂಖ್ಯೆ ಶೇ.40ರಷ್ಟಿದೆ. ಇಂಥ ಮಕ್ಕಳನ್ನು ಅಪೌಷ್ಟಿಕತೆ ಸಮಸ್ಯೆಯಿಂದ ಪಾರು ಮಾಡುವುದು ಎಲ್ಲರ ಹೊಣೆಯಾಗಿದೆ ಎಂದು ಹೇಳಿದರು.
ದೇಶಕ್ಕೆ ಸಮೃದ್ಧತೆ ತಂದುಕೊಡಲು ಕೃಷಿಕ ಸಮುದಾಯದ ಬದುಕಿನಲ್ಲಿ ಸಮೃದ್ಧತೆ ತಂದುಕೊಡುವುದು ಅವಶ್ಯಕ. ಕೃಷಿ ವಿಜ್ಞಾನಿಗಳು ದೇಶಕ್ಕೆ ಸದ್ಯ ದೊರೆತಿರುವ ಆಹಾರ ಭದ್ರತೆ ಕ್ಷೇತ್ರದಲ್ಲಿ ಹಿನ್ನಡೆಯಾಗದಂತೆ ಎಚ್ಚರಿಕೆ ವಹಿಸ ಬೇಕಿದೆ. ಕೃಷಿಕ ಸಮುದಾಯದ ಸೇವೆಗೈಯ್ಯುವುದು ಎಲ್ಲ ಕೃಷಿ ಪದವೀಧರರ ಗುರಿಯಾಗಬೇಕು. ಕೃಷಿ ಸಂಶೋಧನೆ ಗಳು ಎಲ್ಲ ರೈತರಿಗೆ ತಲುಪಿ ಕೃಷಿ ಪ್ರದೇಶ ವಿಸ್ತಾರವಾಗಬೇಕೆಂದರು.
ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿ ವಿವಿ ಕುಲಪತಿ ಡಾ.ಬಿ.ವಿ. ಪಾಟೀಲ್, ಕೃಷಿ ವಿವಿಯನ್ನು ರೈತರ ವಿಶ್ವವಿದ್ಯಾಲಯವಾಗಿಸುವುದು ಆಡಳಿತದ ಗುರಿಯಾಗಿದೆ. ಈ ನಿಟ್ಟಿನಲ್ಲಿ ವಿವಿ ಯಲ್ಲಿ ನಡೆಯುವ ವಿವಿಧ ಸಂಶೋಧೆಗಳನ್ನು ರೈತರಿಗೆ ನಿರಂತರವಾಗಿ ತಲುಪಿಸುವ ಮೂಲಕ ರೈತರ ಆರ್ಥಿಕ ಸ್ಥಿತಿ ಸುಧಾರಣೆಗೆ ಶ್ರಮಿಸಲಾಗುತ್ತಿದೆ ಎಂದು ಹೇಳಿದರು.
ರೈತರ ಏಳ್ಗೆ: ಕೃಷಿ ಶಿಕ್ಷಣವನ್ನು ಉತ್ತಮಗೊಳಿಸಲು ಹಾಗೂ ಈ ಭಾಗದ ರೈತರ ಏಳ್ಗೆಯನ್ನೇ ದೃಷ್ಟಿಯಲ್ಲಿಸಿರಿಸಿಕೊಂಡು ವಿವಿ ಸಂಶೋಧನೆ ನಡೆಸುತ್ತಿದೆ. ಬೆಳೆ ಆಧಾರಿತ ರೈತರ ಗುಂಪುಗಳಿಗೆ ಮಾರುಕಟ್ಟೆಯಲ್ಲಿ ಅನುಕೂಲತೆಗಳನ್ನು ಕಲ್ಪಿಸುವುದು ವಿವಿಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ವಿವಿಯ ವಿವಿಧ ವಿಭಾಗಗಳ ಪ್ರಮುಖರಾದ ಡಾ.ಬಿ.ಎಸ್. ಜನಗೌಡರ್, ಡಾ.ಎಂ.ಕೆ.ನಾಯಕ್, ಡಾ. ಕೆ.ಪಿ. ವಿಶ್ವನಾಥ್ ಸೇರಿ ವಿವಿ ಆಡಳಿತ ಮಂಡಳಿಯ ಸದಸ್ಯರಿದ್ದರು.
ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿವಿ ಪ್ರಾಧ್ಯಾಪಕರು, ಸಹಾಯಕ ಸಿಬ್ಬಂದಿ, ಕ್ಷೇತ್ರ ಸಹಾಯಕರು, ಕಾರ್ಮಿಕರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ವಿವಿಯ ಬೋಧಕ ವರ್ಗ ಮತ್ತು ವಿದ್ಯಾರ್ಥಿಗಳು ಹಾಗೂ ಪಾಲಕರಿದ್ದರು.
ಪ್ರಶಸ್ತಿಗಳ ಸುರಿಮಳೆ
ರಾಯಚೂರು: ನಗರದಲ್ಲಿ ಶನಿವಾರ ನಡೆದ ರಾಯಚೂರು ಕೃಷಿ ವಿವಿ ನಾಲ್ಕನೇ ಘಟಿಕೋತ್ಸವದಲ್ಲಿ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಶಿಕ್ಷಕರು, ಪ್ರಾಧ್ಯಾಪಕರು, ಕೃಷಿ ಕಾರ್ಮಿಕರು ಸೇರಿದಂತೆ ಅನೇಕರನ್ನು ಪ್ರೋತ್ಸಾಹ ಧನ, ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಘಟಿಕೋತ್ಸವದಲ್ಲಿ ಪ್ರಶಸ್ತಿ ಪಡೆದವರ ವಿವರ
1. ರೈತ ವಿಜ್ಞಾನಿ ಪ್ರಶಸ್ತಿ- ಎಂ.ಎಚ್. ಖಾದ್ರಿ, ಪ್ರಗತಿಪರ ರೈತರು, ಬಗ್ದಲ್ ಗ್ರಾಮ, ಬೀದರ್ ಜಿಲ್ಲೆ.
2. ಅತ್ಯುತ್ತಮ ಕೃಷಿ ಕಾರ್ಮಿಕ ಪ್ರಶಸ್ತಿ- ಮಾನಪ್ಪ, ಕೃಷಿ ಕಾರ್ಮಿಕರು, ಕೃಷಿ ಸಂಶೋಧನಾ ಕೇಂದ್ರ ಗುಲ್ಬರ್ಗ.
3. ಅತ್ಯುತ್ತಮ ಸಹಾಯಕ ಸಿಬ್ಬಂದಿ ಪ್ರಶಸ್ತಿ- ಎಂ.ಎಚ್. ಗುಡಿಮನಿ, ಸಹಾಯಕ ಆಡಳಿತಾಧಿಕಾರಿ ಕೃಷಿ ಮಹಾವಿದ್ಯಾಲಯ, ರಾಯಚೂರು.
4. ಅತ್ಯುತ್ತಮ ಕ್ಷೇತ್ರ ಸಹಾಯಕ ಪ್ರಶಸ್ತಿ- ಎಸ್.ಆರ್. ಸೋನೆ, ಹಿರಿಯ ಕ್ಷೇತ್ರ ಸಹಾಯಕರು, ರಾಯಚೂರು.
5. ಅತ್ಯುತ್ತಮ ಸಂಶೋಧನಾ ಕೇಂದ್ರ- ಕೃಷಿ ಸಂಶೋಧನಾ ಕೇಂದ್ರ, ಹಗರಿ, ಬಳ್ಳಾರಿ ಜಿಲ್ಲೆ.
6. ಸಂಶೋಧನಾ ಯೋಜನೆ ಕಾರ್ಯಗತಗೊಳಿಸುವ ಕೃಷಿ ವಿಜ್ಞಾನಿಗಳಿಗೆ ಪ್ರಶಸ್ತಿ- ಡಾ. ಬಿ.ಎಸ್. ಜನಗೌಡರ್, ಡಾ. ಬಸವೇಗೌಡ, ಡಾ. ಅರುಣಕುಮಾರ ಹೊಸಮನಿ, ಡಾ. ಎಸ್.ಎನ್. ವಾಸುದೇವನ್.
7. ಅತ್ಯುತ್ತಮ ವಿಸ್ತರಣಾ ವಿಜ್ಞಾನಿ ಪ್ರಶಸ್ತಿ- ಎಸ್.ಎನ್. ಉಪ್ಪೇರಿ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಲಿಂಗಸ್ಗೂರು.
8. ಅತ್ಯುತ್ತಮ ಸಂಶೋಧನಾ ವಿಜ್ಞಾನಿ ಪ್ರಶಸ್ತಿ- ಡಾ. ಸಿ.ಆರ್. ಕೊಂಡ, ಮುಖ್ಯಸ್ಥರು, ಕೃಷಿ ಸಂಶೋಧನಾ ಕೇಂದ್ರ, ಬೀದರ್.
9. ಅತ್ಯುತ್ತಮ ಶಿಕ್ಷಕ ಪ್ರಶಸ್ತಿ- ಡಾ. ಎ. ಪ್ರಭುರಾಜ್, ಕೀಟಶಾಸ್ತ್ರ ವಿಭಾಗ, ಕೃಷಿ ಮಹಾವಿದ್ಯಾಲಯ, ರಾಯಚೂರು.
ಚಿನ್ನದ ಪದಕ ವಿಜೇತರು
ರಾಯಚೂರು: ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ನಾಲ್ಕನೇ ಘಟಿಕೋತ್ಸವದಲ್ಲಿ ಒಟ್ಟು 18 ವಿದ್ಯಾರ್ಥಿಗಳು 26 ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ವಿವಿ ಪ್ರೇಕ್ಷಾಗೃಹದಲ್ಲಿ ಶನಿವಾರ ಆಯೋಜಿಸಿದ್ದ ನಾಲ್ಕನೇ ಘಟಿಕೋತ್ಸವ ಸಮಾರಂಭದಲ್ಲಿ ಕೃಷಿ ಸಚಿವ ಹಾಗೂ ವಿವಿ ಸಹ ಕುಲಾಧಿಪತಿ ಕೃಷ್ಣ ಬೈರೇಗೌಡ ಅವರು ಅತೀ ಹೆಚ್ಚು ಅಂಕ ಗಳಿಸಿದ ಬಿಎಸ್ಸಿ(ಕೃಷಿ), ಬಿಟೆಕ್(ಕೃಷಿ ತಾಂತ್ರಿಕ) ಹಾಗೂ ಎಂಎಸ್ಸಿ (ಕೃಷಿ) ಮತ್ತು ಎಂಟೆಕ್(ಕೃಷಿ ತಾಂತ್ರಿಕ) ವಿಭಾಗಗಳಲ್ಲಿ ಸಾಧನೆ ಮೆರೆದವರಿಗೆ ಚಿನ್ನದ ಪದಕ ವಿತರಿಸಿದರು.
ಬಿಎಸ್ಸಿ ಕೃಷಿ ವಿಭಾಗ...
- ದೀಪಾ ಎಲ್., 4 ಪದಕ, ಕೃಷಿ ಕಾಲೇಜು, ರಾಯಚೂರು.
- ರೇವಣಸಿದ್ದ, 3 ಪದಕ, ಕೃಷಿ ಮಹಾವಿದ್ಯಾಲಯ, ಭೀ.ಗುಡಿ.
- ಜೂಡಿ ಥಾಮಸ್, 1 ಪದಕ, ಕೃಷಿ ಕಾಲೇಜು, ರಾಯಚೂರು.
- ಬಸವರಾಜ್ ಪಿ.ಎಸ್., 1 ಪದಕ, ಕೃಷಿ ಮಹಾವಿದ್ಯಾಲಯ, ಭೀಮರಾಯನಗುಡಿ.
- ಆನಂದ, 1 ಪದಕ, ಕೃಷಿ ಮಹಾವಿದ್ಯಾಲಯ, ಭೀ.ಗುಡಿ.
- ವೆಂಕಟೇಶ ಜವಳಿ, 1 ಚಿನ್ನದ ಪದಕ, ಕೃಷಿ ಕಾಲೇಜು, ಭೀ.ಗುಡಿ.
- ಐ.ಬಾಲಕೃಷ್ಣ ರೆಡ್ಡಿ, 1 ಪದಕ, ಕೃಷಿ ಕಾಲೇಜು, ಭೀ.ಗುಡಿ.
ಕೃಷಿ ತಾಂತ್ರಿಕ ವಿಭಾಗ...
- ಅರ್ಚನಾ ಕಲಾಲ್, 4 ಪದಕ, 2 ನಗದು ಬಹುಮಾನ, ಕೃಷಿ ತಾಂತ್ರಿಕ ಮಹಾವಿದ್ಯಾಲಯ, ರಾಯಚೂರು.
ಎಂಎಸ್ಸಿ ಕೃಷಿ ವಿಭಾಗ...
- ವೀರಭದ್ರಪ್ಪ ಬೆಲ್ಲುಂಡ್ಗಿ- 1 ಪದಕ
- ನೀಲಬೋಯಿನ ಭರತ್ ಕುಮಾರ್- 1 ಪದಕ
- ಸುಧಾ ಸಿ.ಕೆ.- 1 ಪದಕ
- ಸಂತೋಷಗೌಡ ಜಿ.ಬಿ.- 1 ಪದಕ
- ಪಿ.ರೇಷ್ಮಾ- 1 ಪದಕ
- ನಿರಂಜನಕುಮಾರ್ ಬಿ.- 1 ಪದಕ
- ಮಂಜುನಾಥ್ ಬಿ.- 1 ಪದಕ
ಎಂಟೆಕ್ ಕೃಷಿ ತಾಂತ್ರಿಕ ವಿಭಾಗ...
- ಮಂಜುನಾಥ್ ಕೆ.- 1 ಪದಕ
- ರಶೀದಾ ರಾಜುವಾ ಟಿ.ಎ.- 1 ಪದಕ
- ಜಿತೇಂದ್ರ ದೇಬ್ ಬರ್ಮಾ- 2 ಪದಕ.