ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಪರಭಾಷೆ ವ್ಯಾಮೋಹ ತಾಯಿಗೆ ಎಸಗುವ ದ್ರೋಹ: ಶರ್ಮಾ

Vishwanath S
Updated On : 23 Feb 2014, 12:49 pm

(ಅಮರೇಗೌಡ ಗದ್ರಟಗಿ ವೇದಿಕೆ)
ಕ.ಪ್ರ. ವಾರ್ತೆ ,  ಸಿಂಧನೂರು ,  ಫೆ.22
ಕನ್ನಡ ನಾಡು ನಮಗೆ ಬುದುಕು, ಸಿರಿ, ಸಂಪತ್ತು, ನೆಮ್ಮದಿ, ಗೌರವ ಕೊಟ್ಟು ಸಾಕಿದೆ. ಆದಾಗ್ಯೂ ನಾವುಗಳು ಪರಭಾಷೆಗಳಿಗೆ ಆಕರ್ಷಿತರಾಗಿ ಮಾತೃ ಭಾಷೆಯನ್ನು ಮರೆಯಬಾರದು. ಮರೆತರೆ ನಾವು ನಮ್ಮ ಹೆತ್ತ ತಾಯಿಯನ್ನೇ ಮರೆತಂತೆ...
- ತಾಲೂಕಿನ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಜಿ.ವಿ. ಶರ್ಮಾ ಅವರ ನುಡಿಯಿದು.
ನಗರದ ಸತ್ಯ ಗಾರ್ಡನ್‌ನಲ್ಲಿ ಶನಿವಾರ ಅಮರೇಗೌಡ ಗದ್ರಟಗಿ ವೇದಿಕೆಯಲ್ಲಿ ಸಮ್ಮೇಳನದ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ನಾನು ತೆಲುಗು ಬಾಷಿಕನಾಗಿದ್ದರೂ ಉದ್ಯೋಗವನ್ನರಸಿ ಸಿಂಧನೂರಿಗೆ ಬಂದೆ. ಮೊದಲು ಹೊಟ್ಟೆಪಾಡಿಗೆ ವಿವಿಧ ವೃತ್ತಿಗಳನ್ನು ಮಾಡಿದರೂ, ನನಗೆ ತೃಪ್ತಿಯಾಗಲಿಲ್ಲ. ಆಗ ಸಾಹಿತ್ಯ ಕೃಷಿಯಲ್ಲಿ ತೊಡಗುವ ಹೆಬ್ಬಯಕೆ ಮೂಡಿತು ಎಂದರು.
ತೆಲುಗಿಗಿಂತ ಕನ್ನಡ ಸಾಹಿತ್ಯವೇ ರುಚಿ: ಮೊದಲು ತೆಲುಗಿನಲ್ಲಿ ಸಾಹಿತ್ಯ ಆರಂಭಿಸಿದರೂ ಕನ್ನಡ ಸಾಹಿತ್ಯ ಅತ್ಯಂತ ತೃಪ್ತಿ ನೀಡಿತು. ಐದು ನಾಟಕಗಳು ಸೇರಿದಂತೆ 16 ಕೃತಿಗಳನ್ನು ರಚಿಸಿದ್ದೇನೆ. ವೈದಿಕ ಸಾಹಿತ್ಯ ವೇದ ಆಧಾರವಾಗಿಟ್ಟುಕೊಂಡು ನಾನು ಸಾಹಿತ್ಯ ಕೃಷಿ ಮಾಡಿದ್ದೇನೆ. ನನ್ನ ಸೇವೆ ಎಂದೆದಿಗೂ ಕನ್ನಡ ತಾಯಿಗೆ. ನನ್ನ ಮರಣ ಬಂದಾಗಲೂ ಕೈಯಲ್ಲಿ ಪೆನ್ನು ಇರಲಿ ಎಂದು ಬಯಸುತ್ತಾ ಭಾಷಣಕ್ಕೆ ವಿರಾಮ ನೀಡುವೆ ಎಂದರು.
ನಮ್ಮಲ್ಲೇಕೆ ಕನ್ನಡ ಪ್ರೀತಿ ಕುಂದುತ್ತಿದೆ?: ಜಿ.ವಿ. ಶರ್ಮಾ ಅವರ ಕೃಷ್ಣಾಯಣ ಪಾರಾಯಣವನ್ನು ಓದುವದರ ಮೂಲಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಡಾ. ಸ್ವಾಮಿರಾವ್ ಕುಲಕರ್ಣಿ, ಆಂಧ್ರದಿಂದ ಸಿಂಧನೂರಿಗೆ ಬಂದು ಅವರ ಮೂಲ ಭಾಷೆ ತೆಲುಗು ಬದಿಗಿಟ್ಟು, ಕನ್ನಡ ನೆಲ ನಮಗೆ ಆಸರೆ ನೀಡಿ ಬದುಕುವುದನ್ನು ಕಲಿಸಿದೆ ಎಂದು ಅದನ್ನು ಗೌರವಿಸಿ, ಪ್ರೀತಿಸುತ್ತಿದ್ದಾರೆ. ಕನ್ನಡದಲ್ಲಿಯೇ 20 ಕೃತಿಗಳನ್ನು ರಚಿಸಿ ಕನ್ನಡ ನಾಡಿಗೆ ವಿಶೇಷ ಕೊಡುಗೆಯನ್ನು ಸಲ್ಲಿಸಿದ್ದಾರೆ. ಇವರಿಗೆ ಕನ್ನಡ ಮೇಲಿರುವ ಪ್ರೀತಿಯನ್ನು ನೋಡಿದರೆ, ನಮ್ಮಲ್ಲಿ ಯಾಕೆ ಕನ್ನಡ ಬಗ್ಗೆ ಪ್ರೀತಿ ಕಡಿಮೆಯಾಗುತ್ತಿದೆ ಎಂಬುದರ ಬಗ್ಗೆ ಚಿಂತನೆ ಮೂಡುತ್ತದೆ.
ಅದರಿಂದಲೇ ಮೊದಲು ನಮ್ಮಲ್ಲಿರುವ ಹವ್ಯಾಸಗಳನ್ನು ಬದಲಿಸಿಕೊಂಡಾಗ ಮಾತ್ರ ನಮ್ಮಲ್ಲಿ ಬದಲಾವಣೆ ಸಾಧ್ಯ. ಪ್ರತಿಭೆಗಳು ಯಾರಪ್ಪನ ಸತ್ತಲ್ಲ. ಅವು ನಮ್ಮಲ್ಲಿಯೇ ಇರುತ್ತವೆ, ಅವುಗಳನ್ನು ನಾವು ಗುರುತಿಸಿಕೊಂಡು ಹೊರಗಿಟ್ಟಾಗ ಮಾತ್ರ ಪ್ರತಿಭೆ ಬೆಳಕಿಗೆ ಬರುತ್ತದೆ ಎಂದು ತಿಳಿಸಿದರು.
ಕನ್ನಡ ಮನಗಳನ್ನು ಗೆಲ್ಲಿ..: ಮನಸ್ಸು, ವಿಚಾರ, ಭಾವನೆಗಳನ್ನು ಬಡೆದೆಬ್ಬಿಸುವ ಶಕ್ತಿ ಯಾವುದಾದರೂ ಇದೆ ಎನ್ನುವುದಾದರೆ ಅದು ಸಾಹಿತ್ಯ ಕ್ಷೇತ್ರಕ್ಕೆ ಮಾತ್ರ. ವ್ಯವಹಾರಿಕ ದೃಷ್ಟಿಯಲ್ಲಿ ಬದುಕುವುದನ್ನು ಬಿಟ್ಟು, ಒಡೆದ ಮನಸ್ಸುಗಳನ್ನು ಒಗ್ಗೂಡಿ ಸಾಹಿತ್ಯ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಿ ಎಲ್ಲ ಮನಸ್ಸಗಳನ್ನು ಗೆಲ್ಲಬೇಕು. ಮನೆಮನೆಗಳಲ್ಲಿ ಪುಸ್ತಕವಿರಬೇಕು. ಮನೆಯೇ ಮೊದಲ ಪಾಠ ಶಾಲೆ ಎಂಬಂತೆ ಮಕ್ಕಳಿಗೆ ಮನೆಯಲ್ಲಿ ಕನ್ನಡ ಭಾಷೆಯ ಬಗ್ಗೆ ಪ್ರೀತಿ ಗೌರವ ಬೆಳೆಸಿ, ಪರಭಾಷೆಗಳ ಬರೀ ತಿಳಿವಳಿಕೆಗೆಂದು ಅರಿವು ಮೂಡಿಸಬೇಕು. ಕನ್ನಡ ಮರೆತರೆ ನಮ್ಮ ತಾಯಿಯನ್ನು ಮರೆತಂತೆ ಎಂದು ಹೇಳಿದರು.
ಸರ್ವಾಧ್ಯಕ್ಷ ಜಿ.ವಿ. ಶರ್ಮಾ, ಜಿಪಂ ಅಧ್ಯಕ್ಷೆ ಲಲಿತಮ್ಮ ಲಿಂಗರಾಜ, ಮಾಜಿ ಶಾಸಕ ವೆಂಕಟರಾವ ನಾಡಗೌಡ, ನಿಕಟ ಪೂರ್ವ ಸಮ್ಮೇಳನಾಧ್ಯಕ್ಷ ಶಾಶ್ವತಸ್ವಾಮಿ ಮುಕ್ಕುಂದಿಮಠ, ತಾಪಂ ಅಧ್ಯಕ್ಷೆ ಬಸಮ್ಮ ಕೊಟ್ರಪ್ಪ, ನಗರಸಭಾಧ್ಯಕ್ಷ ಜಾಫರ ಜಾಹಗೀರದಾರ, ಹಂಪಿ ಕನ್ನಡ ವಿವಿಯ ಡಾ. ಹೆಬ್ಬಾಲಿ ನಾಗೇಶ, ಎಪಿಎಂಸಿ ಅಧ್ಯಕ್ಷ ಸಣ್ಣ ಕರಿಯಪ್ಪ ಹರೇಟನೂರು, ಟಿಎಪಿಸಿಎಂಎಸ್ ಅಧ್ಯಕ್ಷ ವೆಂಕಟರೆಡ್ಡಿ ಗಾಳಿ, ಕಸಾಪ ಜಿಲ್ಲಾಧ್ಯಕ್ಷ ಮಹಾಂತೇಶ ಮಸ್ಕಿ, ಗೌರವಾಧ್ಯಕ್ಷ ಎಸ್.ಶರಣೇಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಹಿರೇಮಠ, ಸಿ.ಎಸ್. ರಾಮಬಾಬು ಇತರರು ವೇದಿಕೆಯಲ್ಲಿದ್ದರು.
ಸಮ್ಮೇನಾಧ್ಯಕ್ಷರ ಮೆರವಣಿಗೆ
ಸಿಂಧನೂರು: ಬತ್ತದ ನಾಡು ಸಿಂಧನೂರಿನಲ್ಲಿ ನಡೆದ ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಜಿ.ವಿ. ಶರ್ಮಾ ಅವರನ್ನು ತೆರೆದ ವಾಹನದಲ್ಲಿ ನಗರಸಭೆಯಿಂದ ಸತ್ಯ ಗಾರ್ಡನ್‌ವರೆಗೆ ಅದ್ದೂರಿ ಮೆರವಣಿಗೆ ಮಾಡಲಾಯಿತು.
ಮೆರವಣಿಗೆಗೆ ಶಾಸಕ ಹಂಪನಗೌಡ ಬಾದರ್ಲಿ ಚಾಲನೆ ನೀಡಿದರು. ಮೆರವಣಿಯಲ್ಲಿ ಮಹಿಳೆಯರ ಕುಂಭ-ಕಳಸಗಳು, ವಿವಿಧ ವಾದ್ಯಗಳ ಕಲರವ, ಕಲಾಕೃತಿಗಳು, ವೇಷಭೂಷಣಗಳು, ವಿವಿಧ ಸಾಂಸ್ಕೃತಿಕ ತಂಡಗಳು, ಶಾಲಾ ಮಕ್ಕಳ ಶಾಲಾ ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾದಳ, ಸ್ತಬ್ಧ ಚಿತ್ರಗಳು, ಕನ್ನಡದ ಕಂಪ ಸೂಸುವ ಕೇಸರಿ ಮತ್ತು ಹಳದಿ ಬಾವುಟಗಳು, ಕನ್ನಡ ಘೋಷಣೆಗಳ ಕಲರವದೊಂದಿಗೆ ಅದ್ಧೂರಿ ಸಾಹಿತ್ಯ ಜಾತ್ರೆಗೆ ಕಳೆಕಟ್ಟಿತ್ತು.
ಮೆರವಣಿಗೆಯಲ್ಲಿ ನಗರಸಭಾ ಅಧ್ಯಕ್ಷ ಜಾಫರ ಜಾಹಗೀರದಾರ, ಜಿಪಂ ಅಧ್ಯಕ್ಷೆ ಲಲಿತಮ್ಮ ಲಿಂಗರಾಜ, ಮಾಜಿ ಶಾಸಕ ವೆಂಕಟರಾವ ನಾಡಗೌಡ, ಮಹಾಂತೇಶ ಮಸ್ಕಿ ಇತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement