26ರಂದು ರೈತರ ರ್ಯಾಲಿ
ಮುದಗಲ್: ಕೃಷ್ಣಾ ಮೇಲ್ದಂಡೆ ಯೋಜನೆಯ ನಾರಾಯಣಪುರ ಬಲದಂಡೆ ಮತ್ತು ಎಡದಂಡೆ ನಾಲೆ, ರಾಂಪೂರ ಏತನೀರಾವರಿ ನಾಲೆಗಳಿಗೆ ಮಾ.10ರ ವರೆಗೆ ಮಾತ್ರ ನೀರು ಹರಿಸಲು ನೀರಾವರಿ ಸಲಹ ಸಮಿತಿ ನಿರ್ಣಯ ಅಸಮರ್ಪಕವಾದದು ಎಂದು ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನೀರಾವರಿ ಸಲಹಾ ಸಮಿತಿ ಸಭೆಗೆ ರೈತ ಮುಖಂಡರನ್ನು, ಚುನಾಯಿತ ಜನಪ್ರತಿನಿಧಿಗಳನ್ನು ಆಹ್ವಾನ ಮಾಡದೆ ನಿರ್ಲಕ್ಷ್ಯ ತೋರಿದ್ದು ಅಲ್ಲದೆ ಏಕ ಪಕ್ಷೀಯ ನಿರ್ಧಾರ ತೆಗೆದುಕೊಂಡಿರುವುದರಿಂದ ರೈತರಿಗೆ ತೀವ್ರ ನಷ್ಟವಾಗುತ್ತದೆ. ಮಾ.10ರವರೆಗೆ ಮಾತ್ರ ನೀರು ಹರಿಸಿದರೆ ಕಳೆದ ವರ್ಷ ಆದಂತೆ ಈ ವರ್ಷವೂ ಶೇಂಗಾ, ಬತ್ತ, ಹತ್ತಿ, ಮೆಣಸಿನಕಾಯಿ ಬೆಳೆಗಳು ನೀರಿಲ್ಲದೆ ನಷ್ಟ ಅನುಭವಿಸುವುದು ಖಚಿತವಾಗಿದೆ.
ಎಲ್ಲೆಂದರಲ್ಲಿ ನೀರು ಸೋರಿಕೆ: ನೀರಾವರಿ ಇಲಾಖೆ ಅಧಿಕಾರಿಗಳು ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಸರಿಯಾದ ನೀರು ನಿರ್ವಹಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿವೆ. ಬೇಸಿಗೆ ದಿನಗಳಲ್ಲಿ ಹೊಲಗಾಲುವೆ, ಮುಖ್ಯ ನಾಲೆಗಳ ದುರಸ್ತಿ ಮಾಡದೆ ಹಾಳಾಗಿ ನೀರು ಎಲ್ಲೆಂದರಲ್ಲಿ ಸೋರಿಕೆಯಾಗಿ ರೈತರ ಜಮೀನುಗಳಿಗೆ ಸಮರ್ಪಕ ನೀರು ಸರಬರಾಜು ಆಗುವುದಿಲ್ಲ ಎನ್ನವುದನ್ನು ಸ್ವತಃ ನೀರಾವರಿ ಮಂತ್ರಿಗಳೇ ಖುದ್ದು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮಾ.10ರ ವರೆಗೆ ನೀರು ಹರಿಸಿದರೆ ಕಳೆದ ವರ್ಷವಾದ ಪರಿಸ್ಥಿತಿ ಈ ವರ್ಷವೂ ರೈತರಿಗೆ ಆಗುತ್ತದೆ. ಆದ್ದರಿಂದ ಕನಿಷ್ಠ ಮಾ.31ರ ವರೆಗೆ ನೀರು ಹರಿಸಬೇಕೆಂದು ಒತ್ತಾಯಿಸಿ, ಫೆ.26ರಂದು ದೇವದುರ್ಗದಲ್ಲಿ ರೈತರ ಬೃಹತ್ ರ್ಯಾಲಿಯನ್ನು ನಡೆಸಲಾಗುತ್ತದೆ. ಆದ್ದರಿಂದ ರೈತರು, ಜನಪ್ರತಿನಿಧಿಗಳು ಪಕ್ಷಪಾತ ಬಿಟ್ಟು ಹೋರಾಟದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು. ಮಾ.31ರ ವರೆಗೆ ನೀರು ಹರಿಸಲು ಸರ್ಕಾರ ಮುಂದಾಗದಿದ್ದರೆ, ರೈತರಿಗೆ ಆಗುವ ನಷ್ಟದ ಜವಾಬ್ದಾರಿಯನ್ನು ಸರ್ಕಾರವೇ ಹೊರಬೇಕಾಗುತ್ತದೆ. ಹೋರಾಟ ನಿರಂತರವಾಗಿ ನಡೆಯುತ್ತದೆ, ಹೋರಾಟದಲ್ಲಿ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್ ನೇತೃತ್ವದಲ್ಲಿ ನಡೆಯಲಿದ್ದು ಜಿಲ್ಲೆಯ ಎಲ್ಲ ತಾಲೂಕಿನ ರೈತ ಮುಖಂಡರು ಭಾಗವಹಿಸಲಿದ್ದಾರೆ ಎಂದರು.