ಕಾಮಗಾರಿ ಬದಲಾವಣೆ ಮಾಡ್ತೀವಿ...
ಕನ್ನಡಪ್ರಭ ವಾರ್ತೆ, ಸಿಂಧನೂರು, ಫೆ.24
ನಗರದ ಹಳೇ ಬಜಾರ್ ರಸ್ತೆ ಮತ್ತು ಮಹಿಮೂಬ್ ಕಾಲೋನಿ ರಸ್ತೆಗಳನ್ನು ಮೂರು ಯೋಜನೆಗಳಡಿ ನಿರ್ವಹಿಸದೆ ನಗರೋತ್ಥಾನ ಯೋಜನೆಯಡಿ ರಸ್ತೆ ಕಾಮಗಾರಿ ನಡೆಸುತ್ತೇವೆ. ಎಲ್ಲ ಕಾಮಗಾರಿಗಳನ್ನು ಬದಲಾಯಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ. ಹಣ ಕೊಳ್ಳೆ ಹೊಡೆಯುವ ತಂತ್ರ ನಮ್ಮದಲ್ಲ...
- ಇದು ಮಾಜಿ ಶಾಸಕ ವೆಂಕಟರಾವ ನಾಡಗೌಡರಿಗೆ ಶಾಸಕ ಹಂಪನಗೌಡ ಬಾದರ್ಲಿ ನೀಡಿದ ತಿರುಗೇಟು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 13ನೇ ಹಣಕಾಸು ಯೋಜನೆಯಲ್ಲಿ ಹಳೇ ಬಜಾರ್, ಮಹಿಬೂಬ್ ಕಾಲೊನಿ ರಸ್ತೆಗಳ ಅಭಿವೃದ್ಧಿ ಮಾಡಲಾಗುತ್ತದೆ. ಆದರೆ ನಗರೋತ್ಥಾನ ಯೋಜನೆಯ ಹಣ ಈ ರಸ್ತೆಗೆ ಅಗತ್ಯವಿದ್ದರೆ ಮಾತ್ರ ಬಳಸಿಕೊಳ್ತೀವಿ, ಇಲ್ಲದಿದ್ದರೆ ಬೇರೆ ಕಾಮಗಾರಿಗೆ ತೆಗೆದುಕೊಳ್ಳುತ್ತೇವೆ. ಗುಣಮಟ್ಟದ ಕಾಮಗಾರಿ ಮಾಡಿಸುವುದು ನಮ್ಮ ಉದ್ದೇಶ ಎಂದರು.
13ನೇ ಹಣಕಾಸು ಯೋಜನೆ, ನಗರಸಭೆ ಅನುದಾನ, ನಗರೋತ್ಥಾನ ಯೋಜನೆಯಡಿಯ ಮೂರೂ ಅನುದಾನಗಳನ್ನು ರಸ್ತೆಗೆ ಬಳಸಲಾಗುತ್ತಿದ್ದು, ಕೊಳ್ಳೆ ಹೊಡೆಯಲಾಗುತ್ತದೆ ಎಂದು ವೆಂಕಟರಾವ ನಾಡಗೌಡರು ಇತ್ತೀಚೆಗೆ ದೂರಿದ ಹಿನ್ನೆಲೆಯಲ್ಲಿ ಶಾಸಕರು ಪ್ರತಿಕ್ರಿಯೆ ನೀಡಿದರು.
ದಾರಿ ತಪ್ಪಿಸಬೇಡಿ: ನಾನು ಶಾಸಕರಾಗಿದ್ದಾಗ ಅನುಮೋದನೆಗೊಂಡ ನಗರದ ಕುಡಿವ ನೀರಿನ ಯೋಜನೆ, ಯುಜಿಡಿ ಯೋಜನೆ, ಗ್ರಾಮೀಣ ಪ್ರದೇಶದ ರಸ್ತೆಗಳು, ಸ್ವಜಲಧಾರಾ, ಜಲ ನಿರ್ಮಲ ಸೇರಿದಂತೆ ಅನೇಕ ಯೋಜನೆಗಳನ್ನು ಅಭಿವೃದ್ಧಿ ಮಾಡಿದ್ದಾಗಿ ಕ್ಯಾಲೆಂಡರ್‌ನಲ್ಲಿ ಮುದ್ರಣ ಮಾಡಿ ವೆಂಟರವಾವ ನಾಡಗೌಡರು ಜನರನ್ನು ದಾರಿ ತಪ್ಪಿಸಿದರು. ಆದರೆ ನಾನು ಅವರು ಮಾಡಿದ ಕೆಲಸಗಳನ್ನು ಹಿಂದಿನ ಅವಧಿಯಲ್ಲೇ ಆಗಿವೆ ಎಂದು ಎಲ್ಲಾ ಕಾರ್ಯಕ್ರಮಗಳಲ್ಲಿ ಬಹಿರಂಗವಾಗಿಯೇ ಹೇಳಿದ್ದೇನೆ ಎಂದು ಹೇಳಿದರು.
ನಾಡಗೌಡರು ದ್ವಂದ್ವ ಹೇಳಿಕೆ ನೀಡದೇ ಸರಿಪಡಿಸಿಕೊಳ್ಳಬೇಕು. ಅವರ ಅವಧಿಯಲ್ಲಿಯೇ ನಗರೋತ್ಥಾನ ಯೋಜನೆಯಡಿ ಜಿಲ್ಲೆಗೆ 75 ಕೋಟಿ ಬಂದಿತ್ತು. ಒಂದೇ ಪ್ಯಾಕೇಜ್‌ನಲ್ಲಿ ಟೆಂಡರ್ ಕರೆದಿದ್ದರಿಂದ ಗುತ್ತೇದಾರರು ಯಾರೂ ಮುಂದೆ ಬರಲಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ನಂತರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಟೆಂಡರ್ ಕರೆಯಲು ನಿರ್ಧರಿಸಿ, ಸರ್ಕಾರಕ್ಕೆ ಕಳಹಿಸಿ ಅನುಮೋದನೆ ಪಡೆಯಲಾಗಿದೆ ಎಂದು ತಿಳಿಸಿದರು.
ಆದ್ಯತೆ: ಶಾಸಕನಾದ ನಂತರ ನಗರದ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ. ಶಾಸಕರ ಅನುದಾನ, ಎಚ್ಕೆಡಿಬಿ, ನಗರೋತ್ಥಾನ ಯೋಜನೆ, 57 ಕೋಟಿಯಲ್ಲಿ 31 ವಾರ್ಡ್‌ಗೂ 24್ಗ7 ಶುದ್ಧ ಕುಡಿವ ನೀರಿನ ಯೋಜನೆಗೆ, ನಗರದ ಕೆಲ ವಾರ್ಡುಗಳ ಅಭಿವೃದ್ಧಿಗೆ ಹೆಚ್ಚುವರಿ ಎಸ್‌ಎಫ್‌ಸಿ ಅನುದಾನದಲ್ಲಿ 3 ಕೋಟಿ ತಂದು ಅಭಿವೃದ್ಧಿಗೆ ಪ್ರಯತ್ನ ನಡೆಸಿದ್ದೇನೆ. ನಗರದ ಅಭಿವೃದ್ಧಿಗೆ ಈಗಾಗಲೇ ಕೋಟ್ಯಂತರ ಟೆಂಡರ್ ಕರೆಯಲಾಗಿದೆ. ಸದ್ಯದಲ್ಲಿಯೇ ಕಾಮಗಾರಿ ನಡೆಯಲಿವೆ ಎಂದ ಅವರು, 10 ತಿಂಗಳಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಲ್ಲಿ ಬಿಡುಗಡೆಯಾದ ಅನುದಾನದ ಪಟ್ಟಿಯನ್ನು ಮಾರ್ಚ್ ಅಂತ್ಯದಲ್ಲಿ ಬಿಡುಗಡೆ ಮಾಡುತ್ತೇನೆ. ನಾಡಗೌಡರು ಬೇಕಾದರೆ ಪರಾಮರ್ಶೆ ಮಾಡಿಕೊಳ್ಳಲಿ ಎಂದು ಕುಟುಕಿದರು.
ತಾರತಮ್ಯವಿಲ್ಲ: ನಗರದ ಆದರ್ಶ ಕಾಲೋನಿ, ವೆಂಕಟೇಶ್ವರ ಕಾಲೋನಿ, ಗಂಗಾನಗರ ಸೇರಿದಂತೆ ಇನ್ನಿತರ ವಾರ್ಡ್‌ಗಳ ಅಭಿವೃದ್ಧಿಗೆ 3 ಕೋಟಿಯನ್ನು ಎಸ್‌ಎಫ್‌ಸಿ ವಿಶೇಷ ಅನುದಾನ ತಂದಿದ್ದೇನೆ. ಇಲ್ಲಿ ಕಾಂಗ್ರೆಸ್ ಮತ್ತು ಬೇರೆ ಪಕ್ಷದ ಸದಸ್ಯರು ಎಂದು ಪರಿಗಣಿಸಿಲ್ಲ. ಆದರೆ ಅಭಿವೃದ್ಧಿ ಕಾಣದ ವಾರ್ಡ್‌ಗಳಿಗೆ ಹಣ ಮೀಸಲಿಟ್ಟಿದೆ ಎಂದು ಸ್ಪಷ್ಟಪಡಿಸಿದರು.
ಪ್ರಸ್ತಾವನೆ: ಸಂವಿಧಾನದ 371(ಜೆ) ಕಲಂನಡಿ ತಾಲೂಕಿಗೆ ಅಂದಾಜು 3 ಕೋಟಿ ಬಿಡುಗಡೆಯಾಗಿದ್ದು, ಆಸ್ಪತ್ರೆಗಾಗಿ ಅಂದಾಜು 45 ಲಕ್ಷ, ತಾಯಮ್ಮ ಕ್ಯಾಂಪಿನ ಕುಡಿವ ನೀರಿಗೆ 20 ಲಕ್ಷ, ಹಾಸ್ಟೆಲ್‌ಗಳಿಗೆ 30 ಲಕ್ಷ, ನಗರದ 4ನೇ ವಾರ್ಡಿನ ಅಭಿವೃದ್ಧಿಗೆ 34.5 ಲಕ್ಷ ವಿವಿಧ ಕಾಮಗಾರಿಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.
ಈ ವೇಳೆ ನಗರಸಭಾ ಅಧ್ಯಕ್ಷ ಜಾಫರ ಅಲಿ ಜಾಹಗೀರದಾರ, ಜಿಪಂ ಸದಸ್ಯ ಚಂದೂಸಾಬ್ ಮಳ್ಳೂರು, ತಾಪಂ ಉಪಾಧ್ಯಕ್ಷ ನಾಗಪ್ಪ ಗೋಪರ್ಸಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಿ ಮಲ್ಲಿಕ್, ನಗರಸಭಾ ಸದಸ್ಯರಾದ ಪ್ರಭುರಾಜ, ಸುರೇಶ ಸೇಠ, ಶಿವಬಸನಗೌಡ, ಟಿಎಪಿಸಿಎಂಎಸ್‌ನ ನಿರ್ದೇಶಕ ಸಂಜಯ್ ಪಾಟೀಲ್, ಕಾಂಗ್ರೆಸ್ ಮುಖಂಡರಾದ ಮಲ್ಲನಗೌಡ ಕನ್ನಾರಿ, ಮಹ್ಮದ್ ಅಲಿ, ವೀರರಾಜು ಹಾಗೂ ಮತ್ತಿತರರು ಇದ್ದರು.