ಮಾ. 2ಕ್ಕೆ ಛಲವಾದಿ ಸಮಾಜದ ರಾಜ್ಯ ಸಮಾವೇಶ
ರಾಯಚೂರು: ಸೂಕ್ತ ರಾಜಕೀಯ ಪ್ರಾತಿನಿಧ್ಯ, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಹೆಚ್ಚಿನ ಅವಕಾಶ ಸೇರಿ ವಿವಿಧ ಅಂಶಗಳನ್ನು ಮುಂದಿರಿಸಿಕೊಂಡು ಛಲವಾದಿ ಸಮುದಾಯವನ್ನು ಸಂಘಟಿಸುವ ಉದ್ದೇಶದಿಂದ ಮಾ.2ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಛಲವಾದಿ ಸಮಾಜದ ಸಮಾವೇಶ ಆಯೋಜಿಸಲಾಗಿದೆ.
ನಗರದಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಜಗನ್ನಾಥ ಸುಂಕಾರಿ ಅವರು, ಸಮಾಜದವರು ರಾಜಕೀಯವಾಗಿ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ತೀರಾ ಹಿಂದುಳಿದಿದ್ದು, ವಿವಿಧ ರಾಜಕೀಯ ಪಕ್ಷಗಳು ಸಮುದಾಯಕ್ಕೆ ಸೂಕ್ತ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಸಮಾಜದವರನ್ನು ಸಂಘಟಿಸಲು ಸಮಾವೇಶ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಸಮಾವೇಶವು ಪಕ್ಷ ಹಾಗೂ ರಾಜಕೀಯ ಹೊರತಾದ ಕಾರ್ಯಕ್ರಮ ವಾಗಿದೆ. ಎಲ್ಲ ರಾಜಕೀಯ ಪಕ್ಷಗಳಲ್ಲಿರುವ ಛಲವಾದಿ ಸಮಾಜದ ಹಿರಿಯ ನಾಯಕರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಮೋಟಮ್ಮ ಸೇರಿದಂತೆ ಅನೇಕ ರಾಜಕೀಯ ನಾಯಕರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆಂದು ಹೇಳಿದರು.
ಒತ್ತಾಯ: ಛಲವಾದಿ ಜನಾಂಗದವರಿಗೆ ವಿವಿಧ ರಾಜಕೀಯ ಪಕ್ಷಗಳು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡಬೇಕು.ರಾಜ್ಯದ ಕೋಲಾರ, ಚಾಮರಾಜ ನಗರ, ಚಿತ್ರದುರ್ಗ ಸೇರಿದಂತೆ ಮೀಸಲಿರುವ ಐದು ಕ್ಷೇತ್ರಗಳಲ್ಲಿ ಹೆಚ್ಚಿನ ಸ್ಥಾನ ಛಲವಾದಿ ಸಮಾಜದ ನಾಯಕರಿಗೆ ನೀಡುವಂತೆ ಒತ್ತಾಯಿಸಲಾಗುತ್ತದೆ ಎಂದು ಹೇಳಿದರು.
ಛಲವಾದಿ ಸಮಾವೇಶಕ್ಕೆ ಸಂಬಂಧಿಸಿ ನಿವೃತ್ತ ಐಎಎಸ್ ಅಧಿಕಾರಿ ಶಿವರಾಂ ಅವರ ಹೆಸರು ಬಳಸಿಕೊಳ್ಳುವುದರಲ್ಲಿ ತಪ್ಪೇನಿಲ್ಲ. ಅವರು ಸಮಾಜದ ಹಿರಿಯರಾಗಿದ್ದು, ಅವರಂತೆಯೇ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತಿತರರ ಹೆಸರೂ ಬಳಸಲಾಗುತ್ತಿದೆ. ನೇತೃತ್ವ ವಹಿಸಿಕೊಂಡಿರುವವರ ಬಗ್ಗೆ ಹೆಚ್ಚು ಪ್ರಚಾರ ದೊರೆಯುವುದು ಸಹಜ. ಆ ಬಗ್ಗೆ ಗೊಂದಲಬೇಡ ಎಂದರು.
ಸಮಾವೇಶ: ಪರಿಶಿಷ್ಟ ಜಾತಿಗಳ ಪೈಕಿ ಮೂಲ ಅಸ್ಪೃಶ್ಯರಿಗೆ ವಿವಿಧ ರಾಜಕೀಯ ಪಕ್ಷಗಳು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಹೆಚ್ಚು ಅವಕಾಶ ಕಲ್ಪಿಸಬೇಕು. ಟಿಕೆಟ್ ಹಂಚಿಕೆಯಲ್ಲಿಯೂ ಸಮಾನತೆ ಕಾಪಾಡುವಂತೆ ರಾಜಕೀಯ ಪಕ್ಷಗಳಿಗೆ ಸಮಾವೇಶದ ಮೂಲಕ ಒತ್ತಾಯಿಸಲಾಗುತ್ತದೆ ಎಂದ ಅವರು, ಸಮಾವೇಶವು ಯಾವುದೇ ರಾಜಕೀಯ ಪಕ್ಷದಿಂದ ಆಯೋಜಿಸಿದ್ದಲ್ಲ. ಬದಲಿಗೆ ರಾಜಕೀಯ ಹೊರತಾದ ಸಮಾವೇಶವಾಗಿದೆ. ಸಮಾಜದ ಸಂಘಟನೆಯೇ ಮೂಲ ಉದ್ದೇಶವಾಗಿದೆ ಎಂದರು.
ಬೆಂಗಳೂರಿನಲ್ಲಿ ಮಾ. 2ರಂದು ನಡೆಯಲಿರುವ ಛಲವಾದಿ ಮಹಾಸಭಾದ ರಾಜ್ಯ ಮಟ್ಟದ ಸಮಾವೇಶದಲ್ಲಿ ಪಾಲ್ಗೊಳ್ಳಲು ಸಮಾಜದವರಿಗೆ ಅನುಕೂಲವಾಗಲು ಬೀದರರ್ನಿಂದ ಬೆಂಗಳೂರು ಮತ್ತು ಬೆಳಗಾವಿಯಿಂದ ಬೆಂಗಳೂರಿಗೆ ವಿಶೇಷ ರೈಲು ಓಡಿ ಸಲಾಗುತ್ತಿದೆ. ಅದೇ ರೀತಿ ಪ್ರತಿ ಜಿಲ್ಲೆಯಿಂದ 10ಬಸ್ಗಳಲ್ಲಿ ಬೆಂಗಳೂರಿಗೆ ಸಮಾಜದವರನ್ನು ಕರೆದೊಯ್ಯಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯ ಮಟ್ಟದ ಸಮಾವೇಶದಲ್ಲಿ ಛಲವಾದಿ ಸಮಾಜದ ಜನತೆ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ರವೀಂದ್ರನಾಥ ಪಟ್ಟಿ, ಬಸವರಾಜ ಅಸ್ಕಿಹಾಳ, ಆರ್. ತಿಮ್ಮಾರೆಡ್ಡಿ ಸೇರಿದಂತೆ ಅನೇಕರಿದ್ದರು.