ವಿಶೇಷ ಅಭಿವೃದ್ಧಿ ಯೋಜನೆ; 30 ಅಂಗನವಾಡಿ ನಿರ್ಮಾಣ
ದೇವದುರ್ಗ: ವಿಶೇಷ ಅಭಿವೃದ್ಧಿ ಯೋಜನೆ ಅಡಿ ನೂತನವಾಗಿ 30 ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲಾಗುವದೆಂದು ಶಾಸಕ ಎ.ವೆಂಕಟೇಶ ನಾಯಕ ತಿಳಿಸಿದರು.
ಅರಕೇರಾ ಹೋಬಳಿಯ ಬಂಡೆಗುಡ್ಡದ ಪೂಜಾರಿ ಸೀತಮ್ಮನ ತಾಂಡಾದಲ್ಲಿ ಭಾನುವಾರ ಹೈಟೆಕ್ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿ, ತಾಲೂಕಿನಲ್ಲಿ 30 ನೂತನ ಹೈಟೆಕ್ (ಮಾದರಿ ಅಂಗನವಾಡಿ) ಅಂಗನವಾಡಿ ಕೇಂದ್ರಗಳಿಗೆ ವಿಶೇಷ ಅಭಿವಣದ್ಧಿ ಯೋಜನೆ ಅಡಿ ಪ್ರತಿ ಅಂಗನವಾಡಿ ಕೇಂದ್ರಕ್ಕೆ 10.95 ಲಕ್ಷ ವೆಚ್ಚ ಮಾಡಲಾಗುತ್ತಿದೆ ಎಂದರು.
ತಾಲೂಕಿನ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸಾಕಷ್ಟು ಅನುದಾನ ದೊರೆಯುತ್ತಿದೆ. ತಾಲೂಕಿನ ಅಭಿವೃದ್ಧಿಗೆ ಅನುದಾನ ಕೊರತೆಯಿಲ್ಲ. ಆದರೆ ಅನುದಾನದ ಸದ್ಬಳಕೆಯಾಗಬೇಕಿದೆ. ಸರ್ಕಾರದ ಹಣದ ದುರ್ಬಳಕೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕ್ಯಾದಿಗ್ಗೇರಾ ಗ್ರಾಪಂ ಉಪಾಧ್ಯಕ್ಷ ಶಂಕ್ರಪ್ಪ ರಾಠೋಡ, ಜಿಲ್ಲಾ ಸೇವಾದಳದ ಅಧ್ಯಕ್ಷ ಬಾಪೂಗೌಡ ಚಿಕ್ಕ ಹೊನ್ನಕುಣಿ ಮಾತನಾಡಿದರು.
ಗ್ರಾ.ಪಂ. ಅಧ್ಯಕ್ಷ ಶಿವಮಾನ್ಯಪ್ಪ, ಎಸ್ಡಿಎಂಸಿ ಅಧ್ಯಕ್ಷ ರಾಯಪ್ಪ ಚವ್ಹಾಣ, ಗ್ರಾಪಂ ಸದಸ್ಯ ಅಂಬರೇಶ, ಸಿಡಿಪಿಒ ಯಮನಪ್ಪ ವಾಲ್ಮೀಕಿ, ಕಸಾಪ ಅಧ್ಯಕ್ಷ ನರಸಿಂಗರಾವ್ ಸರ್ಕೀಲ್, ವೆಂಕಟೇಶ ನೀಲಗಲ್, ಹನುಮಂತ ಶಾವಂತಗಲ್, ಲಿಂಗಣ್ಣ ಕಟ್ಟಿಕಾರ, ವೆಂಕಟೇಶ ರಾಠೋಡ, ಮೋದಿನಸಾಬ ಸೇರಿ ಅನೇಕರಿದ್ದರು.