ಅನಾಥರಿಗೆ ಕಲ್ಪವೃಕ್ಷ ನೆರವು; ಶ್ಲಾಘನೆ
ಲಿಂಗಸ್ಗೂರು: ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಅನಾಥ ಮತ್ತು ಅಪಾಯದ ಅಂಚಿನಲ್ಲಿರುವ ಮಕ್ಕಳಿಗೆ ನಿಧಿ ಸಂಗ್ರಹಿಸಿ ಸಹಾಯ ಮಾಡುವ ಕಾರ್ಯ ಶ್ಲಾಘನೀಯ ಎಂದು ಡಿವೈಎಸ್‌ಪಿ ಅನಿತಾ ಹದ್ದಣ್ಣವರ್ ಅಭಿಪ್ರಾಯಪಟ್ಟರು.
ಪಟ್ಟಣದ ಪದವಿ ಪೂರ್ವ ಕಾಲೇಜು ಒಳ ಆವರಣದಲ್ಲಿ ಕಲ್ಪವೃಕ್ಷ ಸಮಗ್ರ ಅಭಿವೃದ್ಧಿ ಸಂಸ್ಥೆಯಿಂದ ಶನಿವಾರ ಹಮ್ಮಿಕೊಂಡಿದ್ದ ಕಲ್ಪವೃಕ್ಷ ಸಾಂಸ್ಕೃತಿಕ ಸಂಜೆ-2014 ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳ ಶೈಕ್ಷಣಿಕ ಪ್ರಗತಿ ಜೊತೆಗೆ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಪಾಲಕರ ಹಾಗೂ ಶಿಕ್ಷಕರಂತೆ ಕಲ್ಪವೃಕ್ಷ ಸಮಗ್ರ ಅಭಿವೃದ್ಧಿ ಕೇಂದ್ರ ಭರತ ನಾಟ್ಯ, ವೆಸ್ಟರ್ನ್ ಡ್ಯಾನ್ ಹಾಗೂ ಶಾಸ್ತ್ರೀಯ ಸಂಗೀತ ತರಬೇತಿ ನೀಡಿ ಇಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಮಕ್ಕಳ ಪ್ರತಿಭೆ ಹೊರ ತರುವ ಕಾರ್ಯ ಸಂತಸದ ವಿಷಯ ಎಂದರು.
ಒಳ್ಳೆಯ ಕಾರ್ಯ: ಈ ಸಂದರ್ಭದಲ್ಲಿ ಮಾತನಾಡಿದ ಸಿಡಿಪಿಒ ಪ್ರಭಾಕರ, ಇತ್ತಿಚಿನ ದಿನಗಳಲ್ಲಿ ಕೆಲ ಸರ್ಕಾರೇತರ ಸಂಸ್ಥೆಗಳು ಅನಾಥ ಮಕ್ಕಳ ಹೆಸರಿನಲ್ಲಿ ಹಣ ಮಾಡಲು ತೊಡಗಿವೆ. ಕಲ್ಪವೃಕ್ಷ ಸಮಗ್ರ ಅಭಿವೃದ್ಧಿ ಸಂಸ್ಥೆ ಬಡ, ಅನಾಥ, ಅಪಾಯದ ಅಂಚಿನಲ್ಲಿರುವ ಮಕ್ಕಳಿಗೆ ನಿಧಿ ಸಂಗ್ರಹಿಸಿ ಸಹಾಯ ಮಾಡುತ್ತಿರುವುದು ಒಳ್ಳೆಯ ಕಾರ್ಯ ಎಂದರು.
ಮನವಿ: ಇಲಾಖೆಯಿಂದ ಎಚ್‌ಐವಿ ಶಂಕಿತ ಮತ್ತು ಎಚ್‌ಐವಿ ಬಾಧಿತರಿಗೆ ರು. 700 ಹಾಗೂ ಅವರ ವಾರ್ಷಿಕ ಶಿಕ್ಷಣಕ್ಕೆ ರು. 750 ನೀಡುತ್ತಿದೆ ಹಾಗಾಗಿ, ಹೆಚ್‌ಐವಿ ಶಂಕಿತ ಮತ್ತು ಬಾಧಿತ ಮಕ್ಕಳು ಅಥವಾ ಪಾಲಕರು ಕಂಡು ಬಂದರೆ ತಕ್ಷಣವೇ ಇಲಾಖೆಗೆ ಮಾಹಿತಿ ನೀಡಿ ಎಂದು ಪ್ರಭಾಕರ ಮನವಿ ಮಾಡಿದರು.
ಕಾರ್ಯಕ್ರಮವನ್ನು ಪುರಸಭೆ ಅಧ್ಯಕ್ಷ ಕುಮಾರಸ್ವಾಮಿ ಸಾಲ್ಮನಿ ಉದ್ಘಾಟಿಸಿದರು. ಈ ವೇಳೆ ಸಂಸ್ಥೆ ಅಧ್ಯಕ್ಷೆ ಉಮಾ ಆನಂದ್, ಕಾರ್ಯದರ್ಶಿ ಆನಂದ ಬೋವಿ ಇದ್ದರು. ಕಾರ್ಯಕ್ರಮದ ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.