ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕೃಷ್ಣಾ ನದಿ ಮೆಲ್ಸೇತುವೆ ನಿರ್ಮಾಣಕ್ಕೆ ಆಗ್ರಹ

Vishwanath S
Updated On : 26 Feb 2014, 11:29 am

ಹಿರೇವಡಗೇರಾ: ಇಲ್ಲಿಗೆ ಸಮೀಪದ ಕೋಡಾಲ ಗ್ರಾಮದ ಪಕ್ಕದಲ್ಲಿಯೇ ಕೃಷ್ಣಾ ನದಿ ಹರಿಯುತ್ತದೆ. ಈ ನದಿಯು ಇಲ್ಲಿ ಎರಡು ಹೋಳಾಗಿ ಹರಿಯುತ್ತದೆ. ಶತಮಾನಗಳ ಹಿಂದೆ ಇಲ್ಲಿ  ನಡುಗಡ್ಡೆ  ನಿರ್ಮಾಣವಾಗಿರುವುದು  ಇದಕ್ಕೆ ಕಾರಣ.
ಈ ನಡುಗಡ್ಡೆಯಲ್ಲಿ ಪುರಾತನ ಗಡ್ಡೆ ಬಸವೇಶ್ವರ ದೇವಸ್ಥಾನವಿದೆ. (ದೇವಸ್ಥಾನವು ನಡುಗಡ್ಡೆಯಲ್ಲಿರುವ ಕಾರಣ ಈ ಹೆಸರು ಬಂದಿದೆ) ದೇವಸ್ಥಾನದ ಎರಡೂ ಬದಿಯಲ್ಲಿ ಕೃಷ್ಣಾ ನದಿಯು ಭೋರ್ಗರೆದು ಹರಿಯುತ್ತದೆ. ನದಿಗೆ ಮೇಲ್ಸೇತುವೆ ಇಲ್ಲದಿರುವ ಕಾರಣ ಭಕ್ತರು ದೇವಸ್ಥಾನಕ್ಕೆ ಹೋಗಬೇಕಾದರೆ ತೆಪ್ಪವನ್ನು ಉಪಯೋಗಿಸುವುದು ಅನಿವಾರ್ಯವಾಗಿದೆ. ಇದರಿಂದ ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ  ಭಾರಿ ಸಮಸ್ಯೆಯಾಗಿದೆ.
ಯಾವುದೇ ಪ್ರಯೋಜನವಾಗಿಲ್ಲ: ಏಕೆಂದರೆ ಈ ನದಿಯಲ್ಲಿ ಬಹಳಷ್ಟು ಮೊಸಳೆಗಳು ಇವೆ. ಪ್ರತಿ ವರ್ಷ ಬೇಸಿಗೆಯಲ್ಲಿ ಮೊಸಳೆಗಳು ದನ ಕರುಗಳಿಗೆ ಹಾಗೂ ಜನರಿಗೆ ತೊಂದರೆಯನ್ನು ಮಾಡಿವೆ.  ತೆಪ್ಪದಲ್ಲಿ ಕುಳಿತು  ನದಿಯನ್ನು ದಾಟುವಾಗ ಏನಾದರೂ ಹೆಚ್ಚುಕಮ್ಮಿಯಾದರೆ ಜೀವಹಾನಿಯಾಗಬಹುದು ಎಂದು ಭಾವಿಸಿ ನದಿಗೆ ಮೇಲ್ಸೇತುವೆ ನಿರ್ಮಿಸಲು ಕೋರಿ ಜಿಲ್ಲಾಡಳಿತಕ್ಕೆ ಅನೇಕ ಬಾರಿ ಮನವಿಯನ್ನು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕರವೇ ಸಂಘಟನಾ ಕಾರ್ಯದರ್ಶಿ ಭೀಮು ಕೋಡಾಲ ದೂರುತ್ತಾರೆ.
ಗಡ್ಡೆ ಬಸವೇಶ್ವರರ ಜಾತ್ರೆ :ಪ್ರತಿವರ್ಷ ಫೆಬ್ರವರಿ ತಿಂಗಳಲ್ಲಿ ಗಡ್ಡೆ ಬಸವೇಶ್ವರರ ಜಾತ್ರೆ ನಡೆಯುತ್ತದೆ. ಈ ಜಾತ್ರೆಗೆ ಸುತ್ತಮುತ್ತಲಿನ ಗ್ರಾಮಸ್ಥರೇ ಅಲ್ಲದೆ ಪಕ್ಕದ ಜಿಲ್ಲೆಗಳಾದ ರಾಯಚೂರು, ಗುಲ್ಬರ್ಗ, ನೆರೆರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ. ನದಿಗೆ ಮೇಲ್ಸೇತುವೆ ಇಲ್ಲದಿರುವ ಕಾರಣ ಇವರೆಲ್ಲರೂ ತೆಪ್ಪದಲ್ಲಿ ನದಿಯನ್ನು ದಾಟಿ ದೇವಸ್ಥಾನಕ್ಕೆ ಹೋಗುಬೇಕಾದ್ದು ಅನಿವಾರ್ಯವಾಗಿದೆ.
  ಆದ ಕಾರಣ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಕೂಡಲೇ ಇತ್ತ ಗಮನ ಹರಿಸಿ ಗಡ್ಡೆ ಬಸವೇಶ್ವರ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಸೇತುವೆಯನ್ನು ನಿರ್ಮಿಸಿದರೆ ಎಲ್ಲರಿಗೂ ಅನುಕೂಲವಾಗುತ್ತದೆ. ಸಂಬಂಧಪಟ್ಟವರು ಈ ಕೂಡಲೇ ಕ್ರಮ ಕೈಗೊಂಡು ಭಕ್ತರಿಗೆ ಅನುಕೂಲ ಮಾಡಿಕೊಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement