ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಿಸಿಎಂ ಹಾಸ್ಟೆಲ್ ಮಕ್ಕಳು ಅಸ್ವಸ್ಥ

Vishwanath S
Updated On : 26 Feb 2014, 11:29 am

ರಾಯಚೂರು: ನಗರದ ಮೆಟ್ರಿಕ್ ಬಿಸಿಎಂ ಪೂರ್ವವಸತಿ ನಿಲಯದಲ್ಲಿ ಆಹಾರ ಸೇವಿಸಿದ ನಂತರ ತೀವ್ರ  ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ ಘಟನೆ ಮಂಗಳವಾರ ನಡೆದಿದೆ. ವಸತಿ ನಿಲಯದ ಆರು ಜನ ವಿದ್ಯಾರ್ಥಿಗಳು ಬೆಳಗ್ಗೆ ಆಹಾರ ಸೇವಿಸಿದ ನಂತರದಲ್ಲಿ ವಾಂತಿ ಬೇಧಿಯಿಂದ ಬಳಲಿದ್ದು, ಕೂಡಲೇ ಅವರನ್ನು ನವೀನ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಯಿತು. ವಾಸವಿ ನಗರದಲ್ಲಿರುವ ವಸತಿ ನಿಲಯದ ಆಹಾರ ತಯಾರಿಕೆ ವೇಳೆ ಕಳಪೆ ತೊಗರಿ ಬೇಳೆ ಬಳಸಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ.
ಇಂದು ಕ್ರೀಡಾ ಅಭಿಯಾನ ಜಾಥಾ
ರಾಯಚೂರು: ಭಾರತದ ಯುವಕರ ಕನಸುಗಳನ್ನು ನನಸುಗೊಳಿಸಲು ಸಕ್ರಿಯವಾಗಿದೆ ಎಂಬ ಘೋಷಣೆಯೊಂದಿಗೆ, ರಾಷ್ಟ್ರೀಯ ಯುವ ನಿಯಮ 2014 ಮತ್ತು ಕ್ರೀಡೆಯ ಮೂಲಕ ಜೀವನ ಮಾರ್ಪಡಿಸೋಣ ಎಂಬ ಘೋಷಣೆಯೊಂದಿಗೆ ರಾಜೀವ್ ಗಾಂಧಿ ಕ್ರೀಡಾ ಅಭಿಯಾನ ಉದ್ಘಾಟನಾ ಕಾರ್ಯಕ್ರಮದ ಜಾಥಾ ನಗರದಲ್ಲಿ ಫೆ. 26ರಂದು ನಡೆಯಲಿದೆ. ಅಂದು ಬೆಳಗ್ಗೆ 9 ಕ್ಕೆ ಡಿಸಿ ಕಚೇರಿಯಿಂದ ಬಸ್ ನಿಲ್ದಾಣ ಮಾರ್ಗವಾಗಿ ಜಾಥಾ ಸಾಗಿ ಪುನಾ ಜಿಲ್ಲಾ ಕ್ರೀಡಾಂಗಣದಲ್ಲಿ ಸಮಾರೋಪಗೊಳ್ಳಲಿದೆ. ಜಾಥಾವನ್ನು ಜಿಲ್ಲಾಡಳಿತ, ಜಿಪಂ, ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸೇರಿ ವಿವಿಧ ಇಲಾಖೆಗಳ ಆಶ್ರಯದಲ್ಲಿ ಆಯೋಜಿಸಿವೆ.
ಮಾ.2ರಂದು ಕರವೇ ರಾಜ್ಯ ಮಟ್ಟದ ಸಭೆ
ರಾಯಚೂರು: ಬೆಂಗಳೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಮಟ್ಟದ ಸಭೆಯನ್ನು ಮಾ.2ರಂದು ಕರೆಯಲಾಗಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಅಶೋಕ ಕುಮಾರ್ ಜೈನ್ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರಿನ ಮಲ್ಲೇಶ್ವರಂನ 13ನೇ ಅಡ್ಡರಸ್ತೆಯ ಲ್ಲಿರುವ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಅಂದು ರಾಜ್ಯಮಟ್ಟದ ಸಭೆ ನಡೆಯಲಿದ್ದು, ಎಚ್.ಶಿವರಾಮೇಗೌಡರು ಸಭೆಯ ನೇತೃತ್ವ ವಹಿಸಿಕೊಳ್ಳಲಿದ್ದಾರೆಂದು ಹೇಳಿದರು.
ಜಿಲ್ಲೆಯ ಎಲ್ಲ ತಾಲೂಕುಗಳಿಂದ 200ಕ್ಕೂ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಬೆಂಗಳೂರಿನ ರಾಜ್ಯಮಟ್ಟದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇತ್ತೀಚೆಗೆ ಸಂಘಟನೆಯನ್ನು ಪ್ರವೀಣಶೆಟ್ಟಿ ಅವರು ತೊರೆದಿದ್ದು, ಈ ಹಿನ್ನೆಲೆಯಲ್ಲಿ ಸಂಘಟನೆಯನ್ನು ಮತ್ತಷ್ಟು ಸದೃಢಗೊಳಿಸಲಾಗುತ್ತಿದೆ. ಶಿವರಾಮೇಗೌಡರು ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಸರ್ಕಾರಿ ಹುದ್ದೆಯಿಂದ ಸ್ವಯಂ ನಿವೃತ್ತಿ ಹೊಂದಿದ್ದು, ಸಂಘಟನೆಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿದ್ದಾರೆಂದು ತಿಳಿಸಿದರು.
ಖಲೀಲ್ ಪಾಷಾ, ಶ್ರೀನಿವಾಸ ದಾಸರ, ಮಾನಸಿಂಗ್ ಠಾಕೂರ್, ಕೆ.ಕಿಶನರಾವ್, ರಘುವೀರನಾಯಕ, ಮಲ್ಲಿಕಾರ್ಜುನ ಸೇರಿದಂತೆ ಅನೇಕರಿದ್ದರು.
ಗ್ರಾಮ ನೈರ್ಮಲ್ಯ ಅರಿವು ಕಾರ್ಯಕ್ರಮಕ್ಕೆ ಚಾಲನೆ
ದೇವದುರ್ಗ: ಗ್ರಾಮೀಣ ಭಾಗದ ಜನರ ಬಯಲು ಶೌಚಕ್ಕೆ ತೆರಳುವುದಕ್ಕೆ ಕಡಿವಾಣ ಹಾಕಬೇಕೆಂದು ಜಲ ನಿರ್ಮಲ ಯೋಜನೆ ಸದಸ್ಯ ಹಾಗೂ ಪಿಕಾರ್ಡ್ ಬ್ಯಾಂಕಿನ ಮಾಜಿ ಅಧ್ಯಕ್ಷ ಬಿ. ಲಿಂಗಣ್ಣಗೌಡ ಕೊಪ್ಪರ ತಿಳಿಸಿದರು.
ಅವರು ಈಚೆಗೆ ತಾಲೂಕಿನ ಕೊಪ್ಪರ ಗ್ರಾಮದಲ್ಲಿ ಜಲ ನಿರ್ಮಲ ಯೋಜನೆ ಜಿಲ್ಲಾ ನೆರವು ಘಟಕ ರಾಯಚೂರು ಹಾಗೂ ಗ್ರಾಪಂ ಸಂಯುಕ್ತಾಶ್ರಯದಲ್ಲಿ ನೈರ್ಮಲ್ಯ ಅರಿವು ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ರು. 3ಕೋಟಿ ವೆಚ್ಚ ಮಾಡಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಶುದ್ಧ ಕುಡಿಯುವ ನೀರನ್ನು ಜನರಿಗೆ ಪೂರೈಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭ ಉಪ ಯೋಜನೆ ವ್ಯವಸ್ಥಾಪಕ ಅಣ್ಣಯ್ಯಪ್ಪ, ಡಾ.ರಾಜು, ಜಗದೀಶ ಫಾರಟ್, ಜಲ ನಿರ್ಮಲ ಯೋಜನೆಯ ಸಂಯೋಜಕ ಶರಣಪ್ಪ ಕೋರಿ ಮಾತನಾಡಿದರು.
ಸಭೆಯ ಅಧ್ಯಕ್ಷತೆ ಗ್ರಾ.ಪಂ. ಅಧ್ಯಕ್ಷ ಬಿ.ಮರಿಯಪ್ಪ ನಾಯಕ ವಹಿಸಿದ್ದರು.
ಗುರುನಾಥ ರೆಡ್ಡಿ, ಕಟ್ಟಾಚಾರಿ ಧಣಿ, ಗ್ರಾ.ಪಂ. ಸದಸ್ಯರಾದ ಮಲ್ಲಿಕಾರ್ಜುನ, ಬಿ.ಶಾಂತರೆಡ್ಡಿ, ಶೇಖರಪ್ಪ ಸಾಹು, ಅಂಗನವಾಡಿ ಶಿಕ್ಷಕರು, ಸಾಕ್ಷರತಾ ಪ್ರೇರಕರು, ಶಾಲಾ ಮುಖ್ಯೋಪಾಧ್ಯಾಯರು ಇದ್ದರು.
28ರಂದು ವಿಜ್ಞಾನ ದಿನಾಚರಣೆ
ರಾಯಚೂರು: ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ ಫೆ. 28ರಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 10.30ಕ್ಕೆ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ನಡೆಯುವ ದಿನಾಚರಣೆಯನ್ನು ಕೃಷಿ ವಿವಿ ಸಹ ಸಂಶೋಧನಾ ನಿರ್ದೇಶಕ ಡಾ. ಐ.ಶಂಕರಗೌಡ ಉದ್ಘಾಟಿಸಲಿದ್ದಾರೆ. ಡಿಡಿಪಿಐ ರಾಮಾಂಜನೇಯ ಅಧ್ಯಕ್ಷತೆ ವಹಿಸುವರು. ಶಕ್ತಿನಗರದ ಆರ್‌ಟಿಪಿಎಸ್‌ನ ಇಡಿ ವೇಣುಗೋಪಾಲ ಸಾಧಕರಿಗೆ ಸನ್ಮಾನಿಸಲಿದ್ದಾರೆ.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬಿಇಒ ಮಲ್ಲಿಕಾರ್ಜುನ, ಎಸ್‌ಆರ್‌ಪಿಎಸ್ ಕಾಲೇಜಿನ ಪ್ರಾಚಾರ್ಯ ಚಂದ್ರಕಾಂತ್, ಪ್ರೊ. ಪಿ.ಎಚ್.ನರಹಟ್ಟಿ ಪಾಲ್ಗೊಳ್ಳಲಿದ್ದಾರೆಂದು ಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ಸದಸ್ಯ ಕಾರ್ಯದರ್ಶಿ ಪ್ರೊ. ಸಿ.ಡಿ. ಪಾಟೀಲ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement