ಕೃಷಿ ಅಧಿಕಾರಿ ಮನೆ ಮೇಲೆ 'ಲೋಕಾ' ದಾಳಿ
ರಾಯಚೂರು: ನಗರದಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತರು ಕಾರ್ಯಾಚರಣೆ ನಡೆಸಿದ್ದು, ಇಲ್ಲಿನ ಜವಾಹರನಗರ ಬಡಾವಣೆಯ ನಿವಾಸಿ ಕೃಷಿ ಇಲಾಖೆಯ ಅಧಿಕಾರಿ ಚನ್ನಮಲ್ಲಪ್ಪ ಮನೆ ಮೇಲೆ ದಾಳಿ ನಡೆಸಿದ ಲೋಕಾಯುಕ್ತರು ಮನೆಯಲ್ಲಿ ಪರಿಶೀಲನೆ ನಡೆಸಿದರು.
ಅಧಿಕಾರಿ ಚನ್ನಮಲ್ಲಪ್ಪ ಅವರ ಬ್ಯಾಂಕ್ ಖಾತೆ, ಸೇರಿ ಆಸ್ತಿಗೆ ಸಂಬಂಧಿಸಿದ ವಿವಿಧ ಕಡತಗಳು ಸೇರಿದಂತೆ ದಾಖಲೆಗಳ ಪರಿಶೀಲನೆ ನಡೆಸಿದರು. ಲೋಕಾಯುಕ್ತ ಇನ್ಸ್ಪೆಕ್ಟರ್ ಲಿಂಗಪ್ಪ ನೇತೃತ್ವದಲ್ಲಿ ತಪಾಸಣೆ ಕಾರ್ಯ ನಡೆಸಲಾಯಿತು. ಇದೇ ವೇಳೆ ಚನ್ನಮಲ್ಲಪ್ಪ ಅವರ ಬಾಗಲಕೋಟೆ ಜಿಲ್ಲೆಯ ಇಳಕಲ್ನ ಮನೆ ಮೇಲೂ ದಾಳಿ ನಡೆಸಲಾಗಿದೆ ಎಂದು ಗೊತ್ತಾಗಿದ್ದು, ಅಲ್ಲಿಯೂ ರಾಯಚೂರು ಲೋಕಾಯುಕ್ತ ಎಸ್ಪಿ ಚಿಪ್ಪಾರ ನೇತೃತ್ವದಲ್ಲಿ ಪರಿಶೀಲನೆ ಕಾರ್ಯ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಗರದ ಕೃಷಿ ಇಲಾಖೆಯ ಸ್ಥಾನಿಕ ಕೃಷಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಚನ್ನಮಲ್ಲಪ್ಪ ಅವರ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳು ಸರ್ಕಾರದ ಅನುದಾನದ ಬಳಕೆ ಮತ್ತು ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿ ದಾಖಲೆಗಳನ್ನು ಪರಿಶೀಲಿಸಿದರು.