ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಡತನ ಮೆಟ್ಟಿ ನಿಂತು 'ಚಿನ್ನ'ದಂಥ ಸಾಧನೆ

Lingaraj Badiger
Updated On : 27 Feb 2014, 10:33 am

ಸಿಂಧನೂರು: ಪಾಲಕರು ಅನಕ್ಷರಸ್ಥರು. ಒಂದೆಡೆ ಕಿತ್ತು ತಿನ್ನುವ ಬಡತನ. ಕೂಲಿ ಮಾಡಿಯೇ ಬದುಕು ನಡೆಸುವ ಅನಿವಾರ್ಯತೆ. ಕಲಿಕೆಯ ಮಧ್ಯೆಯೇ ಕುಟುಂಬದವರಿಗೆ ಗಾರೆ ಕೆಲಸ, ಬತ್ತದ ಕೊಯ್ಲು ಕಾರ್ಯದಲ್ಲಿ ನೆರವಾಗಬೇಕು. ಇಂಥ ಬಡತನದ ಎಲ್ಲ ಸಂಕಷ್ಟಗಳನ್ನೂ ಮೀರಿ ಸಾಧನೆ ಮಾಡಬೇಕೆಂಬ ಛಲ. ಅಂಥ ಛಲವೇ ಇಂದು ಈ ಯುವಕನಿಗೆ ಸ್ನಾತಕೋತ್ತರ ಪದವಿಯಲ್ಲಿ 7 ಚಿನ್ನದ ಪದಕ ತಂದಿದೆ.
ಸಿಂಧನೂರು ತಾಲೂಕಿನ ಕುಗ್ರಾಮ 3ನೇ ಮೈಲ್ ಕ್ಯಾಂಪಿನ ಸಾಧಕನ ಯಶೋಗಾಥೆಯಿದು. ಸಿಂಧನೂರು-ಕುಷ್ಟಗಿ ರಸ್ತೆಗೆ ಹೊಂದಿಕೊಂಡಿರುವ 3ನೇ ಮೈಲ್ ಕ್ಯಾಂಪಿನಲ್ಲಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಹುಸೇನಸಾಬ್ ಚಂದಾಬೀ ದಂಪತಿ ಪುತ್ರ ಹುಸೇನ್ ಬಾಷಾ ಈ ಸಾಧನೆ ಮಾಡಿದಾತ.
ಹುಸೇನ್ ಬಾಷಾ ಅವರು 2012-13ನೇ ಸಾಲಿನ ಎಂಎಸ್ಸಿ ಗಣಿತದಲ್ಲಿ ಗುಲ್ಬರ್ಗ ವಿವಿಯಿಂದ ಸ್ನಾತಕೋತ್ತರ ಪದವಿಯಲ್ಲಿ ಶೇ.92.29ರಷ್ಟು ಅಂಕ ಗಳಿಸಿ ಗಣಿತ ವಿಭಾಗದಲ್ಲಿ ಮೀಸಲಿದ್ದ ಎಲ್ಲ 7 ಚಿನ್ನದ ಪದಕ ಬಾಚಿಕೊಂಡು ಸಾಧನೆ ಮೆರೆದಿದ್ದಾರೆ.
ಕಠಿಣ ಪರಿಶ್ರಮ, ಓದಿನಲ್ಲಿದ್ದ ಶ್ರದ್ಧೆ: ಮೂಲತಃ ಹುಸೇನ್ ಬಾಷಾ ಅವರ ತಂದೆ ಲಿಂಗಸ್ಗೂರು ತಾಲೂಕಿನ ಮುದಗಲ್ ಮೂಲದವರು. ಹೊಟ್ಟೆ ಹೊರೆಯಲು ಕೂಲಿ ಆಶ್ರಯಿಸಿ ನೀರಾವರಿ ಪ್ರದೇಶ ಸಿಂಧನೂರು ತಾಲೂಕಿನ 3ನೇ ಮೈಲ್ ಕ್ಯಾಂಪಿಗೆ ವಲಸೆ ಬಂದರು. ಇಂಥ ಸಂಕಷ್ಟದಲ್ಲಿಯೇ ಹುಟ್ಟಿ ಬೆಳೆದ ಹುಸೇನ್ ಬಾಷಾ ಅವರಿಗೆ ಬಡತನ ಎಂದಿಗೂ ಶಾಪ ಎನಿಸಲಿಲ್ಲ. ಬದಲಿಗೆ ಅವರು ಅದನ್ನೇ ಸವಾಲಾಗಿ ಸ್ವೀಕರಿಸಿದರು.
ಕಠಿಣ ಪರಿಶ್ರಮ, ಓದಿನಲ್ಲಿದ್ದ ಶ್ರದ್ಧೆ, ಸ್ವಾಭಿಮಾನದ ದುಡಿಮೆಗಳಿಂದಾಗಿಯೇ ಸಾಧನೆ ಮೆಟ್ಟಿಲು ಏರುತ್ತಲೇ ಸಾಗಿದರು. 1ರಿಂದ 7ನೇ ತರಗತಿವರೆಗೆ ಸಿಪಿಎಸ್ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಹುಸೇನ್ ಬಾಷಾ, ಆನಂತರ ಎಸ್ಸೆಸ್ಸೆಲ್ಸಿ ವರೆಗೆ ನಗರದ ಆರ್.ಜಿ.ಎಂ. ಶಾಲೆಯಲ್ಲಿ ಕಲಿತರು.
ಪಿಯುಸಿಯಿಂದ ಪದವಿಯವರೆಗೆ ಸಿಂಧನೂರಿನ ಸರ್ಕಾರಿ ಮಹಾವಿದ್ಯಾಲಯದಲ್ಲಿಯೇ ವ್ಯಾಸಂಗ ಮಾಡಿ, ಸ್ನಾತಕೋತ್ತರ ಪದವಿಗೆ ಗುಲ್ಬರ್ಗಕ್ಕೆ ಹೋದ ನಂತರ ಅವರ ಸಾಧನೆಗೆ ಅವಕಾಶ ದೊರೆಯಿತು. ನಿರಂತರ ಹಾಗೂ ಕಠಿಣ ಅಧ್ಯಯನ ಅವರಿಗೆ ಎಂಎಸ್ಸಿ ಗಣಿತ ವಿಷಯದಲ್ಲಿ 7 ಚಿನ್ನದ ಪದಕ ತಂದುಕೊಟ್ಟಿದೆ.
ಅವರ ಪಾಲಕರಿಗೆ ಮಗನ ಸಾಧನೆ ಎಂಥದ್ದು ಎಂದೂ ಗೊತ್ತಾಗದಷ್ಟು ಅಮಾಯಕರು. 8ನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗೆ ಬಿಸಿಎಂ ಹಾಸ್ಟೆಲ್ ನಲ್ಲಿಯೇ ವಾಸ. ವಸತಿ ನಿಲಯದ ಋಣ ಎಂದಿಗೂ ತೀರಿಸಲಾಗದು ಎಂಬ ಕೃತಜ್ಞತಾಭಾವ ಅವರದ್ದು.
ಸೇವೆ: ಪದವಿ ವ್ಯಾಸಂಗದ ವೇಳೆಯೇ ಸಿಂಧನೂರಿನ ಹಂಪಮ್ಮ ಬಾದರ್ಲಿ ಪ್ರೌಢಶಾಲೆಗೆ ಅರೆಕಾಲಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ಬಟ್ಟೆ ಹಾಗೂ ಪುಸ್ತಕಗಳಿಗೆ ಹಣ ಹೊಂದಿಸಿಕೊಂಡಿದ್ದು, ಹಾಗೆಯೇ ಬತ್ತದ ಕೊಯ್ಲಿನ ಕಾಲದಲ್ಲಿ ಕಾಲೇಜು ಅವಧಿ ನಂತರ ಪಾಲಕರೊಂದಿಗೆ ಗದ್ದೆಗಳಿಗೆ ದುಡಿಯಲು ತೆರಳಿ ಸಹೋದರರ ಓದಿಗೂ ಕೊಂಚಮಟ್ಟಿಗೆ ನೆರವಾಗಿದ್ದೂ ಸಾಧನೆಯೇ.
ಬಡತನವಿದ್ದರೂ ಇವರ ಕುಟುಂಬದಲ್ಲಿ ಶೈಕ್ಷಣಿಕ ಶ್ರೀಮಂತಿಕೆಗೇನೂ ಕೊರತೆಯಿಲ್ಲ. ಇವರ ಸಹೋದರ ಮಹ್ಮದ್ ಹನೀಫ್, ರಜ್ಜಬ್ ಅಲಿ ಅವರು ಗುಲ್ಬರ್ಗ ವಿವಿಯಲ್ಲಿ ಕ್ರಮವಾಗಿ ಎಂಕಾಂ ದ್ವಿತೀಯ ಹಾಗೂ ಎಂಎ ಅರ್ಥಶಾಸ್ತ್ರ ವಿಭಾಗದ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಇವರೂ ಸಹ ಬಿಸಿಎಂ ಹಾಸ್ಟೆಲ್ ಆಸರೆಯೊದಗಿಸಿದೆ. ಸದ್ಯ ಗುಲ್ಬರ್ಗದ ಎಸ್ಬಿ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಹುಸೇನ್ ಬಾಷಾ ಪಿಎಚ್.ಡಿ ಪದವಿ ಸಂಶೋಧನೆಗೆ ಮುಂದಾಗಿದ್ದಾರೆ. ತಮ್ಮ ಸಾಧನೆ ಕುರಿತು ಪ್ರತಿಕ್ರಿಯಿಸಿರುವ ಅವರು ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಮೂಲಕ ಅವರ ಓದಿಗೆ ನೆರವಾಗಿ ಸಮಾಜ ತಮಗೆ ತೋರಿಸಿದ ಕಾಳಜಿಗೆ ಪ್ರತಿಯಾಗಿ ಋಣ ತೀರಿಸುವ ಕಾರ್ಯ ಮಾಡುವುದಾಗಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement