ಬಡವರಿಗೆ ಸಾಮೂಹಿಕ ವಿವಾಹ ಅನುಕೂಲ: ಶಾಸಕ
ಮುದಗಲ್: ಪ್ರತಿ ಗ್ರಾಮದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾಮೂಹಿಕ ವಿವಾಹಗಳು ಜರುಗಿದರೆ ಕಡುಬಡವರಿಗೆ ಅನುಕೂಲವಾಗಲಿದೆ ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.
ಸಮೀಪದ ಕನ್ನಾಪುರಹಟ್ಟಿಯಲ್ಲಿ ಪರಮಾನಂದ ಹಾಗೂ ಅಮೋಘ ಸಿದ್ದೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಧುನಿಕ ಯುಗದಲ್ಲಿನ ವರದಕ್ಷಿಣೆ ಎಂಬ ಪಿಡಗನ್ನು ಹೋಗಲಾಡಿಸಲು ಸಾಮೂಹಿಕ ವಿವಾಹ ಉತ್ತಮ ಅಸ್ತ್ರವಾಗಿದ್ದು ವಧು- ವರರ ಮನೆಯಲ್ಲಿ ಆರತಕ್ಷತೆ ಹೆಸರಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಅಧಿಕ ಪ್ರಮಾಣದಲ್ಲಿ ಹಣ ಖರ್ಚು ಮಾಡಿಕೊಂಡಲ್ಲಿ ಸಾಮೂಹಿಕ ವಿವಾಹಕ್ಕೆ ಅರ್ಥ ಬರುವುದಿಲ್ಲ ಎಂದರು. ನಂತರ ಪತಿ-ಪತ್ನಿಯರಿಗೆ ಚಿಕ್ಕ ಮತ್ತು ಚೊಕ್ಕ ಸಂಸಾರಕ್ಕೆ ಆದ್ಯತೆ ನೀಡುವಂತೆ ಮನವಿ ಮಾಡಿದರು. ಇದಕ್ಕೂ ಮುಂಚೆ ವಿಎಸ್ಎಸ್ ಬ್ಯಾಂಕಿನ ಅಧ್ಯಕ್ಷ ವೀರನಗೌಡ ಲಕ್ಕಿಹಾಳ, ಸಣ್ಣ ಸಿದ್ದಯ್ಯ ಗುರುವಿನ ಹಾಗೂ ಸಿದ್ದು ಬಂಡಿ ಮಾತನಾಡಿದರು. 10 ಜೋಡಿ ನವ ವಧು-ವರರು ಹಸೆಮಣೆ ಏರಿದರು. ಹನುಮಂತಪ್ಪ ಕಂದಗಲ್ಲ, ಕಂಟೆಪ್ಪಗೌಡ, ವೆಂಕನಗೌಡ ಐದನಾಳ, ಶಿವಕುಮಾರ, ಹನುಮಂತ ರಾಠೋಡ, ಗ್ರಾಪಂ ಸದಸ್ಯರಾದ ಆದೇಶ, ಮಲ್ಲಣ್ಣ, ಮಲ್ಲನಗೌಡ ಬೊಮ್ಮನಾಳ ಇದ್ದರು.