ವಿದ್ಯಾರ್ಥಿ ಶವ ಪತ್ತೆ: ಕೊಲೆ ಶಂಕೆ
ರಾಯಚೂರು: ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ 2ನೇ ಸೆಮಿಸ್ಟರ್ ವಿದ್ಯಾರ್ಥಿಯೊಬ್ಬನ ಶವ ನಗರದ ಹೊರವಲಯದ ಮಲಿಯಾಬಾದ್ ಗ್ರಾಮದ ಬಳಿಯ ಬಾವಿಯಲ್ಲಿ ಪತ್ತೆಯಾಗಿದ್ದು, ಆತನ ಸಾವಿನ ಬಗ್ಗೆ ಕುಟುಂಬದವರು ಶಂಕೆ ವ್ಯಕ್ತಪಡಿಸಿದ್ದಾರೆ.
ಮೃತ ವಿದ್ಯಾರ್ಥಿಯನ್ನು ಶಶಿಕಾಂತ(25) ಎಂದು ಗುರುತಿಸಲಾಗಿದೆ. ಮೃತ ವಿದ್ಯಾರ್ಥಿಯು ಮೂಲತಃ ಉಡುಪಿ ಜಿಲ್ಲೆ ಕುಂಭಾಶಿ ಗ್ರಾಮದವನಾಗಿದ್ದು, ನಗರದ ಮನೆಯೊಂದರಲ್ಲಿ ಪೇಯಿಂಗ್ ಗೆಸ್ಟ್ ಆಗಿದ್ದರು. ಕಳೆದ ಎರಡು ದಿನಗಳಿಂದ ಈತ ಮನೆಗೆ ಮರಳಿರಲಿಲ್ಲ ಎಂದು ಹೇಳಲಾಗಿದೆ.
ವಿದ್ಯಾರ್ಥಿಯ ಶವ ಬುಧವಾರ ಬಾವಿಯಲ್ಲಿ ಪತ್ತೆಯಾಗಿದೆ. ಕಾಲೇಜಿನಲ್ಲಿ ನಾಲ್ಕೈದು ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಉಪನ್ಯಾಸಕಿಯೊಬ್ಬರು ಶಶಿಕಾಂತ್ಗೆ ಕಿರುಕುಳ ನೀಡುತ್ತಿದ್ದರು. ಅದರಿಂದ ಆತ ಬೇಸರಗೊಂಡಿದ್ದ. ಈ ಬಗ್ಗೆ ಕಾಲೇಜಿನ ಪ್ರಾಚಾರ್ಯರಿಗೆ ದೂರು ಸಹ ನೀಡಲಾಗಿತ್ತು ಎಂದು ಮೃತನ ಪೋಷಕರು ದೂರಿದ್ದಾರೆ.
ಪ್ರಾಚಾರ್ಯರು ವಿದ್ಯಾರ್ಥಿಯ ಸಮಸ್ಯೆ ಪರಿಹರಿಸುವಲ್ಲಿ ನಿರ್ಲಕ್ಷ್ಯ ತಾಳಿದ್ದು ಈ ಘಟನೆಗೆ ಕಾರಣ ಎಂದು ಆರೋಪಿಸಿರುವ ಕುಟುಂಬದವರು ಸಾವಿನ ಹಿಂದೆ ಷಡ್ಯಂತ್ರವಿದ್ದು, ಮುಳುಗುವಷ್ಟು ನೀರಿಲ್ಲದ ಬಾವಿಯಲ್ಲಿ ಶಶಿಕಾಂತ ಆತ್ಮಹತ್ಯೆ ಮಾಡಿಕೊಳ್ಳುವುದು ಅಸಾಧ್ಯ. ಮೃತನ ಬ್ಯಾಗ್, ಮೊಬೈಲ್ ಬೇರೆಡೆ ದೊರೆತಿದೆ. ಆತನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸುತ್ತಿದ್ದಾರೆ. ಈ ಕುರಿತು ತಾಲೂಕಿನ ಯರಗೇರಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ನಗರದ ರಿಮ್ಸ್ನಲ್ಲಿ ಗುರುವಾರ ಶವ ಪರೀಕ್ಷೆ ನಡೆಸಲಾಯಿತು. ಪೊಲೀಸರು ಮುಂದಿನ ತನಿಖೆ ನಡೆಸಿದ್ದಾರೆ.