ಕೃಷ್ಣಾ ಆಸ್ಪತ್ರೆಯಿಂದ ಉಚಿತ ಚಿಕಿತ್ಸೆ ಶಿಬಿರ
ಸಿಂಧನೂರು: ನಗರದ ಕೃಷ್ಣ ಆಸ್ಪತ್ರೆಯಿಂದ ಮಂಡಿನೋವು, ಕಾಲುನೋವು ಹಾಗೂ ಮೊಣಕಾಲು ನೋವಿನಿಂದ ಬಳಲುವ 40 ವರ್ಷ ಮೇಲ್ಪಟ್ಟವರಿಗೆ ಉಚಿತ ಚಿಕಿತ್ಸೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ನಗರ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ 200ಕ್ಕೂ ಅಧಿಕ ಜನ ತಜ್ಞ ಡಾ.ಪ್ರಸಾದ ಅವರಿಂದ ಉಚಿತ ಚಿಕಿತ್ಸೆ ಪಡೆದರು. ಮೊಣಕಾಲು ನೋವಿನಿಂದ ಬಳಲುತ್ತಿದ್ದ ಅನೇಕರು ವೈದ್ಯರಿಂದ ಸೂಕ್ತ ಸಲಹೆ ಪಡೆದರು. ಚೆನ್ನೈನಿಂದ ತಂದಿದ್ದ ವಿಶೇಷ ಯಂತ್ರದಿಂದ ವಿಶೇಷ ಯಂತ್ರದಿಂದ ರೋಗಿಗಳನ್ನು ತಪಾಸಣೆ ನಡೆಸಲಾಯಿತು. ಇಂತಹ ಶಿಬಿರಗಳು ಆಗಾಗ ನಡೆಯುವುದರಿಂದ ಬಡವರಿಗೆ ಅನುಕೂಲ ಎಂದು ವೃದ್ಧರೊಬ್ಬರು ಅಭಿಪ್ರಾಯಪಟ್ಟರು.
ಪಿಡಿಒ ಅಮಾನತು
ರಾಯಚೂರು: ದೇವದುರ್ಗ ತಾಲೂಕಿನ ಪಲಕನಮರಡಿ ಗ್ರಾಮದ ಗ್ರಾಪಂ ಅಭಿವೃದ್ಧಿ ಅಧಿಕಾರಿಯನ್ನು ಆಶ್ರಯ ವಸತಿ ಯೋಜನೆಯಡಿಯ ಅಕ್ರಮಕ್ಕೆ ಸಂಬಂಧಿಸಿ ಅಮಾನತುಗೊಳಿಸಲಾಗಿದೆ. ಗ್ರಾಪಂ ಪಿಡಿಐ ನರಸಪ್ಪ ಎಂಬುವವರು ಆಶ್ರಯ ಮನೆಗಳ ಹಂಚಿಕೆಯಲ್ಲಿ ಎಸಗಿದ ಲೋಪದ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಿ ಜಿಪಂ ಸಿಇಒ ವಿಜಯ ಜೋತ್ಸ್ನಾ ಆದೇಶ ಹೊರಡಿಸಿದ್ದಾರೆಂದು ಜಿಪಂ ಮೂಲಗಳು ತಿಳಿಸಿವೆ.