ನಗರಸಭೆ 46.25 ಲಕ್ಷ ಬಜೆಟ್
ಕ.ಪ್ರ. ವಾರ್ತೆ, ರಾಯಚೂರು, ಫೆ.28
ನಗರದ ಜನತೆಗೆ ನಿರಂತರ ಕುಡಿಯುವ ನೀರು ಒದಗಿಸಲು 67 ಕೋಟಿ ಅನುದಾನ ಮಂಜೂರು, ಅದರಲ್ಲಿ ನಗರಸಭೆಯ ವಂತಿಕೆಯ ಪಾಲು 10 ಕೋಟಿ, ಈ ಮೊತ್ತ ಎಸ್ಎಫ್ಸಿ ಅನುದಾನದಲ್ಲಿ ಪಾವತಿಸಲು ನಿರ್ಧಾರ. 260ಲಕ್ಷ ತ್ಯಾಜ್ಯ ನಿರ್ವಹಣೆ ಮತ್ತು ನೈರ್ಮಲ್ಯೀಕರಣಕ್ಕೆ ಮೀಸಲು ಸೇರಿ ಒಟ್ಟು 46.25ಲಕ್ಷ ರು. ಉಳಿತಾಯದ ಆಯವ್ಯಯವನ್ನು ನಗರಸಭೆಯಲ್ಲಿ ಮಂಡಿಸಲಾಯಿತು.
ನಗರದ ಸಾರ್ವಜನಿಕ ಉದ್ಯಾನವನದಲ್ಲಿ ಶುಕ್ರವಾರ ಕರೆದಿದ್ದ ಬಜೆಟ್ ಮಂಡನೆಯ ಸಭೆಯಲ್ಲಿ ನಗರಸಭೆ ಪ್ರಭಾರಿ ಅಧ್ಯಕ್ಷೆ ಪದ್ಮಾವತಿ ಅವರ ಅನುಮತಿ ಮೇರೆಗೆ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ನರಸಪ್ಪ ಯಕ್ಲಾಸಪುರ 2014-15ನೇ ಸಾಲಿನ ಬಜೆಟ್ ಮಂಡಿಸಿದರು.
ನಗರಸಭೆಯಿಂದ ನಿರೀಕ್ಷಿತ ಆದಾಯ 2,150.75 ಲಕ್ಷ ಹಾಗೂ ಸರ್ಕಾರದಿಂದ ದೊರೆಯಬಹುದಾದ ಅನುದಾನ 4,749 ಲಕ್ಷ ಸೇರಿ ಒಟ್ಟು 6,899.75 ಲಕ್ಷಗಳಲ್ಲಿ 6853.50 ಲಕ್ಷ ವಿವಿಧ ಕಾರ್ಯಗಳಿಗೆ ವೆಚ್ಚ ಮಾಡಲು ಯೋಜಿಸುವ ಮೂಲಕ 46.25ಲಕ್ಷ ಉಳಿತಾಯಕ್ಕೆ ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ನಿರಂತರ ಕುಡಿಯುವ ನೀರು ಪೂರೈಕೆಗೆ 67 ಕೋಟಿ: ನಗರದಲ್ಲಿ ಪ್ರತಿ ವರ್ಷ ಬೇಸಿಗೆ ಸೇರಿದಂತೆ ವರ್ಷವಿಡೀ ನೀರಿನ ಅಭಾವವಿರುತ್ತದೆ. ಕೃಷ್ಣಾ ಮತ್ತು ತುಂಗಭದ್ರಾ ನದಿಗಳು ಸಮೀಪದಲ್ಲಿದ್ದರೂ ನೀರಿನ ಅಭಾವ ನೀಗುತ್ತಿಲ್ಲ. ಈ ಹಿನ್ನೆಲೆಯಲ್ಲಿ 67ಕೋಟಿ ವೆಚ್ಚದ ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆಯ ಟೆಂಡರ್ ಕರೆದಿದ್ದು, ನಗರಸಭೆಯಿಂದ 10ಕೋಟಿ ವಂತಿಕೆ ನೀಡಬೇಕಿದೆ ಎಂದು ಹೇಳಿದರು.
ಒಳಚರಂಡಿ ಕಾಮಗಾರಿಗೆ 31.60 ಕೋಟಿ: ಘನತ್ಯಾಜ್ಯ ನಿರ್ವಹಣೆ ಹಾಗೂ ನೈರ್ಮಲ್ಯೀಕರಣ ಕಾರ್ಯಕ್ಕೆ 260ಲಕ್ಷ ಮೀಸಲಿಡಲಾಗಿದೆ. ಯಕ್ಲಾಸಪುರ ಹೊರವಲಯದ ಒಳಚರಂಡಿ ಬಾಕಿ ಕಾಮಗಾರಿಗೆ 34.94ಕೋಟಿ ಹಾಗೂ ಹೊಸೂರು ವಲಯದ ಒಳಚರಂಡಿ ಕಾಮಗಾರಿ 31.60ಕೋಟಿ ಅಂದಾಜು ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದರು.
ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಕ್ರಮ: ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವ ಸಲುವಾಗಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ನಗರದಲ್ಲಿ 20 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಕಟ್ಟಡ ಮತ್ತಿತರೆ ಆಸ್ತಿಯನ್ನು ನಗರಸಭೆಯ ದಾಖಲೆಗಳಲ್ಲಿ ನೋಂದಾಯಿಸಿ ಹೆಚ್ಚುವರಿಯಾಗಿ 1ಕೋಟಿ ಆಸ್ತಿ ತೆರಿಗೆ ಸಂಗ್ರಹಕ್ಕೆ ಯೋಜಿಸಲಾಗಿದೆ ಎಂದು ಹೇಳಿದರು.
ಮಹಿಳಾ ಶೌಚಾಲಯ ನಿರ್ಮಾಣಕ್ಕೆ 100 ಲಕ್ಷ: ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಕ್ಕೆ 150 ಲಕ್ಷ, ಶೌಚಾಲಯ ಅದರಲ್ಲೂ ವಿಶೇಷವಾಗಿ ಮಹಿಳಾ ಶೌಚಾಲಯ ನಿರ್ಮಾಣಕ್ಕೆ 100ಲಕ್ಷ ರು. ನಿಗದಿ, ತೀನ್ ಕಂದೀಲ್ ವೃತ್ತದಲ್ಲಿನ ಕಲ್ಲಾನೆ ರಕ್ಷಣೆಗೆ 15ಲಕ್ಷ, ಮೆಕ್ಕಾ ದರವಾಜಾ ಸ್ಮಾರಕದ ಸ್ಥಳದಲ್ಲಿ ಸೋಲಾರ್ ವಿದ್ಯುತ್ ದೀಪ ಅಳವಡಿಕೆ ಹಾಗೂ ರಕ್ಷಣೆಗೆ 35 ಲಕ್ಷ ನಿಗದಿ ಮಾಡಲಾಗಿದೆ ಎಂದು ಹೇಳಿದರು.
ನಗರದ ಮುಖ್ಯ ರಸ್ತೆಯ ಡಾಂಬರೀಕರಣ ಹಾಗೂ ರಸ್ತೆ ಬದಿ ಕಾಲುವೆಗಳ ನಿರ್ಮಾಣಕ್ಕಾಗಿ 1,300 ಲಕ್ಷ ಗಳನ್ನು ಬಜೆಟ್ನಲ್ಲಿ ಮೀಸಲಿಡಲಾಗಿದೆ ಎಂದು ಹೇಳಿದರು.
ನಂತರ ನಡೆದ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ನಗರಸಭೆಯ ಸದಸ್ಯರಾದ ಮಹಾಲಿಂಗ, ಮಾರೆಪ್ಪ, ದೊಡ್ಡಮಲ್ಲೇಶಪ್ಪ, ಮಹೆಬೂಬ್ ಮತ್ತಿತರರು ಬಜೆಟ್ನಲ್ಲಿ ಇನ್ನೂ ಅನೇಕ ಅಂಶಗಳನ್ನು ಸೇರಿಸಬಹುದಾಗಿತ್ತು. ನಗರಸಭೆಗೆ ಆದಾಯ ಹೆಚ್ಚಳ ಮಾಡುವಂಥ ಕ್ರಮಗಳ ಬಗ್ಗೆ ಗಮನಹರಿಸಬೇಕೆಂದು ಸಲಹೆ ನೀಡಿದರು.
ಆದಾಯ ಹೆಚ್ಚಳಕ್ಕೆ ಆಗ್ರಹ:ವಾಣಿಜ್ಯ ಬಳಕೆ ಕಟ್ಟಡಗಳ ತೆರಿಗೆ ಮತ್ತು ನಗರಸಭೆಯ ಸಂಕೀರ್ಣಗಳ ಬಾಡಿಗೆ ಹೆಚ್ಚಳ ಮೂಲಕ ಆದಾಯ ಹೆಚ್ಚಿಸಬಹುದಾಗಿದೆ. ಸಂಪನ್ಮೂಲಗಳ ಗುರುತಿಸುವಿಕೆ ಮತ್ತು ಆದಾಯದ ಹೆಚ್ಚಳದತ್ತ ಪೌರಾಯುಕ್ತರು ಗಮನಹರಿಸಿ ಬಜೆಟ್ನಲ್ಲಿ ಸೇರ್ಪಡೆಗೊಳಿಸುವಂತೆ ಒತ್ತಾಯಿಸಿದರು.
2 ಕೋಟಿ ಉಳಿತಾಯ ಬಜೆಟ್ ಸಾಧ್ಯವಿತ್ತು: ನಗರಸಭೆಯ ಪ್ರಭಾರಿ ಅಧ್ಯಕ್ಷರು ಮಂಡಿಸಿರುವ 46.25 ಲಕ್ಷ ಉಳಿತಾಯ ಬಜೆಟ್ ಹೇಳಿಕೊಳ್ಳುವಂಥ ಸಾಧನೆಯಲ್ಲ. ನಗರದಲ್ಲಿ ಶಿಕ್ಷಣ ಸಂಸ್ಥೆ ಸೇರಿ ಅನೇಕರಿಗೆ ನೀಡಿರುವ ರಿಯಾಯಿತಿ ರದ್ದುಗೊಳಿಸಿ ಸಂಗ್ರಹಕ್ಕೆ ತೊಡಗಿದಲ್ಲಿ 2 ಕೋಟಿ ಉಳಿತಾಯ ಬಜೆಟ್ ಮಂಡಿಸಬಹುದಿತ್ತು ಎಂದು ಸಲಹೆ ನೀಡಿದರು.
ನಂತರ ಮಾತನಾಡಿದ ನಗರಸಭೆಯ ಹಿರಿಯ ಸದಸ್ಯ ಜಯಣ್ಣ, ಬಜೆಟ್ ಆರ್ಥಿಕ ಸಮತೋಲನ ಕಾಪಾಡಿಕೊಳ್ಳುವ ಪ್ರಯತ್ನದಿಂದ ಕೂಡಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಿಡುವ ಶೇ. 22.75 ಅನುದಾನದ ಪೂರ್ಣ ಪ್ರಮಾಣದ ಬಳಕೆಯತ್ತ ಆಡಳಿತ ಗಮನಹರಿಸಬೇಕಿದೆ ಎಂದರು.
ಪೌರಾಯುಕ್ತರು ಬಜೆಟ್ನಲ್ಲಿರುವ ಅಂಶಗಳ ಸಮರ್ಪಕ ಅನುಷ್ಠಾನಕ್ಕೆ ಹೆಚ್ಚಿನ ಗಮನಹರಿಸಬೇಕು. ಆರ್ಥಿಕ ಸೋರಿಕೆ ತಡೆಗೆ ಬಿಗಿ ಕ್ರಮ ಅವಶ್ಯಕ. ಬೀದಿ ಬದಿ ವ್ಯಾಪಾರಸ್ಥರಿಗೆ ಬದುಕಿನ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟು ಸೂಚಿಸಿದಂತೆ ಅಂಥ ವರ್ತಕರನ್ನು ಗುರುತಿಸಿ ದಾಖಲೆ ಒದಗಿಸುವುದು ಅವಶ್ಯಕ. ಈ ನಿಟ್ಟಿನಲ್ಲಿ ಪರಿಸರ ಎಂಜಿನಿಯರ್ ನ್ಯಾಯಾಲಯದ ಆದೇಶ ಪಾಲಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಂತರ ಸರ್ವಸದಸ್ಯರೂ ಕೆಲ ಮಾರ್ಪಾಟುಗಳೊಂದಿಗೆ ನಗರಸಭೆಯ ಪ್ರಸಕ್ತ ಬಜೆಟ್ಗೆ ಒಪ್ಪಿಗೆ ಸೂಚಿಸಿದರು.
ಸಭೆಯಲ್ಲಿ ನಗರಸಭೆ ಪ್ರಭಾರಿ ಅಧ್ಯಕ್ಷ ಪದ್ಮಾವತಿ, ಪೌರಾಯುಕ್ತ ಬಸಪ್ಪ ಇದ್ದರು. ಸದಸ್ಯರು, ಅಧಿಕಾರಿಗಳು ಪಾಲ್ಗೊಂಡಿದ್ದರು.