ಲಿಂಗಸ್ಗೂರಲ್ಲಿ ಚರಂಡಿ ನೀರು ರಸ್ತೆಗೆ; ನಾಗರಿಕರ ಪರದಾಟ
ಲಿಂಗಸ್ಗೂರು: ಪಟ್ಟಣದ ಬಸ್ ನಿಲ್ದಾಣ ವೃತ್ತದ ಬಳಿ ರಾಜ್ಯ ಹೆದ್ದಾರಿ ಬಳಿಯ ಮುಖ್ಯ ಕಾಲುವೆಯಲ್ಲಿ ಹೂಳು ತುಂಬಿ ಕಲುಷಿತ ನೀರು ರಸ್ತೆ ಮೇಲೆ ಹರಿದ ಪರಿಣಾಮ ನಾಗರಿಕರು ಪರದಾಡುವಂತಾಗಿದೆ. ಲೋಕೋಪಯೋಗಿ ಇಲಾಖೆಯಿಂದ ಶ್ರೀರಂಗಪಟ್ಟಣ-ಜೇವರ್ಗಿ(ಎಸ್ಎಚ್- 19) ಹಾಗೂ ರಾಯಚೂರು-ಬಾಚಿ(ಎಸ್ಎಚ್- 20) ರಸ್ತೆ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಇದಕ್ಕೂ ಮುನ್ನ ಕೆಲ ವರ್ಷಗಳ ಹಿಂದೆ ರಾಯಚೂರು-ಬಾಚಿ ಹೆದ್ದಾರಿ ಎರಡೂ ಬದಿ ಚರಂಡಿ ನಿರ್ಮಿಸಲಾಗಿದೆ. ಕೆಲ ಖಾಸಗಿ ಹೋಟೆಲ್, ಕಿರಾಣಿ, ಫುಟ್ಪಾತ್ ವ್ಯಾಪಾರಿಗಳು ಚರಂಡಿಯಲ್ಲಿ ತ್ಯಾಜ್ಯ ಹಾಕುವ ಪ್ರಯುಕ್ತ ಚರಂಡಿಯಲ್ಲಿ ಹೂಳು ತುಂಬಿದೆ. ದಿನನಿತ್ಯದ ಬಳಕೆ ನೀರಿನ ಜೊತೆಗೆ ಮಳೆ ಬಂದರೆ ಕಾಲುವೆಯಲ್ಲಿ ಕಲುಷಿತ ನೀರು ಸರಾಗವಾಗಿ ಹರಿಯದೆ ರಸ್ತೆ ಮೇಲೆ ಹರಿದು ಕೆಸರು ಗದ್ದೆಯಂತಾಗುತ್ತದೆ. ಪುರಸಭೆ ಆಡಳಿತ ಮಂಡಳಿ ಕೆಲವು ಬಾರಿ ಬಸ್ ನಿಲ್ದಾಣ ವೃತ್ತದ ಬಳಿ ಮಾತ್ರ ಸ್ವಚ್ಛಗೊಳಿಸುತ್ತಾರೆ ವಿನಃ ಬೇರೆಡೆ ಸ್ವಚ್ಛಗೊಳಿಸುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ಕೆಲವೆಡೆ ಹಳೆಯ ಕಾಲುವೆ ಮೇಲೆ ಹಾಕಿದ ಛಾವಣಿ ಮುರಿದು ತಂತಿ ತೇಲಿವೆ. ಇದರಿಂದ ಶಾಲಾ ಮಕ್ಕಳು, ಮಹಿಳೆಯರು, ನಾಗರಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಚರಂಡಿ ಸ್ವಚ್ಛಗೊಳಿಸುವತ್ತ ಗಮನಹರಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.