ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಒತ್ತಾಯ
ರಾಯಚೂರು: ಬಿಎಸ್ಸೆನ್ನೆಲ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರ ಬೇಡಿಕೆ ಈಡೇರಿಸುವಂತೆ ನವರತ್ನ ಯುವಕ ಸಂಘ ಒತ್ತಾಯಿಸಿದೆ. ಇತ್ತೀಚೆಗೆ ಬಿಎಸ್ಸೆನ್ನೆಲ್ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಪ್ರಕಟಣೆ ನೀಡಿರುವ ಸಂಘದ ಅಧ್ಯಕ್ಷ ಎಸ್.ಹುಲಿಗೆಪ್ಪ, 8 ಜನ ಗುತ್ತಿಗೆ ಕಾರ್ಮಿಕರನ್ನು ವಿನಾಕಾರಣ ಕೆಲಸದಿಂದ ವಜಾ ಮಾಡಿದ್ದು ಕೂಡಲೇ ಅವರನ್ನು ಪುನಾ ನೇಮಿಸಬೇಕು. ಬಾಕಿ ವೇತನ ಪಾವತಿಸಬೇಕು. ಪ್ರತಿ ತಿಂಗಳು 7ನೇ ತಾರೀಕಿನೊಳಗೆ ವೇತನ ಪಾವತಿಸಬೇಕು ಎಂದು ಆಗ್ರಹಿಸಿದ್ದಾರೆ. ಕಾರ್ಮಿಕರಿಗೆ ಬರಬೇಕಿರುವ ಬಾಕಿ ಭವಿಷ್ಯ ನಿಧಿಯನ್ನು ಕೂಡಲೇ ಪಾವತಿಸಬೇಕು. ಇಎಸ್ ಐ ಕಾರ್ಡುಗಳನ್ನು ಕಾರ್ಮಿಕರಿಗೆ ವಿತರಿಸಬೇಕು. ತುಟ್ಟಿಭತ್ಯೆ ಸೌಲಭ್ಯ ಒದಗಿಸಬೇಕು. ವಿನಾ ಕಾರಣ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಿದ ಮೇಲಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ.