ಕೋಮುವಾದದಿಂದ ಸಹಬಾಳ್ವೆಗೆ ಧಕ್ಕೆ
ಸಿಂಧನೂರು: ಕೋಮುವಾದದಿಂದ ಸಾಮಾನ್ಯ ಜನರ ಸಹಬಾಳ್ವೆಗೆ ಪೆಟ್ಟು ಉಂಟಾಗುತ್ತದೆ ಎಂದು ಎಸ್ಐಒದ ರಾಷ್ಟ್ರೀಯ ಅಧ್ಯಕ್ಷ ಅಶ್ಫಾಕ್ ಅಹ್ಮದ್ ವಿಷಾದಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಶಿಕ್ಷಣದಲ್ಲಿ ನೈತಿಕ ಮೌಲ್ಯಗಳು ವಿಜೃಂಭಿಸಬೇಕೇ ಹೊರತು ವಿಕೃತೀಕರಣ ಅಲ್ಲ. ವೈವಿಧ್ಯ ಭಾಷೆ, ಜನ, ಸಂಸ್ಕೃತಿ ಹಾಗೂ ಧರ್ಮಗಳಿಂದ ಕೂಡಿದ ಭಾರತದಲ್ಲಿ ಅನೇಕ ಆತಂಕಕಾರಿ ಘಟನೆಗಳು ನಡೆಯುತ್ತಿವೆ. ಇದರಿಂದ ದೇಶದ ಐಕ್ಯತೆ, ಭದ್ರತೆ ಹಾಗೂ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ದೇಶ ಕಟ್ಟುವ ಚಿಂತನೆ ಎಲ್ಲರ ಮನದಲ್ಲಿ ಬರಬೇಕು. ಹೃದಯ ಹೃದಯಗಳನ್ನು ಬೆಸೆಯಬೇಕೆಂದು ಹೇಳಿದರು.
ದೇಶದ ಒಳಿತಿಗಾಗಿ ಶ್ರಮಿಸಿ: ಹೊಸ ಆಲೋಚನೆ, ಕಲ್ಪನೆಯೊಂದಿಗೆ ಭವ್ಯ ಭಾರತ ಕಟ್ಟುವ ಕನಸನ್ನು ವಿದ್ಯಾರ್ಥಿ, ಯುವಜನರು ಕಾಣಬೇಕು. ಮಾನವೀಯತೆಯ ಚೌಕಟ್ಟಿನೊಳಗೆ ವಿಶಿಷ್ಟ ಕೊಡುಗೆ ನೀಡಿ ಕರ್ತವ್ಯಪರತೆ ಮೆರೆದಾಗ ದೇಶ ಸುಭಿಕ್ಷೆಯಲ್ಲಿ ನೆಲೆಸುತ್ತದೆ. ಐಕ್ಯತಾ ಮನೋಭಾವನೆಯೊಂದಿಗೆ ದೇಶದ ಒಳಿತಿಗಾಗಿ ದುಡಿಯಿರಿ ಎಂದು ಕರೆ ನೀಡಿದರು.
ನಿಲ್ಲದ ಡೊನೇಷನ್ ಹಾವಳಿ: ರಾಜ್ಯ ಘಟಕದ ಅಧ್ಯಕ್ಷ ತೌಸೀಫ್ ಅಹ್ಮದ್ ಮಡಿಕೇರಿ ಮಾತನಾಡಿ, ಡೊನೇಷನ್ ಹಾವಳಿಗೆ ತಡೆಗೆ 2007ರಲ್ಲಿ ಸರ್ಕಾರ ನಿಯಮಾವಳಿ ರೂಪಿಸಿದ್ದರೂ ಖಾಸಗಿ ಶಿಕ್ಷಣ ಸಂಸ್ಥೆಗಳು ಅವುಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿವೆ. ಶಾಲಾ- ಕಾಲೇಜ್ ಆರಂಭವಾಗುತ್ತಿದ್ದಂತೆಯೇ ಪ್ರವೇಶ ಶುಲ್ಕವನ್ನು ನೋಟಿಸ್ ಬೋರ್ಡ್ನ ಮೇಲೆ ನಮೂದಿಸಬೇಕು ಸೇರಿದಂತೆ ಹತ್ತು ಹಲವು ನಿಯಮಗಳಿವೆ. ಆದರೆ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿ ಪಾಲಕರಿಂದ ವಿಪರೀತ ಡೊನೇಷನ್ ಪಡೆದು ಶಾಲೆಯ ಹೆಸರಿನಲ್ಲಿ ಒಂದು ರಶೀದಿ, ಟ್ರಸ್ಟ್ ಮತ್ತೊಂದು ರಶೀದಿ ನೀಡಿ ಮೋಸಗೊಳಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಡೊನೇಷನ್ ಹಾವಳಿ ಬಗ್ಗೆ ಸರ್ಕಾರದ ಮಟ್ಟದಲ್ಲಿ ಮತ್ತೊಮ್ಮೆ ಚರ್ಚೆಯಾಗಬೇಕು. ಶಿಕ್ಷಣ ಸಂಸ್ಥೆಗಳು ಕೇಳುವ ಡೊನೇಷನ್ ಬಗ್ಗೆ ಸಾರ್ವಜನಿಕರು ವ್ಯಾಪಕವಾಗಿ ಧ್ವನಿ ಎತ್ತಬೇಕು. ಅಂದಾಗ ಮಾತ್ರ ಪರಿಸ್ಥಿತಿ ಹತೋಟಿಗೆ ಬರಲು ಸಾಧ್ಯ ಎಂದರು.