ಡಕೋಟಾ ಬಸ್ ಬಿಟ್ಹಾಕಿ
ಕ.ಪ್ರ. ವಾರ್ತೆ, ಮುದಗಲ್, ಜ.1
ಪಟ್ಟಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಸಂಚರಿಸುವ ಸಾರಿಗೆ ಬಸ್ಗಳು ಸಂಚಾರಕ್ಕೆ ಯೋಗ್ಯತೆ ಇಲ್ಲದಿದ್ದರೂ, ಸಾರಿಗೆ ವ್ಯವಸ್ಥಾಪಕರು ಅವುಗಳನ್ನೇ ಓಡಿಸುತ್ತಿದ್ದಾರೆ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ಪಂಕ್ಚರ್ ಭೀತಿ: ಮುದಗಲ್ನಿಂದ ದೇಸಾಯಿ ಭೋಗಾಪುರ, ತಲೇಖಾನ, ರಾಮತ್ನಾಳ ಗ್ರಾಮಗಳಿಗೆ ಓಡಿಸಲಾಗುತ್ತಿರುವ ಸಾರಿಗೆ ಬಸ್ ಪ್ರಯಾಣಿಕರಿಗೆ ಸುಖಕರ ಪ್ರಯಾಣ ನೀಡುವ ಬದಲು ಅಪಾಯಕಾರಿಯಾಗಿದೆ. ಬಸ್ನ ಸುತ್ತಲು ಗ್ಲಾಸ್ಗಳು ಇರುವುದಿಲ್ಲ, ಟೈರ್ಗಳು ಸವೆದು ಹೋಗಿರುತ್ತವೆ. ಬೇಸಿಗೆ ದಿನಗಳಲ್ಲಿ ಪಂಕ್ಚರ್ ಆದರೆ ಗ್ರಾಮೀಣ ಪ್ರಯಾಣಿಕರು ನಡೆದುಕೊಂಡೇ ತಮ್ಮ ಗ್ರಾಮ ಸೇರುವ ದುಸ್ಥಿತಿ ಇಲ್ಲಿನ ಜನರದ್ದಾಗಿದೆ ಎಂದು ತಮ್ಮ ಗೋಳನ್ನು ಪತ್ರಕರ್ತರಿಗೆ ತಿಳಿಸಿದರು.
ಹೋರಾಟದ ಎಚ್ಚರಿಕೆ: ಮಳೆಗಾಲದಂತೂ ಸಾರಿಗೆ ಬಸ್ನಲ್ಲಿ ಸಂಚರಿಸುವುದು, ನಡೆದುಕೊಂಡು ಹೋಗುವುದು ಎರಡು ಒಂದೇ ಎನ್ನುವಂತಾಗಿದೆ. ಗ್ರಾಮೀಣ ಪ್ರದೇಶಗಳ ಬಗ್ಗೆ ಸಾರಿಗೆ ಅಧಿಕಾರಿಗಳಿಗೆ ನಿರ್ಲಕ್ಷ್ಯವೇ ಹೆಚ್ಚಾಗಿದೆ. ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಶಾಲೆ, ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ತಡವಾಗಿ ಬರುವ ಬಸ್ಗಳಿಗಾಗಿ ಕಾದು ಕುಳಿತುಕೊಳ್ಳಬೇಕು. ಡಕೋಟಾ ಬಸ್ಗಳು ರಸ್ತೆಯಲ್ಲಿ ಕೈ ಕೊಟ್ಟರೆ ಅಂದು ಶಾಲೆಗಳಿಗೆ ಹೋಗುವುದು ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಪ್ರದೇಶದ ಪ್ರಯಾಣಕ್ಕೆ ಯೋಗ್ಯವಾದ ಬಸ್ಗಳನ್ನು ಓಡಿಸಬೇಕು. ಇಲ್ಲದಿದ್ದರೆ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಖಾಸಗಿ ಬಸ್ಗೆ ಆದ್ಯತೆ: ಸಾರಿಗೆ ಬಸ್ಗಳು ಅನೇಕ ಬಾರಿ ಬಸ್ ನಿಲ್ದಾಣದಲ್ಲೇ ಚಾಲೂ ಆಗದಿದ್ದಾಗ ಪ್ರಯಾಣಿಕರು ಬಸ್ಗಳನ್ನು ತಳ್ಳಿ ಚಾಲೂ ಮಾಡಿದ ಪ್ರಸಂಗಗಳೂ ಇವೆ. ಇಷ್ಟಿದ್ದರೂ ಘಟಕ ವ್ಯವಸ್ಥಾಪಕರ ಗ್ರಾಮೀಣ ಪ್ರದೇಶಲ್ಲೇ ಉತ್ತಮ ಸ್ಥಿತಿಯಲ್ಲಿರುವ ಬಸ್ಗಳನ್ನು ಓಡಿಸದೇ ಇರುವುದರಿಂದ ಪ್ರಯಾಣಿಕರು ಖಾಸಗಿ ವಾಹನಗಳಿಗೆ ಮೊರೆ ಹೋಗುವುದು ಸಾಮಾನ್ಯವಾಗಿದೆ. ಗುಣಮಟ್ಟದ ಬಸ್ಗಳನ್ನು ಸಮಯಕ್ಕೆ ಸರಿಯಾಗಿ ಓಡಿಸಿದರೆ ಪ್ರಯಾಣಿಕರು ಬಸ್ಗಳಲ್ಲಿ ಪ್ರಯಾಣ ಮಾಡುತ್ತಾರೆ. ಆದರೆ ಸಾರಿಗೆ ಅಧಿಕಾರಿಗಳು ಡಕೋಟ ಬಸ್ಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಓಡಿಸಿದರೆ, ಕಲೆಕ್ಷನ್ ಕಡಿಮೆಯಾಗಿದೆ ನಷ್ಟವಾಗುತ್ತದೆ. ಇದರಿಂದಾಗಿಯೇ ಬಸ್ ರೂಟ್ಗಳನ್ನೇ ರದ್ದುಗೊಳಿಸಿದ ಉದಾಹರಣೆಗಳು ಇವೆ. ಅಧಿಕಾರಿಗಳು ಈ ಕುರಿತು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳುವರೇ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
--