ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮುಖ್ಯರಸ್ತೆ ಮೈ ಮೇಲೆ ಕೆಸರು

Lingaraj Badiger
Updated On : 2 Jan 2014, 11:55 am

ಕ.ಪ್ರ. ವಾರ್ತೆ, ಮುದಗಲ್, ಜ.1
ಬನ್ನಿಗೋಳ ಗ್ರಾಮದ ಮುಖ್ಯ ರಸ್ತೆಯಲ್ಲಿ ಎಲ್ಲಾ ಚರಂಡಿ ನೀರು ಹರಿಯುತ್ತಿದ್ದರಿಂದ ಕೆಸರು ಗದ್ದೆಯಾಗಿ ಪರಿವರ್ತನೆಗೊಂಡಿದ್ದು, ಸಂಚಾರಕ್ಕೆ ಸಂಚಕಾರ ತಂದಿದೆ.
ಈ ರಸ್ತೆ ಮೂಲಕವೇ ಸುಕ್ಷೇತ್ರ ಅಂಕಲಿಮಠ, ಮಾಕಾಪುರ, ಮುದೇನೂರು ಸೇರಿದಂತೆ ಹತ್ತಕ್ಕೂ ಹೆಚ್ಚು ಹಳ್ಳಿಗಳಿಗೆ ಸಂಪರ್ಕ ಹೊಂದಿದೆ. ಅಲ್ಲದೆ ಕುಷ್ಟಗಿಗೂ ಇದೇ ರಸ್ತೆ ಮೂಲಕ ಹೋಗಬಹುದಾಗಿದೆ. ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನ ಹೊಂದಿದ್ದರೂ, ರಸ್ತೆ ಪಕ್ಕದಲ್ಲಿ ಚರಂಡಿ ನಿರ್ಮಾಣವಾಗಿಲ್ಲ. ಗ್ರಾಮದ ವಿವಿಧ ವಾರ್ಡ್, ಗಲ್ಲಿಗಳಲ್ಲಿ ಉದೋಗ ಖಾತ್ರಿ, ಸುವರ್ಣ ಗ್ರಾಮ ಯೋಜನೆಯಡಿ ಕಾಮಗಾರಿ ಮಾಡಿದ್ದು, ಎಲ್ಲಾ ನೀರು ರಸ್ತೆಯಲ್ಲಿ ಹರಿದು ಬರುತ್ತಿದೆ.
ಮೈ ಮೇಲೆ ಕೆಸರು: ಪರಿಶಿಷ್ಟ ಜಾತಿ, ಜನಾಂಗದ ಓಣಿಯಿಂದ ಹಿಡಿದು ಗ್ರಾಪಂ ಮುಂಭಾಗದ ಮುಖ್ಯ ರಸ್ತೆಯಲ್ಲಿ ಸತತ ನೀರು ಹರಿಯುತ್ತಿದ್ದರಿಂದ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಜಾರಿ ಸಾಕಷ್ಟು ಬಾರಿ ಬಿದ್ದು ಕೈ ಕಾಲುಗಳಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ರಸ್ತೆಯಲ್ಲಿ ನಡೆಯುವಾಗ ವಾಹನಗಳ ಸಂಚಾರದಿಂದ ಕೆಸರು ಮೈ ಮೇಲೆ ಎರಗುತ್ತದೆ. ಚಪ್ಪಲಿ ಹಾಕಿಕೊಂಡು ಈ ರಸ್ತೆಯಲ್ಲಿ ಸಂಚರಿಸುವಂತಿಲ್ಲ.
ರಸ್ತೆ ದುರಸ್ತಿ ಇಲ್ಲ: ಸರ್ಕಾರ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿಗಳ ಮೂಲಕ ಕೋಟಿ ಕೋಟಿ ಅನುದಾನ ನೀಡುತ್ತಿದ್ದರೂ, ಇಲ್ಲಿ ರಸ್ತೆ ದುರಸ್ತಿಗೆ ಗ್ರಾ.ಪಂ. ಮುಂದಾಗಿಲ್ಲ. ಕೇಳಿದರೆ ಆ ರಸ್ತೆ ಲೋಕೋಪಯೋಗಿ ಇಲಾಖೆಗೆ ಸೇರಿದ್ದಾಗಿದ್ದರಿಂದ ದುರಸ್ತಿಗೊಳಿಸಲು ನಮಗೆ ಬರುವುದಿಲ್ಲ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹೇಳುತ್ತಿದ್ದಾರೆ. ಇತ್ತ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆಯನ್ನು ತಿರುಗಿ ನೋಡಿಲ್ಲ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಮೇಲ್ದರ್ಜೆಗೆ: ರಾಷ್ಟ್ರೀಯ ಹೆದ್ದಾರಿ 13 ದೋಟಿಹಾಳದಿಂದ ಮುದೇನೂರು ಮಾರ್ಗವಾಗಿ ಮಾಕಾಪುರ, ಮುದಗಲ್ ಮಟ್ಟೂರು, ಸಂತೇಕೆಲ್ಲೂರ ಮಾರ್ಗವಾಗಿ ಚಿಕ್ಕಹೆಸರೂರುವರೆಗೆ ರಾಜ್ಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಿ ಎರಡು ವರ್ಷಗಳೇ ಗತಿಸಿದ್ದರೂ, ಈವರೆಗೂ ರಸ್ತೆ ಅಭಿವೃದ್ಧಿಗೊಳ್ಳುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ರಾಜ್ಯ ಹೆದ್ದಾರಿಯಾಗಿ ಪರಿವರ್ತನೆಗೊಳ್ಳುವವರೆಗೆ ರಸ್ತೆ ದುರಸ್ತಿಗೊಳಿಸುವಂತೆ ಸಾಕಷ್ಟು ಬಾರಿ ಕ್ಷೇತ್ರದ ಶಾಸಕ ಮಾನಪ್ಪ ವಜ್ಜಲರಿಗೆ ಮನವಿ ಮಾಡಿದರೂ, ಏನು ಪ್ರಯೋಜನೆಯಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಅಪಘಾತಗಳು ಸಂಭವಿಸಿ, ಸಾವು ನೋವುಗಳು ಸಂಭವಿಸುವ ಮೊದಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಾಗಲಿ, ಗ್ರಾಮ ಪಂಚಾಯಿತಿಯವರಾಗಲಿ ರಸ್ತೆ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement