ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಕೈ' ಟೀಕೆಗೆ ರೈತ ಸಂಘದ ಆಕ್ರೋಶ

Lingaraj Badiger
Updated On : 3 Jan 2014, 11:46 am

ಕ.ಪ್ರ. ವಾರ್ತೆ,ರಾಯಚೂರು,ಜ.2
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎನ್.ಎಸ್. ಬೋಸರಾಜು ಅವರು ರೈತ ಚಳವಳಿಗಳನ್ನು ಹತ್ತಿಕ್ಕುವ ಕಾರ್ಯ ಮಾಡುತ್ತಿದ್ದಾರೆ. ರೈತ ಸಂಘ ಬ್ಲ್ಯಾಕ್ಮೇಲ್ ಮಾಡುವ ಸಂಘಟನೆ ಎಂದು ಸಿಎಂ ಭೇಟಿ ವೇಳೆ ಆರೋಪಿಸಿದ್ದು, ಸಂಘವು ಅವರ ವಿರುದ್ಧ ಶೀಘ್ರವೇ ಸಿಎಂಗೆ ದೂರು ಸಲ್ಲಿಸಲಿದೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್ ತಿಳಿಸಿದರು.
ನಗರದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ಮಾನವಿ ಪಟ್ಟಣಕ್ಕೆ ಸಿಎಂ ಸಿದ್ದರಾಮಯ್ಯ ಅವರು ಭೇಟಿ ನೀಡಿದ ವೇಳೆ ತುಂಗಭದ್ರಾ ಎಡದಂಡೆ ಕಾಲುವೆಯಿಂದ ರೈತರ ಬೆಳೆಗೆ ನೀರು ದೊರೆಯದಿರುವ ಬಗ್ಗೆ ರೈತ ಸಂಘದಿಂದ ದೂರಲಾಗಿತ್ತು. ಆನಂತರದಲ್ಲಿ ಈ ಬಗ್ಗೆ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರು ತುಂಗಭದ್ರಾ ನೀರಾವರಿ ಇಲಾಖೆಯ ಹಿರಿಯ ಎಂಜಿನಿಯರ್ ಮಲ್ಲಿಕಾರ್ಜುನ ಅವರನ್ನು ದೂರವಾಣಿಯಲ್ಲಿ ವಿಚಾರಿಸಿ ರೈತರ ಸಮಸ್ಯೆ ಪರಿ ಹರಿಸಲು ಸೂಚಿಸಿದ್ದಾರೆಂದು ತಿಳಿಸಿದರು.
ಅಧಿಕಾರಿಗಳಿಗೆ ಸೂಚನೆ: ಸಚಿವರ ದೂರವಾಣಿ ಕರೆಗೆ ಉತ್ತರಿಸಿದ ಮಲ್ಲಿಕಾರ್ಜುನ ಅವರು ಆನಂತರದಲ್ಲಿ ಮಾನವಿಯ ಕಾಂಗ್ರೆಸ್ ನಾಯಕ ಬೋಸರಾಜು ಅವರಿಗೆ ಕರೆ ಮಾಡಿ ಸಚಿವರ ಆದೇಶದ ಬಗ್ಗೆ ತಿಳಿಸಿದಾಗ ಬೋಸರಾಜು ಅವರು ರಾಜ್ಯ ರೈತ ಸಂಘದ ಮಾತಿಗೆ ಕಿವಿಗೊಡದಂತೆ ಅಧಿಕಾರಿಗೆ ಸೂಚಿಸಿದ್ದಾರೆ. ಈ ಕುರಿತು ತಮ್ಮ ಬಳಿ ಧ್ವನಿಮುದ್ರಿಕೆಯಿದ್ದು ಸೂಕ್ತ ಸಂದರ್ಭದಲ್ಲಿ ಅದನ್ನು ಬಿಡು ಗಡೆಗೊಳಿಸುವುದಾಗಿ ಹೇಳಿದರು.
ಬೋಸರಾಜು ಅವರು ರಾಜ್ಯ ರೈತ ಸಂಘದವರು ಅನಗತ್ಯವಾಗಿ ಹೋರಾಟ ಮಾಡುತ್ತಾರೆ. ಅವರ ವಿಚಾರಗಳಿಗೆ ಗಮನಹರಿ ಸದೇ ಕಾರ್ಯನಿರ್ವಹಿಸಲು ನೀರಾವರಿ ಅಧಿಕಾರಿಗಳಿಗೆ ಸೂಚಿಸಿರುವುದು ದೂರವಾಣಿಯ ಕರೆಯಿಂದ ತಮಗೆ ಗೊತ್ತಾಗಿದೆ. ರೈತರು ಎಡದಂಡೆ ಕಾಲುವೆಯ ಕಡೆಯ ಭಾಗದಲ್ಲಿ ನೀರಾವರಿ ಸಲಹಾ ಸಮಿತಿ ಸೂಚನೆಯಂತೆ ಬತ್ತ ಹೊರತುಪಡಿಸಿ ಹತ್ತಿ, ಮೆಣಸಿನಕಾಯಿ ಮತ್ತಿತರೆ ಬೆಳೆ ಬೆಳೆದಿದ್ದಾರೆ. ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಬತ್ತ ಬೆಳೆಯನ್ನು ಗಮನದಲ್ಲಿರಿಸಿಕೊಂಡು ನೀರಿನ ಹರಿಸುವಿಕೆ ಬಗ್ಗೆ ದಿನಾಂಕ ನಿಗದಿಗೊಳಿಸಲಾಗಿದೆ. ಆದರೆ ಅದರಿಂದ ರೈತರು ನೀರಿಗಾಗಿ ಹೋರಾಟ ನಡೆಸುವಂತಾಗಿದೆ ಎಂದು ಆರೋಪಿಸಿದರು.
ಕೆಪಿಸಿಸಿ ಅಧ್ಯಕ್ಷರಿಗೂ ದೂರು: ಈ ನಿಟ್ಟಿನಲ್ಲಿ ರೈತರು ಹೋರಾಟಕ್ಕೆ ಮುಂದಾದಾಗ ಬೋಸರಾಜು ಅವರು ಸಮಸ್ಯೆ ಪರಿಹರಿಸುವ ಭರವಸೆ ನೀಡಿ ನಂತರ ಅಧಿ ಕಾರಿಗಳಿಗೆ ರೈತ ಸಂಘ ಮತ್ತು ಚಳವಳಿಯ ಬಗ್ಗೆ ಉಡಾಫೆ ಮಾತನಾಡಿದ್ದಾರೆ. ಬೋಸರಾಜು ಅವರು ರಾಜ್ಯ ರೈತ ಸಂಘ ಮತ್ತು ಸಂಘದ ಹಿರಿಯ ಮುಖಂಡರಾಗಿದ್ದ ನಂಜುಂಡಸ್ವಾಮಿ ಅವರ ಬಗ್ಗೆಯೂ ಅವಹೇಳನಕಾರಿ ರೀತಿಯ ಹೇಳಿಕೆ ದೂರವಾಣಿಯಲ್ಲಿ ನೀಡಿದ್ದಾರೆಂದು ಆರೋಪಿಸಿದರು.
ಜಿಲ್ಲಾ ಕಾಂಗ್ರೆಸ್ ಪಕ್ಷನಲ್ಲಿ ಬೋಸರಾಜು ಅವರು ಯಾರನ್ನೂ ಬೆಳೆಯಲು ಬಿಡದಿರುವುದು ಈಗಾಗಲೇ ಸ್ಪಷ್ಟವಾಗಿದೆ.ಇಂಥ ರಾಜಕೀಯ ನಾಯಕರಿಂದ ಜಿಲ್ಲೆಯ ಅಭಿವೃದ್ಧಿ ಅಸಾಧ್ಯ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲಿಯೇ ರಾಜ್ಯ ರೈತ ಸಂಘದ ರಾಜ್ಯ ಸಮಿತಿ ಸಭೆಯಲ್ಲಿ ಬೋಸರಾಜು ವರ್ತನೆ ಮಂಡಿಸಿ ಸಮಗ್ರವಾಗಿ ಚರ್ಚಿಸಿ ಆನಂತರ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ ಸೇರಿ ವಿವಿಧ ಹಂತದ ನಾಯಕರಿಗೆ ಬೋಸರಾಜು ಅವರ ಬಗ್ಗೆ ದೂರು ಸಲ್ಲಿಸಲಾಗುತ್ತದೆ ಎಂದು ಎಚ್ಚರಿಸಿದರು.
ಹಾಗೊಂದು ವೇಳೆ ಕಾಂಗ್ರೆಸ್ ಪಕ್ಷವು ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಬೋಸರಾಜು ವಿರುದ್ಧ ರಾಜ್ಯ ರೈತ ಸಂಘವು ಅವರು ಬಹಿರಂಗವಾಗಿ ಕ್ಷಮೆಯಾಚಿಸುವವರೆಗೆ ಬೃಹತ್ ಹೋರಾಟ ರೂಪಿಸಲಿದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ಪ್ರಮುಖರಾದ ಅಮರಣ್ಣ ಗುಡಿಹಾಳ, ಜಯಪ್ಪಸ್ವಾಮಿ, ವೆಂಕಣ್ಣ ಕಾರಬಾರಿ ಸೇರಿದಂತೆ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement