ಚಾಲನಾ ಪತ್ರ ನೀಡಿಕೆ ಶಿಬಿರ
ದೇವದುರ್ಗ: ಚಾಲನಾ ಪರವಾನಗಿಯಿಲ್ಲದೇ ವಾಹನ ಚಲಾಯಿಸುವುದು ಅಪರಾಧ. ಈ ರೀತಿ ಮಾಡುವುದರಿಂದಲೇ ಅಪಘಾತಗಳ ಪ್ರಮಾಣ ಹೆಚ್ಚುತ್ತಿದೆ ಎಂದ ಶಾಸಕ ವೆಂಕಟೇಶ ನಾಯಕ, ವಾಹನಗಳ ಅಪಘಾತ ತಡೆಯುವ ನಿಟ್ಟಿನಲ್ಲಿ ಜಾಗರೂಕತೆ ಅವಶ್ಯ ಎಂದರು.
ಆಟೋ ಚಾಲಕರ ಸಂಘ ದೇವದುರ್ಗ ಹಾಗೂ ಸಂಚಾರಿ ಪೊಲೀಸ್ ಠಾಣೆ ದೇವದುರ್ಗ ವತಿಯಿಂದ ಸಾರ್ವಜನಿಕ ಕ್ಲಬ್ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಚಾಲನಾ ತರಬೇತಿ ಹಾಗೂ ಚಾಲನಾ ಪತ್ರ ನೀಡುವ ಶಿಬಿರ ಉದ್ಘಾಟಿಸಿ ಮಾತನಾಡಿದರು.
ವಿವಿಧ ವಾಹನಗಳ ಪರವಾನಗಿ ಪಡೆಯಲು 200 ಅರ್ಜಿಗಳು ಸಲ್ಲಿಕೆಯಾಗಿವೆ. ಪಟ್ಟಣದಲ್ಲಿಯೇ ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಂಡಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಡಿವೈಎಸ್ಪಿ ಅನಿತಾ ಹದ್ದಣ್ಣನವರ್ ಮಾತನಾಡಿ, ವಾಹನ ಅಪಘಾತ ಸಂದರ್ಭದಲ್ಲಿ ಚಾಲನಾ ಪತ್ರ ಹೊಂದಿರದಿದ್ದಲ್ಲಿ ಅಂಥವರಿಗೆ ವಿಮೆಯ ಸೌಲಭ್ಯ ದೊರೆಯುವುದಿಲ್ಲ ಎಂದು ಎಚ್ಚರಿಸಿದರು.
ಸಿಪಿಐ ರಮೇಶ ಮೇಟಿ, ಮೋಟಾರ್ ಇನ್ಸಪೆಕ್ಟರ್ ಎಸ್. ನಾಗರಾಜ ನಾಯಕ, ಸಂಚಾರ ಠಾಣೆಯ ಪಿಎಸ್ಐ ರವಿ ಪುರುಷೋತ್ತಮ, ಪಿಎಸ್ಸೈ ಪಿ. ಬಸವರಾಜ, ಅಮರೇಶ, ಕಾಂಗ್ರೆಸ್ ಪಕ್ಷದ ತಾಲೂಕು ಯುವ ಅಧ್ಯಕ್ಷ ಶೇಖ್ ಮುನ್ನಾಭಾಯಿ, ಹಮೀದ್ ನಾಯ್ಕ್ ಸೇರಿ ಪೊಲೀಸ್ ಸಿಬ್ಬಂದಿ ಮತ್ತಿತರರಿದ್ದರು.