ನೀರು ಹರಿವ ಮುನ್ನವೇ ನಾಲೆ ಭಗ್ನ!
ಕ.ಪ್ರ. ವಾರ್ತೆ,ಲಿಂಗಸ್ಗೂರು,ಜ.2
ತಾಲೂಕಿನ ಯರಜಂತಿ ಗ್ರಾಮದ ಸುತ್ತಮುತ್ತಲ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವ ರೈತರ ಜಮೀನುಗಳಿಗೆ ನೀರಾವರಿ ಕಲ್ಪಿಸುವ ನಿಟ್ಟಿನಲ್ಲಿ ನೂತನವಾಗಿ ನಿರ್ಮಿಸಿದ ವಿತರಣಾ ಕಾಲುವೆಗೆ ನೀರು ಹರಿಯುವ ಮುನ್ನವೇ ಬಿರುಕು ಕಾಣಿಸಿಕೊಂಡಿದೆ. ರೈತರ ಕನಸು ನನಸಾಗುವ ಬದಲು ವಿಘ್ನ ಎದುರಾಗಿದೆ.
ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆ 54ನೇ ಕಿಮೀನಿಂದ ಯರಜಂತಿ ಹಾಗೂ ಸುತ್ತಲಿನ ದೊಡ್ಡಿಗಳ ರೈತರ ಜಮೀನುಗಳಿಗೆ ನೀರೊದಗಿಸಲು ಗಿರಿಜನ ಉಪಯೋಜನೆಯಡಿ ರು. 8 ಕೋಟಿ ವೆಚ್ಚದಲ್ಲಿ 2 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸಲು ಕಳೆದ ಮೂರು ವರ್ಷಗಳ ಹಿಂದೆ ಶಾಸಕ ಮಾನಪ್ಪ ವಜ್ಜಲ್ ವಿತರಣಾ ನಾಲೆ ಕಾಮಗಾರಿ ಆರಂಭಕ್ಕೆ ಚಾಲನೆ ನೀಡಿದ್ದರು. ದುರಂತವೆಂದರೆ ಕಾಲುವೆ ಕಾಮಗಾರಿ ಪೂರ್ಣಗೊಳಿಸಿ, ನೀರು ಹರಿಸುವ ಮುನ್ನವೇ ಕೆಲವೆಡೆ ಅಕ್ವಡೇಟರ್, ಸಂಪರ್ಕ ಸೇತುವೆ, ಲೈನಿಂಗ್ ಹಾಗೂ ನಾಲೆಯ ಒಳಹಾಸಿನ ಸಿಮೆಂಟ್ ಕಾಂಕ್ರಿಟ್ ಕಿತ್ತುಹೋಗಿರುವುದು ಕೆಬಿಜೆಎನ್ಎಲ್ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ.
ಕಾಮಗಾರಿ ಗುತ್ತಿಗೆ: ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆಯ 54ನೇ ಕಿಮೀನಿಂದ ಯರಜಂತಿ ಕೂಡು ರಸ್ತೆವರೆಗೆ ಸುಮಾರು 11ಕಿಮೀ ವಿತರಣಾ ಕಾಲುವೆ ನಿರ್ಮಿಸಲು ಟೆಂಡರ್ ಕರೆಯಲಾಗಿತ್ತು. ಸುರಪುರ ಹಾಗೂ ದೇವದುರ್ಗ ತಾಲೂಕಿನ ಗುತ್ತಿಗೆದಾರರು ತಲಾ ರು. 4 ಕೋಟಿ ವೆಚ್ಚದ ಕಾಮಗಾರಿ ತುಂಡು ಗುತ್ತಿಗೆ ಆಧಾರದಲ್ಲಿ ಪಡೆದಿದ್ದರು ಎನ್ನಲಾಗಿದೆ. ವಿತರಣಾ ನಾಲೆ ಕಾಮಗಾರಿಗೆ ಗುಣಮಟ್ಟದ ಸಾಮಗ್ರಿ ಬಳಸದೆ ಹಾಗೂ ಕ್ಯೂರಿಂಗ್ ಸರಿಯಾಗಿ ಮಾಡದ ಕಾರಣ ಕೆಲವೆಡೆ ಲೈನಿಂಗ್, ನೆಲಹಾಸು ಬಿರುಕು ಬಿಟ್ಟಿವೆ. ಈ ಭಾಗದ ಕೆಲ ರೈತರು ತಮ್ಮ ಜಮೀನಿನಲ್ಲಿ ಬೋರ್ವೆಲ್ ಮೂಲಕ ನೀರು ಪಡೆದು ಶೇಂಗಾ ಬಿತ್ತನೆ ಮಾಡಿದ್ದಾರೆ. ವಿತರಣಾ ಕಾಲುವೆಗೆ ನೀರು ಹರಿಸಿದರೆ ಕಾಲುವೆ ಒಡೆದು ಜಮೀನುಗಳಿಗೆ ನೀರು ನುಗ್ಗಿ ಬೆಳೆ ನಷ್ಟ ಸಂಭವಿಸಬಹುದೆಂಬ ಭೀತಿ ರೈತರಲ್ಲಿ ಮನೆ ಮಾಡಿದೆ.
ರೈತರ ಆರೋಪ: ವಿತರಣಾ ಕಾಲುವೆ ಕಾಮಗಾರಿ ಆರಂಭಿಸಲು ಭೂಮಿ ಅಗೆದು ಲೈನಿಂಗ್ ಕಾಮಗಾರಿ ತರಾತುರಿಯಲ್ಲಿ ಪೂರ್ಣಗೊಳಿಸಿದ್ದು, ಇದರಿಂದ ಸಮರ್ಪಕ ನೀರು ಹರಿಯದೆ ಪೋಲಾಗುವ ಸಾಧ್ಯತೆಯಿದೆ. ಕೆಬಿಜೆಎನ್ಎಲ್ ಅಧಿಕಾರಿಗಳು ಕಾಮಗಾರಿ ನಡೆದಾಗ ಪರಿಶೀಲನೆ ನಡೆಸಿ ಗುಣಮಟ್ಟದ ಕಾಲುವೆ ನಿರ್ಮಿಸುವಲ್ಲಿ ನಿರ್ಲಕ್ಷ್ಯ ತೋರಿರುವುದು ಹಲವು ಅನುಮಾನಗಳಿಗೆ ಏಡೆಮಾಡಿ ಕೊಟ್ಟಿದೆ ಎಂಬುದು ರೈತರ ಆರೋಪವಾಗಿದೆ. ಶಾಸಕ ಮಾನಪ್ಪ ವಜ್ಜಲರು ಕೂಡಲೇ ಕಾಮಗಾರಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂಬುದು ರೈತರ ಒತ್ತಾಸೆಯಾಗಿದೆ.