ಬೆಂಬಲ ಬೆಲೆಯಲ್ಲಿ ಹತ್ತಿ, ತೊಗರಿ ಖರೀದಿಗೆ ಆಗ್ರಹ
ರಾಯಚೂರು: ಜಿಲ್ಲೆಯ ಮಾರುಕಟ್ಟೆಯಲ್ಲಿ ಹತ್ತಿ ಮತ್ತು ತೊಗರಿ ಬೆಲೆ ಕುಸಿದಿದ್ದು, ರೈತರ ನೆರವಿಗೆ ಸರ್ಕಾರ ಕೂಡಲೇ ಬರುವ ನಿಟ್ಟಿನಲ್ಲಿ ವೈಜ್ಞಾನಿಕ ಬೆಲೆ ನಿಗದಿಪಡಿಸಿ ಸರ್ಕಾರವೇ ಬೆಂಬಲ ಬೆಲೆಯಲ್ಲಿ ಹತ್ತಿ ಮತ್ತು ತೊಗರಿ ಖರೀದಿಸಬೇಕೆಂದು ಜಿಲ್ಲಾ ಹತ್ತಿ ಬೆಳೆಗಾರರ ರೈತರ ಹೋರಾಟ ಸಮಿತಿ ಅಧ್ಯಕ್ಷ ಚಿನ್ನಯ್ಯ ನಾಯಕ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ, ಸದ್ಯ ಜಿಲ್ಲೆಯ ಮಾರುಕಟ್ಟೆಯಲ್ಲಿ ಹತ್ತಿ ಮತ್ತು ತೊಗರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಆದರಿಂದ ಹತ್ತಿ ಮತ್ತು ತೊಗರಿ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿ ರೈತರು ಪ್ರತಿ ಎಕರೆ ಹತ್ತಿ ಬೆಳೆಯಲು 25ರಿಂದ 30ಸಾವಿರ ವೆಚ್ಚ ಮಾಡುತ್ತಿದ್ದಾರೆ. ರಸಗೊಬ್ಬರ, ಬೀಜ, ಕೂಲಿಕಾರರ ಬೆಲೆ ಏರಿಕೆ ಕಂಡಿದೆ. ಆದರೆ ಮಾರುಕಟ್ಟೆಯಲ್ಲಿ ಬೆಳೆಗಳ ಬೆಲೆ ಮಾತ್ರ ಏರಿಕೆ ಕಂಡಿಲ್ಲ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ದರಕ್ಕೆ ಹತ್ತಿ ಮಾರಾಟ ಮಾಡಿದಲ್ಲಿ ಸಾಕಷ್ಟು ನಷ್ಟ ಅನುಭವಿಸಬೇಕಾಗುತ್ತದೆ ಎಂದು ದೂರಿದರು.
ಉತ್ತಮ ಬೆಲೆಗೆ ಹತ್ತಿ ಖರೀದಿ: ಸದ್ಯ ಗುಜರಾತ್ ಮತ್ತು ಅಹಮದಾಬಾದ್ನಿಂದ ಹತ್ತಿ ಖರೀದಿದಾರರು ಸ್ಥಳೀಯ ಮಾರುಕಟ್ಟೆಗೆ ಆಗಮಿಸಿ ರೈತರಿಂದ ಉತ್ತಮ ಬೆಲೆಗೆ ಹತ್ತಿ ಖರೀದಿಸುತ್ತಿದ್ದಾರೆ. ಅದರಿಂದಾಗಿ ರೈತರಿಗೆ ಸಾಕಷ್ಟು ಅನುಕೂಲವಾಗಿದೆ. ರೈತರಿಗೆ ಉತ್ತಮ ಬೆಲೆಯೂ ದೊರೆಯುತ್ತಿದೆ. ಆದರೆ ಸ್ಥಳೀಯ ಖರೀದಿದಾರರು ಹೊರ ರಾಜ್ಯದ ಖರೀದಿದಾರರು ವಹಿವಾಟು ನಡೆಸಲು ವಿರೋಧಿಸುತ್ತಿದ್ದಾರೆ. ಇಲ್ಲಸಲ್ಲದ ಸಬೂಬು ಹೇಳುತ್ತಿದ್ದಾರೆಂದರು.
ವರ್ತಕರಿಂದ ರೈತರಿಗಾಗುತ್ತಿರುವ ತೊಂದರೆ ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಹತ್ತಿ ಮತ್ತು ತೊಗರಿ ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಖರೀದಿ ಕೇಂದ್ರ ಆರಂಭಿಸಬೇಕು. ತಪ್ಪಿದಲ್ಲಿ ಸಂಘಟನೆಯಿಂದ ಮಾರುಕಟ್ಟೆ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭ ಸಮಿತಿಯ ಪ್ರಮುಖರಾದ ಎಂ. ರಾಮನಗೌಡ, ಕೆ.ನರಸಪ್ಪ, ಎಂ.ಪಾಂಡುರಂಗ, ಡಿ.ಶರಣಪ್ಪಗೌಡ, ಗೋವಿಂದ, ಕೆ.ಹನುಮಂತಪ್ಪ ನಾಯಕ, ವೀರೇಶ ನಾಯಕ, ಕೆ.ಯಂಕಣ್ಣ ಸೇರಿ ಅನೇಕರಿದ್ದರು.