ವಸಂತ ಶೆಟ್ಟಿ ನಿವೃತ್ತಿ; ಸನ್ಮಾನ
ಸಿಂಧನೂರು: ಸರ್ಕಾರಿ ನೌಕರರಿಗೆ ವರ್ಗಾವಣೆ, ನಿವೃತ್ತಿ ಅನಿವಾರ್ಯ ಎಂದು ಎಪಿಎಂಸಿ ಕಾರ್ಯದರ್ಶಿ ಟಿ.ಸಿ. ಗಿರೀಶ ಹೇಳಿದರು. ಅವರು ಎಪಿಎಂಸಿ ಸಭಾಂಗಣದಲ್ಲಿ ಮಾರಾಟ ಸಹಾಯಕ ವಸಂತ ಶೆಟ್ಟಿ ನಿವೃತ್ತರಾದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಗಂಗಾವತಿ, ಲಿಂಗಸ್ಗೂರು ಹೊರತುಪಡಿಸಿದರೆ ಸುಮಾರು 37 ವರ್ಷಗಳ ಕಾಲ ಸಿಂಧನೂರಿನಲ್ಲಿ ವಸಂತ ಶೆಟ್ಟಿ ಸೇವೆ ಸಲ್ಲಿಸಿದ್ದಾರೆ. ಅವರು ನಿರ್ವಿವಾದಿತವಾಗಿ ಎಲ್ಲರೊಂದಿಗೆ ಬೆರೆತು ಸೇವೆ ಸಲ್ಲಿಸಿದ್ದರು. ಅವರ ನಿವೃತ್ತ ಜೀವನ ಸುಖಮಯವಾಗಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ವರ್ತಕರ ಸಂಘದ ಅಧ್ಯಕ್ಷ ಕಾನಿಹಾಳ ಮಲ್ಲನಗೌಡ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಎಪಿಎಂಸಿ ಅಧ್ಯಕ್ಷ ಸಣ್ಣಕರಿಯಪ್ಪ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಪಿಎಂಸಿ ಸಹಕಾರ್ಯದರ್ಶಿ ನರಸಿಂಹ ರೆಡ್ಡಿ, ರಾಜ್ಯ ನೌಕರರ ಒಕ್ಕೂಟದ ಅಧ್ಯಕ್ಷ ದೊಡ್ಡನಗೌಡ ಗುಂಜಳ್ಳಿ, ನಿವೃತ್ತ ನೌಕರರಾದ ಎಸ್.ಕೆ.ಸೌದಿ, ಹಂಪಯ್ಯ, ತಿಮ್ಮಪ್ಪ, ತೂಕದವರ ಸಂಘದ ಅಧ್ಯಕ್ಷ ಪಂಪನಗೌಡ, ವರ್ತಕರಾದ ಯಾಡಕಿ ನಾಗರಾಜ, ಪ್ರಕಾಶ ಶೇಟ್ ಎಂ.ಸಂಗಪ್ಪ, ವಿಠಲರಾವ್ ಮತ್ತಿತರು ಪಾಲ್ಗೊಂಡಿದ್ದರು. ತಿಮ್ಮಪ್ಪ,ಬಸವರಾಜ ಪ್ರಾರ್ಥಿಸಿದರು. ನಿವೃತ್ತ ನೌಕರ ಮನೋಹರರಾವ್ ಕುಲಕರ್ಣಿ ನಿರೂಪಿಸಿ, ವಂದಿಸಿದರು.