ವಿಜೃಂಭಣೆಯ ಉಚ್ಛ್ರಾಯ ಮಹೋತ್ಸವ; ಮೆರವಣಿಗೆ
ಮಸ್ಕಿ: ಪಟ್ಟಣದ ಮೇನ್ ಬಜಾರದಲ್ಲಿರುವ ಕಟ್ಟೆ ದುರ್ಗಾದೇವಿ ಜಾತ್ರೆ ಬುಧವಾರ ಉಚ್ಛ್ರಾಯ ಎಳೆಯುವ ಮೂಲಕ ವಿಜೃಂಭಣೆಯಿಂದ ನೆರವೇರಿತು. ಜಾತ್ರಾ ಮಹೋತ್ಸವದ ಅಂಗವಾಗಿ ಅಂದು ಬೆಳಗ್ಗೆ ದೇವಿಯ ಪೂಜೆ ಹಾಗೂ ಭಕ್ತಾದಿಗಳಿಂದ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಕಟ್ಟೆ ದುರ್ಗಾದೇವಿ ದೇವಸ್ಥಾನದಿಂದ ಸಂಜೆ ದೇವಿ ಉತ್ಸವಮೂರ್ತಿಯ ಉಚ್ಛ್ರಾಯವು ಸಂತೆ ಬಜಾರದ ಕಾಳಮ್ಮನ ದೇವಸ್ಥಾನದವರೆಗೆ ಡೊಳ್ಳು ಕುಣಿತದ ಮೆರವಣಿಗೆಯೊಂದಿಗೆ ಸಾಗಿತು. ಭಕ್ತಾದಿಗಳು ಹೂವು, ಹಣ್ಣು, ಉತ್ತತ್ತಿಗಳನ್ನು ಉಚ್ಛ್ರಾಯಕ್ಕೆ ಅರ್ಪಿಸಿ ಭಕ್ತಿ ಸಮರ್ಪಿಸಿದರು. ಈ ಸಂದರ್ಭ ದೇವಸ್ಥಾನ ಸಮಿತಿ ಅಧ್ಯಕ್ಷ ರಾಜಾನಾಯ್ಕ, ಸಮಿತಿಯ ಸದಸ್ಯರು ಹಾಗೂ ಎಲ್ಲಾ ಧರ್ಮದ ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.