ಈಶಾನ್ಯ ಸಾರಿಗೆಯ ಶಾನ್ದಾರ್ ಸ್ಲೀಪರ್
ಶೇಷಮೂರ್ತಿ ಅವಧಾನಿ
ಕ.ಪ್ರ. ವಾರ್ತೆ ಗುಲ್ಬರ್ಗ ಜ.3
ಸಾರಿಗೆ ಸೇವೆ ನೀಡುವಲ್ಲಿ ಯಾರಿಗೇನ್ ಕಮ್ಮಿ ಇಲ್ಲ ಎಂದು ಮುನ್ನುಗ್ಗುತ್ತಿರುವ ಈಶಾನ್ಯ ಸಾರಿಗೆ ಸಂಸ್ಥೆ (ಎನ್ಇಕೆಆರ್ಟಿಸಿ) ಇದೀಗ ಯಾದಗಿರಿಯಲ್ಲಿರುವ ತನ್ನ ಪ್ರಾದೇಶಿಕ ಕಾರ್ಯಾಗಾರದಲ್ಲಿನ ಲಭ್ಯ ಸವಲತ್ತುಗಳನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಂಡು ಇದೇ ಮೊದಲ ಬಾರಿಗೆ ನಾನ್ ಏಸಿ ಸ್ಲೀಪರ್ ಬಸ್ಗಳ ಕವಚ ನಿರ್ಮಾಣದಲ್ಲಿ ಯಶಸ್ಸು ಕಂಡಿದೆ.
ಅಪಘಾತಕ್ಕೀಡಾದ ಬಸ್ಗಳ ದುರಸ್ಥಿ, ಸ್ಥಳೀಯವಾಗಿ ಕೆಟ್ಟು ಕೆರ ಹಿಡಿದಂತಹ ಬಸ್ಗಳ ಕವಚ ಮರು ನಿರ್ಮಾಣದಂತಹ ಚಿಲ್ಲರೆ ಕೆಲಸಗಳಿಗಷ್ಟೇ ಸೀಮಿತವಾಗಿದ್ದ ಎನ್ಇಕೆಆರ್ಟಿಸಿ ಯಾದಗಿರಿ ಪ್ರಾದೇಶಿಕ ಕಾರ್ಯಾಗರದಿಂದ ಎಲ್ಲರ ಕಣ್ಣು ಕುಕ್ಕುವಂತಹ, ವಿಶಿಷ್ಟ ವಿನ್ಯಾಸದ ಕವಚವಿರುವ ವಾಹನಗಳು ಉತ್ಪಾದನೆಯಾಗಿದ್ದರಿಂದ ಈಶಾನ್ಯ ಸಾರಿಗೆಯಲ್ಲಿನ ಈ ಕಾರ್ಯ ಹೊಸ ದಾಖಲೆ ಬರೆದಿದೆ.
ಇದುವರೆಗೂ ಎಸಿ ಅಥವಾ ನಾನ್ ಏಸಿ ಬಸ್ಸುಗಳ ಕವಚ ನಿರ್ಮಾಣಕ್ಕೆ ಹೊರಗಡೆಯ ಸಂಸ್ಥೆ, ತಂತ್ರಜ್ಞರನ್ನೇ ಅವಲಂಬಿಸಿದ್ದ ಈಶಾನ್ಯ ಸಾರಿಗೆ ಇದೇ ಮೊದಲ ಬಾರಿಗೆ ಉತ್ತಮ ಹಾಗೂ ಪ್ರ.ಯಾಣಿಕರ ಸ್ನೇಹಿ, ಹೊಸ ಸವಲತ್ತುಗಳಿರುವ ವಾಹನಗಳನ್ನು ವಿನ್ಯಾಸ ಮಾಡುವ ಮೂಲಕ ಹೊಸತನಕ್ಕೆ ಮುನ್ನುಡಿ ಬರೆದಿದೆ. ಈಶಾನ್ಯ ಸಾರಿಗೆ ಇದೇ ಮೊದಲ ಬಾರಿಗೆ ನಾನ್ ಎಸಿ (ಹವಾನಿಯಂತ್ರಿತವಲ್ಲದ) ಸ್ಲೀಪರ್ ಸೇವೆಗೆ ಯಾದಗಿರಿ ಕಾರ್ಯಾಗಾರದಲ್ಲಿ ವಿನ್ಯಾಸಗೊಂಡಿರುವ ಬಸ್ಸುಗಳನ್ನೇ ಓಡಿಸಲು ಮುಂದಾಗಿದೆ.
ಸಂಸ್ಥೆಗೂ ಉಳಿತಾಯ: ಯಾದಗಿರಿ ಕಾರ್ಯಾಗಾರ ಆರಂಭವಾಗಿ ಒಂದೂವರೆ ದಶಕ ಕಳೆದಿದ್ದರೂ ಇಲ್ಲಿಯವರೆಗೂ ಹೊಸ ಕವಚ ವಿನ್ಯಾಸದ ಸಾಹಸ ಅಲ್ಲಿ ನಡೆದಿರಲಿಲ್ಲ. ಆದರೆ ಸಂಸ್ಥೆ ಎಂಡಜಿ ಜಿಎನ್ ಶಿವಮೂರ್ತಿ ಇಲ್ಲಿನ ಸೌಲಭ್ಯಗಳನ್ನು ಬಳಸಿಕೊಂಡು ಅದ್ಯಾಕೆ ಕವಚ ವಿನ್ಯಾಸ ಇಲ್ಲೇ ಕೈಗೆತ್ತಿಕೊಳ್ಳಬಾರದು ಎಂದು ಚಿಂತಿಸಿ ಮುಂದಡಿ ಇಟ್ಟ ಫಲವೇ ಇಂದು ನಾನ್ ಎಸಿ ಸ್ಲೀಪರ್ ಬಸ್ಗಳ ಕವಚ ವಿನ್ಯಾಸದ ರಂಗದಲ್ಲಿ ಈಶಾನ್ಯ ಸಾರಿಗೆ ಹೊಸ ಸಾಧನೆ ಮಾಡುವಂತಾಗಿದೆ.
ಇನ್ನೊಂದು ಗಮನಾರ್ಹ ಸಂಗತಿ ಎಂದರೆ ಯಾದಗಿರಿ ಕಾರ್ಯಾಗಾರದಲ್ಲಿ ವಿನ್ಯಾಸಗೊಂಡ ಬಸ್ಸುಗಳಿಂದ ಸಂಸ್ಥೆ ಖಜಾನೆಗೂ ಹೆಚ್ಚಿನ ಹೊರೆ ಬೀಳದು ಹೊರಗಡೆ ಸಂಸ್ಥೆ ಇಂತಹ ಬಸ್ಸುಗಳನ್ನು ನಿರ್ಮಿಸಿ ತರಲು ತಲಾ 28. 41 ಲಕ್ಷ ರುಪಾಯಿ ವೆಚ್ಚ ಮಾಡುತ್ತಿತ್ತು. ಇದೀಗ ಯಾದಗಿರಿ ಕಾರ್ಯಾಗಾರದಲ್ಲಿ ತಾನೇ ಉತ್ಪಾದಿಸಿರುವ ಬಸ್ಸಿಗೆ ಸಂಸ್ಥೆ ಮಾಡಿದ್ದು ತಲಾ 24 ಲಕ್ಷ ರುಪಾಯಿ ವೆಚ್ಚ ಮಾತ್ರ.
ಪ್ರತಿ ನಾನ್ ಎಸಿ ಬಸ್ಸಿನ ಮೇಲೆ 4 ಲಕ್ಷ ರುಪಾಯಿನಷ್ಟು ಉಳಿತಾಯವೂ ಆಗಿದೆ. ಹೀಗಾಗಿ ತಾನೇ ವಿನ್ಯಾಸಗೊಳಿಸುವ ಬಸ್ಸುಗಳಿಂದ ಸಂಸ್ಥೆಯ ಆರ್ಥಿಕ ಮಿತವ್ಯಯ ಸಾಧಿಸಲು ಅನುಕೂಲವಾದಂತಾಗಿದೆ.
ಅಶೋಕ ಲೇಲ್ಯಾಂಡ್ ಕಂಪನಿಯ ಚಸ್ಸಿಗಳನ್ನು ಖರೀದಿಸಿ ಅವುಗಳಿಗೆ ಹೊಸ ತಂತ್ರಜ್ಞಾನ ಆಧಾರದ ಸಕಲ ಸವಲತ್ತುಗಳೊಂದಿಗೆ ಆಕರ್ಷಕ ವಿನ್ಯಾಸದ ವಾಹನ ಕವಚ, ಒಳಗಡೆಯ ಆಸನ ಸೌಕರ್ಯ ಕಲ್ಪಿಸಲಾಗಿರುವುದು ಬಸ್ಸಿನ ವಿಶೇಷ.
ನಾನ್ ಎಸಿ ವಾಹನಗಳ ಸೇವೆ ಗುಲ್ಬರ್ಗದಿಂದ ದಾವಣಗೇರೆಗೆ ವಿಸ್ತರಿಸಿರುವ ಸಂಸ್ಥೆ ಮಧ್ಯಮ ವರ್ಗದ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡೇ ದರ ನಿಗದಿಪಡಿಸಿದೆ.
ನಾನ್ ಎಸಿ ಸ್ಲೀಪರ್ ವಾಹನಗಳು ಸಂಸ್ಥೆಯ ನುರಿತ ತಾಂತ್ರಿಕ ತಂತ್ರಜ್ಞರು ಅತ್ಯಂತ ಸುಂದರವಾಗಿ ಮತ್ತು ಸುಸಜ್ಜಿತವಾಗಿ ವಿನ್ಯಾಸಗೊಳಿಸಿ ಸಂಸ್ಥೆಯ ಪ್ರಾದೇಶಿಕ ಕಾರ್ಯಾಗಾರಕ್ಕೆ ಹೆಚ್ಚಿನ ಮಹತ್ವ ತಂದುಕೊಟ್ಟಿದ್ದಾರೆ.
ಆರ್ಥಿಕ ಮಿತವ್ಯಯ
ಹೊರಗಡೆ ಪ್ರತಿ ಬಸ್ಸಿಗೆ 28.41 ಲಕ್ಷವಾಗುತ್ತಿತ್ತು. ಈಗ 24 ಲಕ್ಷ ವೆಚ್ಚವಾಗಿದೆ. ಬರುವ ದಿನಗಳಲ್ಲಿ ಈ ಕಾರ್ಯಾಗಾರಕ್ಕೆ ಇನ್ನೂ ಬಲ ನೀಡಿ ಹೆಚ್ಚಿನ ಸಾಧನೆ ಮಾಡಲಾಗುತ್ತದೆ. ಈಶಾನ್ಯ ಸಾರಿಗೆಯಲ್ಲಿಯೇ ವಾಹನ ಕವಚದ ಯಶಸ್ಸಿ ನಿರ್ಮಾಣ ಕಾರ್ಯ ಕೈಗೂಡಿದ್ದು ಹೊಸ ಹುರುಪು ಮೂಡಿಸಿದೆ.
- ಜಿ.ಎನ್. ಶಿವಮೂರ್ತಿ, ಎಂಡಿ, ಎನ್ಇಕೆಆರ್ಟಿಸಿ, ಗುಲ್ಬರ್ಗ
ವಾಹನದ ವೈಶಿಷ್ಟ್ಯತೆ
ಚ ಸುಖಕರ ಪ್ರಯಾಣಕ್ಕಾಗಿ ವಾಹನಗಳ ಮುಂದುಗಡೆ ಮತ್ತು ಹಿಂದುಗಡೆ ಏರ್ಸ್ಪೇನ್ಸರ್ಗಳ ಅಳವಡಿಕೆ
ಚ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ವಾಹನಗಳ ಎರಡೂ ಬದಿ ತುರ್ತುನಿರ್ಗಮನ ದ್ವಾರಗಳು
ಚ ಆರಾಮದಾಯಕ ಆಸನಗಳಿಗೆ ಉತ್ತಮ ದರ್ಜೆ ಮೇಂಬ್ರೆನ್ ಫೋಮ್ ಹಾಸಿಗೆ
ಚ ವಾಹನಕ್ಕೆ 30 ಆಸನಗಳ ಅಳವಡಿಕೆ, ಪ್ರತಿ ಆಸನಕ್ಕೆ ಮೊಬೈಲ್ ಚಾರ್ಜರ್, ಓದಲು ದೀಪದ ವ್ಯವಸ್ಥೆ
ಚ ಅವಘಡ, ತೊಂದರೆ, ಬೆಂಕಿ ಸೂಚನೆ ಕಂಡರೆ ಚಾಲಕ ಸೈರನ್ನಿಂದ ಪ್ರಯಾಣಿಕರಿಗೆ ಎಚ್ಚರಿಕೆ ನೀಡುವ ಸೌಕರ್ಯ