ಎಡದಂಡೆಯಿಂದ ರೈತರಿಗೆ ಸಮರ್ಪಕ ನೀರಿಗೆ ಸರ್ಕಾರ ಬದ್ಧ: ಸಚಿವ ಭರವಸೆ
ಕ.ಪ್ರ. ವಾರ್ತೆ ರಾಯಚೂರು ಜ.4
ತುಂಗಭದ್ರಾ ಎಡದಂಡೆ ಕಾಲುವೆಯಿಂದ ರೈತರಿಗೆ ನೀರಿನ್ನು ದೊರಕಿಸಲು ಎಲ್ಲ ರೀತಿಯ ಪ್ರಯತ್ನ ಜಾರಿಯಲ್ಲಿದೆ. ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಬೋಸರಾಜು ಅವರು ರಾಜ್ಯ ರೈತಸಂಘದ ಕುರಿತು ನೀಡಿರುವ ಅವಹೇಳನಕಾರಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ಗೆ ಸಮಸ್ಯೆ ಬಗ್ಗೆ ಮನವರಿಕೆ ಮಾಡಲಾಗಿದೆ. ಅವರು ನೀರು ಒದಗಿಸುವ ನಿಟ್ಟಿನಲ್ಲಿ ಸಮ್ಮತಿಸಿದ್ದಾರೆ. ನೀರೊದಗಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ. ಯಾರೋ ಹೇಳಿದರೆಂದು ನೀರು ನಿಲುಗಡೆ ಮಾಡಲಾಗದು ಎಂದು ತಿಳಿಸಿದರು.
ತಮಗೆ ಮಾಹಿತಿಯಿಲ್ಲ: ಕಾಂಗ್ರೆಸ್ ಮುಖಂಡ ಬೋಸರಾಜು ರಾಜ್ಯ ರೈತಸಂಘದ ಕುರಿತು ನೀಡಿದ್ದಾರೆಂದು ಹೇಳಲಾಗುತ್ತಿರುವ ಅವಹೇಳನಕಾರಿ ಹೇಳಿಕೆಯ ಬಗ್ಗೆ ತಮಗೆ ಮಾಹಿತಿಯಿಲ್ಲ. ಹಾಗೆಯೇ ಅದರ ಬಗ್ಗೆ ವಿವಾದ ಸೃಷ್ಟಿಸುವುದು ಬೇಡ ಎಂದ ಅವರು, ಸಿಎಂ ಮತ್ತು ಜಲಸಂಪನ್ಮೂಲ ಸಚಿವರ ಹೆಸರು ಬಳಕೆ ಮಾಡಿಕೊಂಡು ಏನನ್ನೂ ಹೇಳುವುದು ಅಸಾಧ್ಯ ಎಂದರು.
ರೈತರಿಗೆ ನೆರವು: ಈಗಾಗಲೇ ಅನೇಕ ಬಾರಿ ತಾವು ರೈತರ ಸಮಸ್ಯೆಗಳಿಗೆ ಸ್ಪಂದಿಸಿ, ಜಿಲ್ಲಾಡಳಿತದ ನೆರವಿನಿಂದ ರೈತರಿಗೆ ನೆರವು ಕಲ್ಪಿಸುವ ಕೆಲಸ ಮಾಡಿದ್ದಾಗಿ ತಿಳಿಸಿದ ಅವರು, ಹಿರಿಯ ಎಂಜಿನಿಯರ್ ಜೊತೆ ಸಮಸ್ಯೆ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಹೇಳಿದರು.
ರಾಜ್ಯ ರೈತಸಂಘದ ಬಗ್ಗೆ ಅವಹೇಳನಕಾರಿ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ. ಯಾರಿಗೂ ಈ ಕುರಿತು ಹೇಳಿಕೆ ನೀಡುವ ಅಧಿಕಾರವಿಲ್ಲ. ಆದರೆ ಬೋಸರಾಜು ಅವರು ಈಗಾಗಲೇ ಹಾಗೆ ಮಾತನಾಡಿಲ್ಲ ಎಂದು ಆರೋಪ ನಿರಾಕರಿಸಿದ್ದಾರೆಂದೂ ಅವರು ಸ್ಪಷ್ಟಪಡಿಸಿದರು.
ನಗರಸಭೆಯಲ್ಲಿ ನಡೆದಿರುವ ತಡೆರಹಿತ ವಿದ್ಯುತ್ ಮಾರ್ಗ ನಿರ್ಮಾಣ ಕಾಮಗಾರಿಯಲ್ಲಿನ ಅಕ್ರಮದ ಕುರಿತು ಪ್ರತಿಕ್ರಿಯಿಸಿದ ಅವರು, ಈಗಾಗಲೇ ತನಿಖಾ ವರದಿಯಲ್ಲಿ ಹೆಸರಿಸಲಾದ ಅಧಿಕಾರಿಗಳಿಗೆ ನೊಟೀಸ್ ಜಾರಿ ಮಾಡಲಾಗಿದೆ. ಉತ್ತರ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾಡಳಿತ ಭವನ ನಿರ್ಮಾಣ ಸ್ಥಳದ ಬಗ್ಗೆ ಅಪಸ್ವರ ಕೇಳಿಬಂದಿದೆ. ಈ ಬಗ್ಗೆ ಎಲ್ಲರ ಅಭಿಪ್ರಾಯ ಪಡೆದು ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ. ನಗರಸಭೆಯಲ್ಲಿ ಆಡಳಿತ ಸುಧಾರಣೆಗೆ ಶೀಘ್ರದಲ್ಲಿಯೇ ಪ್ರತ್ಯೇಕ ಸಭೆ ನಡೆಸಿ ಪರಿಶೀಲಿಸುವುದಾಗಿ ತಿಳಿಸಿದರು.