ಕಳಪೆ ಕಾಮಗಾರಿ; ಕ್ರಮಕ್ಕೆ ಜೈಕರವೇ ಆಗ್ರಹ
ರಾಯಚೂರು: ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಮಾನವಿ ತಾಲೂಕಿನ ಅಡವಿಖಾನಾಪುರದಲ್ಲಿ ನಡೆದ ಕಾಮಗಾರಿ ಕಳಪೆಯಾಗಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜೈ ಕರವೇ ಮಾನವಿ ತಾಲೂಕು ಯುವ ಘಟಕ ಒತ್ತಾಯಿಸಿದೆ. ಈ ಕುರಿತು ಯೋಜನೆಯ ಕಾರ್ಯನಿರ್ವಾಹಕ ಎಂಜಿನಿಯರರಿಗೆ ದೂರು ಸಲ್ಲಿಸಿರುವ ಸಂಘಟನೆಯ ತಾಲೂಕಾಧ್ಯಕ್ಷ ಕಾಶೀನಾಥ್ ಕುರ್ಡಿ, ನಗರ ಅಧ್ಯಕ್ಷ ಈಶ್ವರ ಮತ್ತಿತರರು ತಾಲೂಕಿನ ಅಡವಿ ಖಾನಾಪುರದಿಂದ ಮಟಮಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ನಿರ್ಮಾಣ ಕಾಮಗಾರಿ ತೀರಾ ಕಳಪೆಯಾಗಿದೆ. ಎಂ.ಈರಣ್ಣ ಎಂಬುವವರು ಗುತ್ತಿಗೆ ಪಡೆದಿದ್ದು ಅವರು ಕಾಮಗಾರಿಯನ್ನು ಸರ್ಕಾರ ನಿಗದಿಪಡಿಸಿದ ಕಾಲಮಿತಿಯೊಳಗೆ ಮುಗಿಸಿದ್ದರೂ ಕಾಮಗಾರಿ ಮಾತ್ರ ಕಳಪೆಯಾಗಿದೆ ಎಂದು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೇ ಸರ್ಕಾರವು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಸಂಘಟನೆಯಿಂದ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಈ ವೇಳೆ ಸಂಘಟನೆಯ ರೇವಣಪ್ಪ ನಾಯಕ, ವಸಂತಕುಮಾರ, ವೆಂಕಟಸ್ವಾಮಿ ಮತ್ತಿತರರು ಇದ್ದರು.