ಕಾಲುವೆ ಕಾಮಗಾರಿ ಪರಿಶೀಲಿಸಿದ ಅಧಿಕಾರಿಗಳು
ಲಿಂಗಸ್ಗೂರು: ತಾಲೂಕಿನ ರಾಂಪೂರ ಏತನೀರಾವರಿ ಯೋಜನೆಯ ಕಡೆಯ ಭಾಗದಲ್ಲಿರುವ ಕಾಲುವೆ ಕಾಮಗಾರಿ ಸ್ಥಳಕ್ಕೆ ಕೆಬಿಜೆಎನ್ಎಲ್ ಕಾರ್ಯನಿರ್ವಾಹಕ ಅಭಿಯಂತರ ಮೃತ್ಯುಂಜಯ ಈಚೆಗೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು. ಈ ವೇಳೆ ಕುಪ್ಪಿಗುಡ್ಡ ಗ್ರಾಮಸ್ಥರು ಮುತ್ತಿಗೆ ಹಾಕಿ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಸರ್ಜಾಪೂರ, ಕುಪ್ಪಿಗುಡ್ಡ, ಗುಡದನಾಳ ಗ್ರಾಮಗಳ ಜಮೀನುಗಳಿಗೆ ನೀರಾವರಿ ಕಲ್ಪಿಸಲು ಸುಮಾರು 12 ಕೋಟಿ ವೆಚ್ಚದಲ್ಲಿ 13 ಕಿಮೀ ಉದ್ದದ ಕಾಲುವೆ ನಿರ್ಮಿಸಲಾಗುತ್ತಿದೆ. ಕಾಮಗಾರಿಗೆ ಬಳಸುವ ಮಣ್ಣಲ್ಲಿ ಸುಣ್ಣದ ಅಂಶವಿದ್ದು, ಇದರಿಂದ ಗುಣಮಟ್ಟ ಕಾಪಾಡುವುದು ಅಸಾಧ್ಯ. ನ್ಯೂನತೆಗಳನ್ನು ಸರಿಪಡಿಸಿ ಗುಣಮಟ್ಟದ ಕಾಮಗಾರಿ ನಡೆಸುವಂತೆ ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗುವುದೆಂದು ಸ್ಪಷ್ಟಪಡಿಸಿದರು.
ಸಿಂಧನೂರು; ಜೆಡಿಎಸ್ನಿಂದ ಇಂದು ರಕ್ತದಾನ ಶಿಬಿರ
ಸಿಂಧನೂರು: ಜೆಡಿಎಸ್ ತಾಲೂಕು ಘಟಕದಿಂದ ಮಾಜಿ ಶಾಸಕ ವೆಂಕಟರಾವ್ ನಾಡಗೌಡ ಅವರ ಹುಟ್ಟುಹಬ್ಬದ ನಿಮಿತ್ತ ಜ.5ರಂದು ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಪಕ್ಷದ ಅಧ್ಯಕ್ಷ ಎಂ.ಲಿಂಗಪ್ಪ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿ, ಅಂದು ಬೆ.11ಕ್ಕೆ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು, ನೂರಾರು ಜೆಡಿಎಸ್ ಕಾರ್ಯಕರ್ತರು ಶಿಬಿರದಲ್ಲಿ ರಕ್ತದಾನ ಮಾಡಲಿದ್ದಾರೆ. ನಂತರ ಅಂಬೇಡ್ಕರ್ ಹಾಸ್ಟೆಲ್ಗೆ ತೆರಳಿ ನೋಟ್ಬುಕ್, ಪೆನ್ ವಿತರಿಸಲಾಗುವುದು ಎಂದರು. ಅದೇ ದಿನ ಸಂಜೆ ತಾಲೂಕಿನ ಶಾಂತಿನಗರದಲ್ಲಿ ಜೆಡಿಎಸ್ ಶಾಸಕರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡವರು ಮತ್ತು ಪ್ರಮುಖ ಮುಖಂಡರನ್ನು ಸನ್ಮಾನಿಸಿ ಗೌರವಿಸಲಾಗುವುದು. ಚೆನ್ನಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ವಿತರಿಸಲಾಗುತ್ತದೆ ಎಂದು ಹೇಳಿದರು. ಧರ್ಮನಗೌಡ ಮಲ್ಕಾಪುರ, ಸಾಯಿರಾಮಕೃಷ್ಣ, ನಾಗೇಶ ಶಾಂತಿನಗರ, ಸುಮಿತ್ ತಡಕಲ್ ಇದ್ದರು.