ಗಂಭೀರ ದುರ್ನಡತೆ ಸಾಬೀತು; ಸೇವೆಯಿಂದ ವಜಾ
ರಾಯಚೂರು: ದೇವದುರ್ಗ ಪೊಲೀಸ್ ಠಾಣೆಯಲ್ಲಿ ಕರ್ತವ್ಯದ ಮೇಲಿದ್ದಾಗ ಎಸಗಿದ ಅಪರಾಧ ಸಾಬೀತಾಗಿ ನ್ಯಾಯಾಲಯದಿಂದ ಶಿಕ್ಷೆ ಪ್ರಕಟಗೊಂಡ ಹಿನ್ನೆಲೆ ತಾಲೂಕಿನ ಯಾಪಲದಿನ್ನಿ ಠಾಣೆಯ ಸಿಬ್ಬಂದಿ ರುಕ್ಮುದ್ದೀನ್ ಎಂಬುವವರನ್ನು ಸೇವೆಯಿಂದ ವಜಾಗೊಳಿಸಿ ಎಸ್ಪಿ ಎಂ.ಎನ್. ನಾಗರಾಜ್ ಆದೇಶ ಹೊರಡಿಸಿದ್ದಾರೆ. ದೇವದುರ್ಗ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆ ರುಕ್ಮುದ್ದೀನ್ ಅವರ ವಿರುದ್ಧ ಎಸ್ಸಿ, ಎಸ್ಟಿ ಕಾಯಿದೆ ಅಡಿ ಅಪರಾಧ ಎಸಗಿದ ಬಗ್ಗೆ ದೂರು ದಾಖಲಾಗಿತ್ತು. ಈ ಕುರಿತು ಜಿಲ್ಲಾ ವಿಶೇಷ ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ನ್ಯಾಯಾಧೀಶರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ಒಂದು ವರ್ಷ ಸಜೆ ಮತ್ತು 6 ಸಾವಿರ ದಂಡ ವಿಧಿಸಿ ತೀರ್ಪಿತ್ತಿದ್ದರು. ಈ ತೀರ್ಪಿನ ಹಿನ್ನೆಲೆಯಲ್ಲಿ ಸೇವೆಯಲ್ಲಿ ಗಂಭೀರ ದುರ್ನಡತೆ ಪ್ರದರ್ಶನದ ಕಾರಣಕ್ಕೆ ರುಕ್ಮುದ್ದೀನ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.